ಸವಣೂರ: ಸಂವಿಧಾನ ಜಾರಿಗೆ ಬಂದು 75 ವರ್ಷ ಕಳೆದರೂ ಇನ್ನೂ ಅಸ್ಪಶ್ಯತೆ ನಿವಾರಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ ಎಂದರೆ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಜಿಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಜನರ ಮೇಲಿನ ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯ ಮುತ್ತುರಾಜ ಮಾದರ ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ಹಾಗೂ ಆಶಾಕಿರಣ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಸಹಯೋಗದಲ್ಲಿ ತಾಲೂಕಿನ ಡಂಬರಮತ್ತೂರ ಗ್ರಾಮದಲ್ಲಿ ಮಂಗಳವಾರ ಏರ್ಪಡಿಸಿದ್ದ ಅಸ್ಪಶ್ಯತೆ ನಿರ್ಮೂಲನೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಇನ್ನೂ ಮೇಲು-ಕೀಳು, ಶ್ರೀಮಂತ-ಬಡವ, ಬಲಿಷ್ಠರು-ದುರ್ಬಲರು, ಜಾತಿ ತಾರತಮ್ಯ, ಶೋಷಣೆ ಜೀವಂತವಾಗಿದೆ. ಇದನ್ನು ತಡೆಗಟ್ಟಬೇಕಾದ ಅನಿವಾರ್ಯತೆ ಇದೆ. ಸಮಾಜದಲ್ಲಿ ಎಲ್ಲರೂ ಸಮಾನತೆಯಿಂದ ಬದುಕಬೇಕು ಎಂದರು.
ವಕೀಲ ಕೆ.ಎಸ್. ನೀರಲಗಿ ಅವರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ದೌರ್ಜನ್ಯ ನಿಯಂತ್ರಣ ಕಾಯ್ದೆ 1979 ಮತ್ತು ವಿವಿಧ ಕಾನೂನುಗಳ ಬಗ್ಗೆ ಉಪನ್ಯಾಸ ನೀಡಿದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಪ್ರಭಾರ ಜೀವನ ಪಂಮಾರ, ಪ್ರಮುಖರಾದ ಕೆ.ಬಿ. ಕಾಂಬಳೆ, ಶಶಿಧರ ಚರಂತಿಮಠ, ಮಹಾದೇವಪ್ಪ ಆಲದಕಟ್ಟಿ, ಸರೋಜ ಕುಂಬಾರ ಹಾಗೂ ಇತರರು ಪಾಲ್ಗೊಂಡಿದ್ದರು. ನಂತರ, ಶ್ರೀ ಹರಿಕೃಷ್ಣ ಕಲಾತಂಡದವರಿಂದ ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸಲಾಯಿತು.