ಜಿಲ್ಲೆ

ಜನರಿಗೆ ನಮ್ಮ ಕ್ಲಿನಿಕ್ ಪ್ರಯೋಜನವಾಗಲಿ

ಹುಬ್ಬಳ್ಳಿ: ನಗರದ ಗೋಪನಕೊಪ್ಪದ ಮಹಾಲಕ್ಷ್ಮೀ ಬಡಾವಣೆಯಲ್ಲಿ ಧಾರವಾಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ತೆರೆಯಲಾದ ನಮ್ಮ ಕ್ಲಿನಿಕ್ ಅನ್ನು ಶಾಸಕ ಮಹೇಶ ಟೆಂಗಿನಕಾಯಿ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ನಗರಗಳಲ್ಲಿ ವಾಸವಿರುವ ಬಡವರಿಗೆ, ದಿನಗೂಲಿ ಕಾರ್ವಿುಕರಿಗೆ ಹಾಗೂ ದುರ್ಬಲ ವರ್ಗದವರಿಗೆ ಸುಲಭವಾಗಿ ವೈದ್ಯಕೀಯ ಸೌಲಭ್ಯ ದೊರಕುವ ನಿಟ್ಟಿನಲ್ಲಿ ಆರಂಭಿಸಲಾದ ನಮ್ಮ ಕ್ಲಿನಿಕ್​ನಲ್ಲಿ ರೋಗಿಗಳಿಗೆ ಪ್ರಾಥಮಿಕ ಹಂತದಲ್ಲಿಯೇ ಉತ್ತಮ ಚಿಕಿತ್ಸೆ ಲಭಿಸುವ ನಿಟ್ಟಿನಲ್ಲಿ ವೈದ್ಯರು ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದರು. ಈ ಕ್ಲಿನಿಕ್ ಕ್ಷೇತ್ರದ ಜನರಿಗೆ ಪ್ರಯೋಜನವಾಗಬೇಕು ಎಂದು ಹೇಳಿದರು.

ಪಾಲಿಕೆ ಸದಸ್ಯ ಶಿವಕುಮಾರ ರಾಯನಗೌಡ್ರ, ಡಾ. ಎಸ್.ಎಂ. ಹೊನಕೇರಿ, ಡಾ. ಹುಲಗಣ್ಣ ಇಂಜಗನರಿ, ಡಾ. ಸುಜಾತ ಹಸವಿಮಠ, ಡಾ. ಮಹೇಶ ಚಿತ್ತರಗಿ, ವಾರ್ಡ್ ಅಧ್ಯಕ್ಷ ಶ್ರೀಶೈಲ ಜೋಡಳ್ಳಿ, ಪ್ರಮುಖರಾದ ಹನುಮಂತ ಹರ್ತಿ, ಬಸವರಾಜ ಹಡಪದ, ಡಾ. ವಾಯದಾ ಮುಲ್ಲಾ, ಡಾ. ಫಾರೂಕ್, ವಿದ್ಯಾಲಕ್ಷ್ಮೀ ಸಾಲಗತ್ತಿ ಹಾಗೂ ಇತರರು ಉಪಸ್ಥಿತರಿದ್ದರು.