ಹೂವಿನಹಡಗಲಿ: ರೈತರು ಜಮೀನುಗಳಲ್ಲಿ ಅರಣ್ಯ ಕೃಷಿ ಮಾಡಿದರೆ ಹೆಚ್ಚಿನ ಆದಾಯಗಳಿಸಬಹುದು ಎಂದು ವಲಯ ಅರಣ್ಯ ಅಧಿಕಾರಿ ಕಿರಣಕುಮಾರ್ ಕೆ ಹೇಳಿದರು.
ತಾಲೂಕಿನ ಕೊಮಾರನಹಳ್ಳಿ ತಾಂಡಾದ ಸಸ್ಯ ವಲಯದಲ್ಲಿ ಶುಕ್ರವಾರ ಸಾಮಾಜಿಕ ಅರಣ್ಯ ವಲಯ ಹಾಗೂ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ ರೈತರಿಗೆ ಕೃಷಿ ಅರಣ್ಯದ ಕುರಿತ ಕೌಶಲ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರೈತರ ಅಭಿವೃದ್ಧಿಗೆ ಸರ್ಕಾರ ಸಾಕಷ್ಟು ಯೋಜನೆಗಳ ಮೂಲಕ ಸೌಲಭ್ಯಗಳನ್ನು ಕಲ್ಪಿಸಿದ್ದು ಅವುಗಳನ್ನು ಬಳಸಿಕೊಳ್ಳಲು ಮುಂದಾಗಬೇಕು. ತಾಲೂಕಿನ ರಸ್ತೆಯ ಪಕ್ಕದಲ್ಲಿ ಸಾಮಾಜಿಕ ಅರಣ್ಯ ವಲಯದಿಂದ ವಿವಿಧ ಬಗೆಯ ಅನೇಕ ಸಸಿಗಳನ್ನು ನೆಟ್ಟು ಅವುಗಳನ್ನು ಪಾಲನೆ ಮಾಡಲಾಗುತ್ತಿದೆ. ಆದರೆ ರಸ್ತೆಯ ಪಕ್ಕದಲ್ಲಿರುವ ತ್ಯಾಜ್ಯಕ್ಕೆ ಬೆಂಕಿ ಹಚ್ಚುವುದರಿಂದ ಅವುಗಳು ಸುಟ್ಟು ಹೋಗುವ ಮೂಲಕ ನಾಶವಾಗುತ್ತಿವೆ. ಇದರಿಂದ ಪರಿಸರಕ್ಕೆ ಸಾಕಷ್ಟು ನಷ್ಟ ಉಂಟಾಗುತ್ತಿದೆ ಎಂದರು.
ಸಂಪನ್ಮೂಲ ವ್ಯಕ್ತಿ ಸುದರ್ಶನ ಮಾತನಾಡಿ, ರೈತರು ಕೃಷಿಯಲ್ಲಿ ಅರಣ್ಯ ಕೃಷಿಯನ್ನು ಹೇಗೆ ಅಳವಡಿಸಿಕೊಳ್ಳಬೇಕು ಎಂಬುದರ ಕುರಿತು ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿ ಚಂದ್ರಗೌಡ ಜೇನು ಕೃಷಿಯ ಕುರಿತು ಮಾಹಿತಿ ನೀಡಿದರು. ನಾಗತಿಬಸಾಪುರ ಗ್ರಾಪಂ ಅಧ್ಯಕ್ಷೆ ಶಾಂತಾಬಾಯಿ ಕಾರ್ಯಕ್ರಮ ಉದ್ಘಾಟಿಸಿದರು.