ಜಿಲ್ಲೆ

ಎಲ್ಲರಿಗೂ ಎಲ್ಲ ಕ್ಷೇತ್ರಗಳಲ್ಲೂ ಸಮಾನತೆ ಸಿಗಲಿ

ಪ್ರಸಿನ್ ಕೆ.ಆರ್

ಹಾಸನ: ಸಮಾಜದ ಪ್ರತಿಯೊಬ್ಬರಿಗೂ ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಎಲ್ಲದರಲ್ಲೂ ಸಮಾನತೆ ಸಿಗಬೇಕು ಎಂದು ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಹೇಮಲತಾ ಹೇಳಿದರು.

ಸಮಾಜ ಕಲ್ಯಾಣ ಇಲಾಖೆ ಮತ್ತು ಬುಡಕಟ್ಟು ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಶುಕ್ರವಾರ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಏರ್ಪಡಿಸಲಾಗಿದ್ದ ಸಾಮಾಜಿಕ ನ್ಯಾಯ ಕುರಿತು ಜಿಲ್ಲಾ ಮಟ್ಟದ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಾನತೆ ಕುರಿತು ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಎಲ್ಲರೂ ಇಂತಹ ಕಾರ್ಯಾಗಾರಗಳಲ್ಲಿ ಭಾಗವಹಿಸುವುದರಿಂದ ನಮ್ಮಲ್ಲಿಯೇ ಒಂದು ಅರಿವು ಮೂಡುತ್ತದೆ. ಹಾಗಾಗಿ ಈ ಕಾರ್ಯಕ್ರಮದ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು.

ತರಬೇತಿ ಸಂಯೋಜಕ ಡಾ.ಅಬ್ದುಲ್ ವಹಾಬ್ ಮಾತನಾಡಿ, ಪ್ರತಿ ಜಿಲ್ಲೆಯಲ್ಲಿಯೂ ಜಿಲ್ಲಾ ತರಬೇತಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿವರ್ಷವೂ 600 ರಿಂದ 700 ತರಬೇತಿಗಳನ್ನು ಏರ್ಪಡಿಸಿಕೊಂಡು ಬರುತ್ತಿದ್ದೇವೆ. ನಮ್ಮೊಟ್ಟಿಗೆ ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ತರಬೇತಿ ಸಂಸ್ಥೆಗಳು ಒಟ್ಟುಗೂಡಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಈ ಕಾರ್ಯಕ್ರಮದ ಮುಖ್ಯ ಉದ್ದೇಶ ದುರ್ಬಲ ವರ್ಗದವರ ಕುರಿತು ಒಂದು ಸಂವೇದನಶೀಲನೆಯನ್ನು ಎಲ್ಲ ಅಧಿಕಾರಿಗಳಿಗೆ ಮೂಡಿಸುವುದಾಗಿದೆ. ಜತೆಗೆ ದುರ್ಬಲ ವರ್ಗದವರ ಕಷ್ಟಕಾರ್ಪಣ್ಯಗಳಿಗೆ 35 ಇಲಾಖೆಗಳು ಒಳಗೊಂಡಂತೆ ನಾವೆಲ್ಲರೂ ಒಟ್ಟುಗೂಡಿ ಸ್ಪಂದಿಸಬೇಕು ಎಂಬುದು ನಮ್ಮ ಆಡಳಿತ ತರಬೇತಿ ಸಂಸ್ಥೆ ಉದ್ದೇಶವಾಗಿದೆ ಎಂದು ತಿಳಿಸಿದರು.

ಕಾರ್ಯಾಗಾರದಲ್ಲಿ ಸುಸ್ಥಿರ ಸಮಾಜ, ಸಾಮಾಜಿಕ ನ್ಯಾಯದ ಮಹತ್ವ ಮತ್ತು ಪರಿಕಲ್ಪನೆಗಳು ಹಾಗೂ ದೌರ್ಜನ್ಯ ತಡೆ ಕಾಯ್ದೆಗಳು, ಕರ್ನಾಟಕ ಅನುಸೂಚಿತ ಜಾತಿಗಳ ಉಪ ಹಂಚಿಕೆ ಮತ್ತು ಬುಡಕಟ್ಟು ಉಪ ಹಂಚಿಕೆ (ಯೋಜನೆ ರೂಪಿಸುವುದು, ಆರ್ಥಿಕ ಸಂಪನ್ಮೂಲಗಳ ಹಂಚಿಕೆ ಮತ್ತು ಬಳಕೆ) ಅಧಿನಿಯಮ 2013 ಮತ್ತು ನಿಯಮಗಳು 2017 ರ ಕುರಿತು, ಸಮಾಜ ಕಲ್ಯಾಣ ಇಲಾಖೆಯಲ್ಲಿ ಇರುವಂತಹ ಕಾರ್ಯಕ್ರಮಗಳ ಕುರಿತಾಗಿ ಮಾಹಿತಿಯನ್ನು ಈ ಕಾರ್ಯಾಗಾರದಲ್ಲಿ ಒದಗಿಸಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಇದ್ದರು.