ಜಿಲ್ಲೆ

ಪ್ರತಿಯೊಬ್ಬ ಮಹಿಳೆಯು ಉನ್ನತ ಸಾಧನೆ ಮಾಡಲಿ

ಕಿರಣ್ ಗೌಡ.ಜಿ

ಚಾಮರಾಜನಗರ: ಪ್ರತಿಯೊಬ್ಬ ಮಹಿಳೆಯು ತಮಗೆ ದೊರೆತಿರುವ ಅವಕಾಶಗಳನ್ನು ಬಳಕೆ ಮಾಡಿಕೊಂಡು ಉನ್ನತ ಸಾಧನೆ ಮಾಡಬೇಕು ಎಂದು ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಹೇಳಿದರು.

ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಪ್ರಕಾಶ ಭವನದಲ್ಲಿ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ವತಿಯಿಂದ ಭಾನುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ರಾಜಕೀಯ ಜಂಜಾಟದಲ್ಲಿ ಮನುಷ್ಯನಿಗೆ ಆರೋಗ್ಯ ನೆಮ್ಮದಿ ಅತಿ ಮುಖ್ಯವಾಗುತ್ತದೆ. ಇದನ್ನು ಹೋಗಲಾಡಿಸಲು ಹಲವಾರು ಧಾರ್ಮಿಕ ಭಾವನೆಗಳು ಅತ್ಯಗತ್ಯವಾಗಿದೆ. ಮಹಿಳೆಯರು ತಮಗೆ ದೊರೆತಿರುವ ಅವಕಾಶಗಳನ್ನು ಬಳಸಿಕೊಂಡು ಉನ್ನತ ಸ್ಥಾನಮಾನವನ್ನು ಪಡೆಯಿರಿ ಎಂದು ಸಲಹೆ ನೀಡಿದರು.

ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆ ಅಧ್ಯಕ್ಷ ಜಿ.ಬಂಗಾರು ಮಾತನಾಡಿ, ವಿಶ್ವದಲ್ಲಿ ಪುರುಷರಿಗೆ ಸರಿ ಸಮಾನವಾಗಿ ಮಹಿಳೆಯರು ಉತ್ತಮ ಸಾಧನೆ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಶೇ.70 ರಷ್ಟು ಮಹಿಳಾ ಅಧಿಕಾರಿಗಳು ಇರುವುದೇ ಇದಕ್ಕೆ ಉದಾಹರಣೆಯಾಗಿದೆ. ಈ ನಿಟ್ಟಿನಲ್ಲಿ ಮಹಿಳೆಯರು ಉತ್ತಮ ಸಾಧನೆ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಸಂಚಾಲಕಿ ದಾನೇಶ್ವರಿ, ಇನ್ನರ್ ವೀಲ್ ಸಂಸ್ಥೆ ಮಾಜಿ ಅಧ್ಯಕ್ಷ ಲಕ್ಷ್ಮಿ ಶಿವಕುಮಾರ್, ಸಮಾಜ ಸೇವಕಿ ಪುಷ್ಪಲತಾ ಸುಬ್ರಹ್ಮಣ್ಯ, ತಾಲೂಕು ಕದಲಿ ಮಹಿಳಾ ವೇದಿಕೆ ಅಧ್ಯಕ್ಷೆ ಶೋಭಾ, ಸುಂದರಮ್ಮ, ನಗರಸಭೆ ಆರೋಗ್ಯಾಧಿಕಾರಿ ಪುಷ್ಪ, ಬಿ.ಕೆ.ಮಂಜುನಾಥ ಆರಾದ್ಯ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.