ಜಿಲ್ಲೆ

ಆರೋಗ್ಯ ರಕ್ಷಣೆಗೆ ಆದ್ಯತೆ ಸಿಗಲಿ

ಪ್ರಶಾಂತ ಹೂಗಾರ

ಅಥಣಿ ಗ್ರಾಮೀಣ: ದುಶ್ಚಟದಿಂದ ಬಳಲುತ್ತಿರುವ ಯುವಕರನ್ನು ವಯಸ್ಸಾದ ತಂದೆ-ತಾಯಂದಿರು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿರುವುದು ದುಃಖದ ಸಂಗತಿ ಎಂದು ಯಕ್ಕುಂಚಿ ಗುರುದೇವ ಆಶ್ರಮದ ಗುರುಪಾದ ಸ್ವಾಮೀಜಿ ಹೇಳಿದರು.

ಅಥಣಿ ತಾಲೂಕಿನ ಬುರ್ಲಟ್ಟಿ ಗ್ರಾಮದಲ್ಲಿ ಶ್ರೀ ಚಂದ್ರವ್ವತಾಯಿ ಜಾತ್ರಾ ಮಹೋತ್ಸವ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ದುಶ್ಚಟಗಳಿಗೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳುವುದನ್ನು ಬಿಟ್ಟು ಉತ್ತಮ ಶಿಕ್ಷಣ ಪಡೆದು ಆರೋಗ್ಯದಿಂದ ಬದುಕಿ ಜೀವನ ಹಸನು ಮಾಡಿಕೊಳ್ಳಬೇಕು ಎಂದರು.

ಬೆಳಗ್ಗೆ ಚಂದ್ರವ್ವತಾಯಿ ದೇವಿ ಮೂರ್ತಿಗೆ ಅಭಿಷೇಕ, ವಿಶೇಷ ಪೂಜೆ ನೆರವೇರಿಸಲಾಯಿತು. ಮಧ್ಯಾಹ್ನ ಅನ್ನಪ್ರಸಾದ ನೆರವೇರಿತು. ಬಳಿಕ ದೇವಸ್ಥಾನ ಕಮಿಟಿ ವತಿಯಿಂದ ಬುರ್ಲಟ್ಟಿ, ದಬದಬಹಟ್ಟಿ, ಕಟಗೇರಿ, ಬಡಚಿ ಸೇರಿ ಇತರ ಗ್ರಾಮಗಳ ಸುಮಂಗಲೆಯರಿಗೆ ಉಡಿ ತುಂಬಲಾಯಿತು.

ಅರ್ಚಕಿ ಚಂದ್ರವ್ವ ಪೂಜಾರಿ, ಶಿವಶಂಕರ ಬಡಿಗೇರ, ರಾಜಕುಮಾರ ಪೂಜಾರಿ, ಅಣ್ಣಪ್ಪ ಖೋತ, ಸುಭಾಷ ಯಳ್ಳೂರ, ರಾಜು ದಾಶ್ಯಾಳ, ಅಶೋಕ ಚೌಗಲಾ, ಸೀಮಾ ಖೋತ, ಮಾಲಾಶ್ರೀ ಚೌಗಲಾ, ಗೀತಾ ಚಂಡಕಿ, ಸೀಮಾ ದಾಶ್ಯಾಳ, ಮುರಗೇಶ ಚಂಡಕಿ ಇತರರಿದ್ದರು.