ಮೈಸೂರು: ಸಮಸ್ತ ಜೀವಿಗಳಿಗೂ ಸುಖ ಪ್ರಾಪ್ತಿಯಾಗಲಿ ಎಂದು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಪ್ರಾರ್ಥಿಸಿದ್ದಾರೆ.
ಶ್ರೀ ದತ್ತ ವೆಂಕಟೇಶ್ವರ ಕ್ಷೇತ್ರದ 25 ನೇ ವಾರ್ಷಿಕೋತ್ಸವ ಹಾಗೂ ಬ್ರಹ್ಮೋತ್ಸವದ ಸಂದರ್ಭದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕುಂಭಾಭಿಷೇಕ ಕಾರ್ಯಕ್ರಮದ ವೇಳೆ ಭಕ್ತರಿಗೆ ಅವರು ಆಶೀರ್ವಚನ ನೀಡಿದರು.
ಕ್ರೋಧ, ಮತ್ಸರ, ಕಷ್ಟ ಕೋಟಲೆಗಳು ಜನರಿಂದ ದೂರವಾಗಲಿ. ಕಾಲ ಕಾಲಕ್ಕೆ ಮಳೆ, ಬೆಳೆಯಾಗಿ ನಾಡು ಸುಭಿಕ್ಷವಾಗಲಿ. ಜನರ ದುಃಖ ಕಡಿಮೆಯಾಗಲಿ. ರಾಜ್ಯ, ದೇಶ ಅಭಿವೃದ್ಧಿಯಾಗಲಿ. ಪ್ರಜೆಗಳು ಮತ್ತು ಪ್ರಜಾ ಪ್ರತಿನಿಧಿಗಳಿಗೆ ಶಾಂತಿ ಸಿಗಲಿ, ಜನರ ಕಷ್ಟವನ್ನು ನೋಡಿ, ಅವುಗಳನ್ನು ಪರಿಹರಿಸಲಿ ಎಂದು ಆ ವೆಂಕಟರಮಣನಲ್ಲಿ ಪ್ರಾರ್ಥಿಸುತ್ತೇನೆ ಎಂದು ಸ್ವಾಮೀಜಿ ನುಡಿದರು.
ಜನರಲ್ಲಿ ಇತ್ತೀಚೆಗೆ ಕ್ರೋಧ ಹೆಚ್ಚಾಗುತ್ತಿದೆ. ಶಾಂತಿ ಇಲ್ಲದಂತಾಗಿದೆ. ಕಲಿಯುಗದ ದೇವರು ವೆಂಕಟರಮಣ. ಅವನನ್ನು ಪ್ರಾರ್ಥಿಸಿದರೆ ಸುಖ, ಐಶ್ವರ್ಯ, ಶಾಂತಿ ಸಿಗಲಿದೆ. ಕಡು ಬಡವರೂ ಶ್ರೀಮಂತರಾಗುತ್ತಾರೆ ಆದರೆ. ಆ ದೇವನಿಗೆ ನೆಮ್ಮದಿಯಿಂದ ಪ್ರಾರ್ಥನೆ ಮಾಡಿ, ಅವನ ಸ್ಮರಣೆ ಮಾಡಿ ಎಂದು ಸ್ವಾಮೀಜಿ ತಿಳಿಹೇಳಿದರು.
ಇನ್ನಾದರೂ ಜಾಗೃತರಾಗಿ, ಎದ್ದೇಳಿ, ದೇವರ ಸ್ಮರಣೆ ಮಾಡಿ ಆಯಸ್ಸು,ಆರೋಗ್ಯ, ಸಂಪತ್ತು ಕರುಣಿಸುತ್ತಾನೆ ಕಲಿಯುಗದ ದೈವ ವೆಂಕಟರಮಣ ಅವನನ್ನು ನೆನೆಯಿರಿ,ನಾನೂ ಕೂಡಾ ಅವನಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ತಿಳಿಸಿದರು.
ಕುಂಭಾಭಿಷೇಕ: ಅವಧೂತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಶ್ರೀ ದತ್ತ ವೆಂಕಟೇಶ್ವರ ಸನ್ನಿಧಿಯಲ್ಲಿ ಕುಂಭಾಭಿಷೇಕ ವಿಜೃಂಭಣೆಯಿಂದ ನೆರವೇರಿಸಲಾಯಿತು.
ಇದಕ್ಕೂ ಮೊದಲು ವಜ್ರೋತ್ಸವ ಯಾಗಮಂಟಪದಲ್ಲಿ ಪ್ರಧಾನಯಾಗವನ್ನು ನೆರವೇರಿಸಲಾಯಿತು. ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಮತ್ತು ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಹೋಮ ಕಾರ್ಯದಲ್ಲಿ ಪಾಲ್ಗೊಂಡು ಪೂರ್ಣಾಹುತಿ ಸಮರ್ಪಿಸಿದರು. ನಂತರ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ದತ್ತ ವೆಂಕಟೇಶ್ವರ ದೇವಾಲಯದ ಮೇಲ್ಬಾಗಕ್ಕೆ ತೆರಳಿ ಆಗಮ ಪಂಡಿತರ ಸಮ್ಮುಖದಲ್ಲಿ ವಿವಿಧ ನದಿಗಳಿಂದ ತರಲಾಗಿದ್ದ ಶುದ್ಧ ಜಲದಿಂದ ದೇವಾಲಯಗಳ ಶಿಖರಗಳಿಗೆ ಮಹಾ ಕುಂಭಾಭಿಷೇಕ ನೆರವೇರಿಸಿದರು. ನಂತರ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಕೂಡಾ ಕುಂಭಾಭಿಷೇಕ ನೆರವೇರಿಸಿದರು.
ನಂತರ ಗಣಪತಿ ಶ್ರೀಗಳು ದೇವತಾ ಮೂರ್ತಿಗಳಿಗೆ ಬ್ರಹ್ಮಕಲಶ ಅಭಿಷೇಕ ಮಾಡಿ ಪೂಜೆ ಸಲ್ಲಿಸಿದರು.