ಬಳ್ಳಾರಿ: ಸಶಕ್ತ ಭಾರತ ನಿರ್ಮಾಣಗೊಳ್ಳಬೇಕಾದರೆ ಸಮುದಾಯಗಳಲ್ಲಿ ಬಾಲ್ಯ ವಿವಾಹ ಮತ್ತು ದೇವದಾಸಿ ಪದ್ಧತಿ ತಡೆಗಟ್ಟುವಲ್ಲಿ ಸರ್ಕಾರೇತರ ಸಂಘ ಸಂಸ್ಥೆಗಳು ಮತ್ತು ವಿವಿಧ ಇಲಾಖೆಗಳು ಶ್ರಮಿಸಬೇಕಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಹೇಳಿದರು.
ನಗರದ ಡಾ.ರಾಜ್‌ಕುಮಾರ್ ರಸ್ತೆಯ ಬಿಡಿಎ ಫುಟ್‌ಬಾಲ್ ಮೈದಾನ ವೇದಿಕೆ ಸಭಾಂಗಣದಲ್ಲಿ ರೀಡ್ಸ್ ಸಂಸ್ಥೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಂಯುಕ್ತಾಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಬಾಲ್ಯವಿವಾಹ ಮತ್ತು ದೇವದಾಸಿ ಪದ್ಧತಿಯ ತಡೆಗಟ್ಟುವಲ್ಲಿನ ಸವಾಲುಗಳು ಮತ್ತು ಪರಿಹಾರ’ ಕುರಿತ ರಾಜ್ಯಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರವು 2030ರ ವೇಳೆಗೆ ಬಾಲ್ಯ ವಿವಾಹ ಮುಕ್ತ ಮಾಡಲು ಪಣ ತೊಟ್ಟಿದೆ. ಅದೇ ರೀತಿಯಾಗಿ ಸಮುದಾಯ, ಸಂಘಟನೆಗಳು, ಪಾಲಕರು ಸರ್ಕಾರಿ ಇಲಾಖೆಗಳ ಜೊತೆಗೂಡಿ ರಾಜ್ಯವನ್ನು ಬಾಲ್ಯ ವಿವಾಹಮುಕ್ತ ಮಾಡಲು ಸಮನ್ವಯ ಸಾಧಿಸುವ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇತ್ತಿಚೀನ ದಿನಗಳಲ್ಲಿ ಬಾಲ್ಯ ವಿವಾಹಗಳು ಹೆಚ್ಚಾಗುತ್ತಿದ್ದು, ಅದರ ವಿರುದ್ಧ ಗ್ರಾಮ ಪಂಚಾಯತ್ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಮಕ್ಕಳ ಕಾವಲು ಸಮಿತಿಗಳನ್ನು ರಚಿಸಿ ಅನುಷ್ಟಾನ ಮಾಡಬೇಕು. ವಿವಿಧ ಇಲಾಖೆಯಿಂದ ನೇಮಿಸಿದ ಬಾಲ್ಯವಿವಾಹ ನಿಷೇಧಾಧಿಕಾರಿಗಳು ಸಮನ್ವಯ ಸಾಧಿಸಿ ಬಾಲ್ಯವಿವಾಹಗಳನ್ನು ತಡೆಗಟ್ಟುವಲ್ಲಿ ಶ್ರಮವಹಿಸಬೇಕು ಎಂದು ತಿಳಿಸಿದರು.
ಆಡುತ್ತ ತಮ್ಮ ಬಾಲ್ಯವನ್ನು ಅನುಭವಿಸಬೇಕಿದ್ದ ಮಕ್ಕಳು ಬಾಲ್ಯ ವಿವಾಹವೆಂಬ ಸುಳಿಗೆ ಸಿಲುಕುತ್ತಿದ್ದಾರೆ. ಬಾಲ್ಯ ವಿವಾಹದಿಂದ ಮಕ್ಕಳ ಹಕ್ಕುಗಳಿಗೆ ಚ್ಯುತಿ ಬಾರದಂತೆ ತಡೆಯಬೇಕು. ಪಾಲಕರಿಗೆ ಬಾಲ್ಯವಿವಾಹ ನಿಷೇಧ ಕಾಯ್ದೆಯ ಬಗ್ಗೆ ಅರಿವು ಮೂಡಿಸಿ ಬಾಲ್ಯ ವಿವಾಹವನ್ನು ತೊಲಗಿಸಬೇಕು ಎಂದು ಸರ್ಕಾರೇತರ ಸಂಘ ಸಂಸ್ಥೆಗಳ ಸ್ವಯಂ ಸೇವಕರಿಗೆ ಕಿವಿಮಾತು ಹೇಳಿದರು.
ರಾಜ್ಯದಲ್ಲಿ 28,657 ಪ್ರಕರಣಗಳಲ್ಲಿ ಬಾಲ್ಯವಿವಾಹದಿಂದ ಗರ್ಭಿಣಿಯರಿದ್ದಾರೆ. ಅದೇ ರೀತಿಯಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ 62 ಸಾವಿರ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ರೀಡ್ಸ್ ಸಂಸ್ಥೆಯ ಅಧ್ಯಕ್ಷ ಬಿ.ಸಿದ್ದರಾಮಯ್ಯ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಬಾಲ್ಯ ವಿವಾಹ ಮತ್ತು ದೇವದಾಸಿ ಪದ್ಧತಿಗಳಿಗೆ ಮೂಲ ಕಾರಣ ಬಡತನ. ಸರ್ಕಾರವು ಬಡತನ ನಿರ್ಮೂಲನೆಗಾಗಿ ಸಾಕಷ್ಟು ಶ್ರಮಿಸುತ್ತಿದೆ. ಮನುಷ್ಯ ಬುದ್ಧಿ ಜೀವಿಯಾಗಿದ್ದು, ಜ್ಞಾನ ಮತ್ತು ವಿಚಾರಧಾರೆಗಳನ್ನು ಅಳವಡಿಸಿಕೊಳ್ಳಬೇಕು ಅಂದಾಗ ಮಾತ್ರ ಮೂಢನಂಬಿಕೆ ತೊಲಗಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಕ್ಕಳ ವಿವಿಧ ವಿಚಾರಗಳನ್ನು ಅಭಿವೃದ್ಧಿ ಸೂಚಕಗಳಾಗಿ ಇಟ್ಟುಕೊಂಡು, ಚಿಕ್ಕ ಚಿಕ್ಕ ಜನಸಮುದಾಯಗಳ ವಾರ್ಡ್ ಮಟ್ಟ ಮಕ್ಕಳಿಗೆ ಸಂಬಂಧಿಸಿದಂತೆ ಸಮಸ್ಯೆಗಳನ್ನು ಕಂಡುಕೊಂಡು, ಅವುಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. ಇದರಿಂದ ಗ್ರಾಮ ಪಂಚಾಯಿತಿಗಳು ಮಕ್ಕಳ ಸ್ನೇಹಿ ಆಗುತ್ತವೆ ಎಂದು ಅಭಿಮತ ವ್ಯಕ್ತ ಪಡಿಸಿದರು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನಿಕಟಪೂರ್ವ ಸದಸ್ಯ ಎಚ್.ಸಿ.ರಾಘವೇಂದ್ರ, ವಿಜಯನಗರ ಜಿಲ್ಲೆಯ ಸಖಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕಿ ಡಾ.ಭಾಗ್ಯಲಕ್ಷ್ಮೀ, ರೀಡ್ಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಸಿ.ತಿಪ್ಪೇಶಪ್ಪ, ಮೈಸೂರು ಆರ್‌ಎಲ್‌ಎಚ್‌ಪಿ ಕಾರ್ಯನಿರ್ವಾಹಕ ನಿರ್ದೇಶಕಿ ಸರಸ್ವತಿ, ಬಳ್ಳಾರಿ ನಗರ ಡಿವೈಎಸ್ಪಿ ಚಂದ್ರಕಾಂತ ನಂದಾರೆಡ್ಡಿ, ಹೈಕೋರ್ಟ್ ಅಡಿಷನಲ್ ಅಡ್ವೋಕೇಟ್ ಜನರಲ್ ಕೇಶವ್ ರೆಡ್ಡಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಾಮಕೃಷ್ಣ ನಾಯಕ, ವಿಜಯಲಕ್ಷ್ಮೀ, ಪಿಎಸ್‌ಐ ಸಿದ್ಧರಾಮೇಶ್ವರ, ರೀಡ್ಸ್ ಸಂಸ್ಥೆಯ ಯೋಜನಾ ವ್ಯವಸ್ಥಾಪಕಿ ಕೆ.ಸೀತಾ ಮಹಾಲಕ್ಷ್ಮೀ, ವಿವಿಧ ಸಂಘ ಸಂಸ್ಥೆಗಳ ನಿರ್ದೇಶಕರು, ಸ್ವಯಂ ಸೇವಕರು ಉಪಸ್ಥಿತರಿದ್ದರು.