ಹುಕ್ಕೇರಿ: ಸಮಾಜ ಮತ್ತು ಅಧಿಕಾರಿ ವರ್ಗವೂ ಶಿಕ್ಷಕರನ್ನು ಗೌರವಿಸಿದರೆ ಶಿಕ್ಷಕರ ದಿನಾಚರಣೆ ಅರ್ಥಪೂರ್ಣವಾಗುತ್ತದೆ ಎಂದು ಚಂದ್ರಶೇಖರ ಶಿವಾಚಾರ್ಯರು ಹೇಳಿದರು.
ಪಟ್ಟಣದ ವಿಶ್ವರಾಜ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಸಾನ್ನಿಧ್ಯ ವಹಿಸಿ ಮಾತನಾಡಿ, ಜ್ಞಾನ ನೀಡಿದ ಶಿಕ್ಷಕರನ್ನು ನಿತ್ಯವೂ ಸ್ಮರಿಸಬೇಕು ಎಂದರು.
ವಿದ್ಯುತ್ ಸಹಕಾರ ಸಂಘದ ನಿರ್ದೇಶಕ ಪೃಥ್ವಿ ಕತ್ತಿ ಮಾತನಾಡಿ, ತಾಲೂಕಿನ ಹಟ್ಟಿ ಆಲೂರ, ಕಮತನೂರ ಮತ್ತು ಶಿರಹಟ್ಟಿ ಬಿಕೆ ಗ್ರಾಮಕ್ಕೆ ಈಚೆಗೆ ಮಂಜೂರಾದ ಪ್ರೌಢಶಾಲೆಗಳಿಗೆ ರಾಜರಾಜೇಶ್ವರಿ ಟ್ರಸ್ಟ್ನಿಂದ ವಿವಿಧ ಸೌಲಭ್ಯ ಒದಗಿಸುತ್ತಿದ್ದೇವೆ. ಶೈಕ್ಷಣಿಕ ಪ್ರಗತಿಗೆ ಆದ್ಯತೆ ನೀಡಿದರೆ ಸುಶಿಕ್ಷಿತ ಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದರು.
ಕಸಾಪ ಅಧ್ಯಕ್ಷ ಪ್ರಕಾಶ ಅವಲಕ್ಕಿ ಮಾತನಾಡಿದರು. ವಿರಕ್ತಮಠದ ಶಿವಬಸವ ಸ್ವಾಮೀಜಿ, ಅಭಿನವ ಮಂಜುನಾಥ ಶ್ರೀ ಆಶೀರ್ವಚನ ನೀಡಿದರು. ಸಾಧಕ ಮತ್ತು ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಪುರಸಭೆ ಅಧ್ಯಕ್ಷ ಇಮ್ರಾನ್ ಮೋಮಿನ್, ಮಹಾವೀರ ಉದ್ಯೋಗ ಸಮೂಹ ಸಂಸ್ಥೆಗಳ ಅಧ್ಯಕ್ಷ ಮಹಾವೀರ ನಿಲಜಗಿ, ಮುಖಂಡ ರವಿ ಕರಾಳೆ, ನೌಕರರ ಸಂಘದ ಅಧ್ಯಕ್ಷ ಅವಿನಾಶ ಹೊಳ್ಳೆಪ್ಪಗೋಳ ಹಾಗೂ ಶಿಕ್ಷಕರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಾವತಿ ಪಾಟೀಲ ಸ್ವಾಗತಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ಎ.ಎಸ್.ಪದ್ಮನ್ನವರ ವಂದಿಸಿದರು.