ಉಪ್ಪಿನಬೆಟಗೇರಿ: ‘ಕಾಯಕವೇ ಕೈಲಾಸ’ ಎಂಬ ವಿಶ್ವಗುರು ಬಸವಣ್ಣನವರ ನಿತ್ಯ, ಸತ್ಯ ಸಂದೇಶವನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡು ಶುದ್ಧ ಮನಸಿನ ಕಾಯಕ ಯೋಗಿಗಳಾಗಬೇಕು ಎಂದು ಕುಂದಗೋಳ ಕಲ್ಯಾಣಪುರ ಮಠದ ಶ್ರೀ ಬಸವಣ್ಣಜ್ಜನವರು ಭಕ್ತರಿಗೆ ಸಂದೇಶ ನೀಡಿದರು.
ಮಳೆಪ್ಪಜ್ಜನ ಮಠದ ಮೌನಯೋಗಿ ಶ್ರೀ ಮಹಾಂತ ಶಿವಯೋಗಿಗಳ ಪುಣ್ಯಸ್ಮರಣೆ ಅಂಗವಾಗಿ ನರೇಂದ್ರ ಗ್ರಾಮದಲ್ಲಿ ಆಯೋಜಿಸಿದ್ದ ಆಧ್ಯಾತ್ಮಿಕ ಪ್ರವಚನ ಸಮಾರೋಪ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ವಿವಿಧ ಭಾಗದ ಮಠಾಧಿಪತಿಗಳು ಆಗಮಿಸಿ ಹಿತೋಪದೇಶದ ನೀಡಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದರ್ಶನ ಹಾಗೂ ಮಾನವೀಯ ಸಂದೇಶಗಳನ್ನು ಅಳವಡಿಸಿಕೊಂಡು ಅವರಿಗೆ ಗೌರವ ಸಲ್ಲಿಸಬೇಕು ಎಂದರು.
ಪ್ರವಚನಕಾರ ಯೋಗಿರಾಜೇಂದ್ರ ಖಾನಾಪೂರ ಮಾತನಾಡಿ, ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ. ಹುಟ್ಟು-ಸಾವು ಜಗದ ನಿಯಮ, ಶಾಶ್ವತವಲ್ಲದ ಬದುಕಿನಲ್ಲಿ ನಾನು, ನನ್ನದು ಎಂಬ ಮೋಹ ತೊಡೆದು ಹಾಕಿ, ಪರೋಪಕಾರದ ಜೀವನ ನಡೆಸಬೇಕು ಎಂದರು.
ಬಳ್ಳಾರಿ ಕಮ್ಮರಬೇಡು ಸಂಸ್ಥಾನಮಠದ ಕಲ್ಯಾಣ ಸ್ವಾಮೀಜಿ, ಗುಂದಕನಾಳ ಬೃಹನ್ಮಠದ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ, ಮರೇಗುದ್ದಿಯ ಮಹಾಂತೇಶ್ವರ ಸ್ವಾಮೀಜಿ, ಮಹಾರಾಷ್ಟ್ರದ ಮಹಾಂತದೇವರು, ಮಳೆಪ್ಪಜ್ಜನ ಮಠದ ಧರ್ಮಾಧಿಕಾರಿ ಸಂಗಮೇಶ ಅಜ್ಜನವರು ಆಶೀರ್ವಚನ ನೀಡಿದರು. ತಾಪಂ ಮಾಜಿ ಸದಸ್ಯ ಮಹಾದೇವ ದಂಡಿನ, ಮಲ್ಲಿಕಾರ್ಜುನ ಹುಂಬೇರಿ, ಗುರುಪಾದಯ್ಯ ಯಕ್ಕುಂಡಿಮಠ, ಮಂಜುನಾಥ ತಿರ್ಲಾಪೂರ, ಇತರರು ಉಪಸ್ಥಿತರಿದ್ದರು. ಶಿಕ್ಷಕ ನಾಡಗೌಡ ದೇಸಾಯಿ ಕಾರ್ಯಕ್ರಮ ನಿರ್ವಹಿಸಿದರು.
ಮಳೆಪ್ಪಜ್ಜನ ಮಠದಲ್ಲಿ ಮೌನಯೋಗಿ ಮಹಾಂತ ಶಿವಯೋಗಿಗಳ ಗದ್ದುಗೆಗೆ ವಿಶೇಷ ಪೂಜೆ ಹಾಗೂ ಹೋಮ ಹವನ ನೆರವೇರಿಸಲಾಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಹಾಂತ ಶಿವಯೋಗಿಗಳ ಭಾವಚಿತ್ರ ಹಾಗೂ ಪಲ್ಲಕ್ಕಿ ಉತ್ಸವದ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ಸವಿತಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ‘ನೇತ್ರಾಮೃತ ಕಣ್ಣಿನ ಹನಿ’ ಕಾರ್ಯಕ್ರಮದಲ್ಲಿ ಸುಮಾರು 200ಕ್ಕೂ ಅಧಿಕ ಜನರು ‘ಕಣ್ಣಿಗೆ ನೇತ್ರಾಮೃತ ಹನಿ’ ಹಾಕಿಸಿಕೊಂಡರು.