ಕುಮಟಾ: ಸತ್ಪಾತ್ರರಿಗೆ ದಾನ ಮಾಡಬೇಕೆಂಬ ಉದ್ದೇಶದಿಂದ ಅತ್ಯಂತ ದುಸ್ತರ ಬದುಕು ನಡೆಸುತ್ತಿರುವ ರಿಕ್ಷಾ ಚಾಲಕರ ಬದುಕಿಗೆ ನಮ್ಮ ಟ್ರಸ್ಟ್ನಿಂದ ಕಿಂಚಿತ್ ನೆರವಾಗುತ್ತಿದ್ದೇವೆ. ಸಮಾಜದಲ್ಲಿ ಎಲ್ಲರ ಬದುಕೂ ಹಸನಾಗಿರಬೇಕೆಂಬುದು ನಮ್ಮ ಟ್ರಸ್ಟ್ ಕಾರ್ಯಗಳ ಆಶಯವಾಗಿದೆ ಎಂದು ಶಿರಸಿ ಬ್ಯಾಗದ್ದೆಯ ಅನಂತಮೂರ್ತಿ ಹೆಗಡೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಹೇಳಿದರು.
ಪಟ್ಟಣದ ಪುರಭವನದಲ್ಲಿ ಇತ್ತೀಚೆಗೆ ಅನಂತಮೂರ್ತಿ ಹೆಗಡೆ ಚಾರಿಟಬಲ್ ಟ್ರಸ್ಟಿನಿಂದ ಹಮ್ಮಿಕೊಂಡಿದ್ದ ತಾಲೂಕಿನ ರಿಕ್ಷಾ ಚಾಲಕರು, ಮಾಲೀಕರಿಗೆ ಸಮವಸ್ತ್ರ, ಪ್ರಿಂಟಿಂಗ್ ವುಡ್ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಶಿರಸಿಯಿಂದ ಕಾರವಾರಕ್ಕೆ ಶೀಘ್ರವೇ ಪಾದಯಾತ್ರೆ ನಡೆಸಲಾಗುವುದು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ದಿನಕರ ಶೆಟ್ಟಿ ಮಾತನಾಡಿ, ಜನಪ್ರತಿನಿಧಿಗಳ ಕಾರ್ಯಾಲಸ್ಯ, ಒಗ್ಗಟ್ಟಿನ ಕೊರತೆ ಹಾಗೂ ದಿವ್ಯ ಮೌನದಿಂದಾಗಿ ನಮ್ಮ ಉತ್ತರ ಕನ್ನಡ ಜಿಲ್ಲೆ ಅಭಿವೃದ್ಧಿಯ ಹಲವು ವಿಭಾಗಗಳಲ್ಲಿ ಹಿಂದುಳಿದಿದೆ. ಈ ಜಿಲ್ಲೆಯ ಸಮಸ್ಯೆಯನ್ನು, ಬೇಡಿಕೆಗಳನ್ನು ಹಲವು ಬಾರಿ ಸರ್ಕಾರದ ಮುಂದೆ, ಸದನದಲ್ಲಿ ಪ್ರಸ್ತಾಪಿಸಿದರೂ ಪ್ರಯೋಜನವಾಗಿಲ್ಲ. ಮೀನುಗಾರಿಕೆ ನಡೆಯುವ ಕರಾವಳಿ ಜಿಲ್ಲೆ ಬಿಟ್ಟು ಬಯಲು ಸೀಮೆಯ ಬೀದರ್ನಲ್ಲಿ ಮೀನುಗಾರಿಕೆ ವಿಶ್ವವಿದ್ಯಾಲಯ ಸ್ಥಾಪಿಸಲಾಗಿದೆ. ಮಲ್ಟಿ ಸೆ್ಪೆಷಾಲಿಟಿ ಆಸ್ಪತ್ರೆ ನಿರ್ವಣಕ್ಕೆ ಜಾಗ ಗುರುತಿಸಿದ್ದರೂ ಈಗಿನ ಸರ್ಕಾರ ಕಾರವಾರದಲ್ಲಿ ಮೆಡಿಕಲ್ ಕಾಲೇಜ್ ಇದೆ ಎಂದು ನಮ್ಮ ಪ್ರಾಮಾಣಿಕ ಪ್ರಯತ್ನವನ್ನು ಬದಿಗೆ ಸರಿಸಿದೆ. ಇಂಥ ಹಲವು ಬೇಡಿಕೆಗಳು ನಮ್ಮಲ್ಲಿನ ಜನಪ್ರತಿನಿಧಿಗಳ ಒಗ್ಗಟ್ಟಿನ ಕೊರತೆಯ ಫಲ ಎಂದರು.
ರಿಕ್ಷಾ ಚಾಲಕರಾದ ದಯಾ ನಾಯ್ಕ, ಮಂಜುನಾಥ ನಾಯ್ಕ, ಕೃಷ್ಣ ನಾಯ್ಕ, ರೋಹಿದಾಸ ಭಂಡಾರಿ, ಮಂಜುನಾಥ ನಾಯ್ಕ, ಹರಿಶ್ಚಂದ್ರ ಮಡಿವಾಳ, ಲಕ್ಷ್ಮಣ ಗಾಡಿಗ, ವಿಶ್ವನಾಥ ಭಂಡಾರಿ, ರಮೇಶ ನಾಯ್ಕ, ದಯಾನಂದ ಕಲಭಾಗ, ರಿಕ್ಷಾದಲ್ಲಿ ಚಿನ್ನಾಭರಣ ಕಳೆದುಕೊಂಡಿದ್ದವರಿಗೆ ಮರಳಿಸಿ ಪ್ರಾಮಾಣಿಕತೆ ತೋರಿದ ಚಾಲಕರಾದ ಮಂಜುನಾಥ ಪಟಗಾರ, ವಾಸು ನಾಯ್ಕ, ಅಂಗವಿಕಲ ಕ್ರೀಡಾಪಟು ವಿಘ್ನೕಶ ನಾಯ್ಕ ಅವರನ್ನು ಸನ್ಮಾನಿಸಲಾಯಿತು. 800 ರಿಕ್ಷಾ ಚಾಲಕರಿಗೆ ಸಮವಸ್ತ್ರ ವಿತರಿಸಲಾಯಿತು.
ರಿಕ್ಷಾ ಚಾಲಕ, ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಶಿವರಾಜ ಮೇಸ್ತಾ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹಾಬಲೇಶ್ವರ ಹೆಗಡೆ, ಶಾರದಾ ಹೆಗಡೆ, ವಕೀಲ ಆರ್. ಜಿ. ನಾಯ್ಕ, ತಾಲೂಕು ಸಂಘದ ಅಧ್ಯಕ್ಷ ಗಣಪತಿ ಪಟಗಾರ, ಕಾರ್ಯದರ್ಶಿ ಮಂಜುನಾಥ ನಾಯ್ಕ, ರಿಕ್ಷಾ ಸಂಘಟನೆಯ ವಿಶ್ವನಾಥ ಗೌಡ, ಸಂತೋಷ ನಾಯ್ಕ, ಚಂದ್ರಹಾಸ ನಾಯ್ಕ, ದಯಾ ನಾಯ್ಕ ಇತರರು ಇದ್ದರು.