ಮಂಗಳೂರು: ಧರ್ಮಸ್ಥಳದಲ್ಲಿ ಮೇ 1ರಂದು ಸಂಜೆ ಗಂಟೆ 6.45ಕ್ಕೆ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ 52ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ನಡೆಯಲಿದೆ.
ಈಗಾಗಲೇ 123 ಜೊತೆ ವಧು-ವರರು ವಿವಾಹಕ್ಕೆ ಹೆಸರು ನೋಂದಾಯಿಸಿ, ಪ್ರಮಾಣಪತ್ರಗಳು ಕ್ರಮಬದ್ಧವಾಗಿದ್ದಲ್ಲಿ ಸಾಮೂಹಿಕ ವಿವಾಹದಲ್ಲಿ ಮದುವೆಗೆ ಅವಕಾಶ ನೀಡಲಾಗುವುದು. ವರನಿಗೆ ಧೋತಿ, ಶಾಲು ಹಾಗೂ ವಧುವಿಗೆ ಸೀರೆ, ರವಿಕೆ ಮತ್ತು ಮಂಗಳಸೂತ್ರ ನೀಡಲಾಗುವುದು. ಬೆಳಗ್ಗೆಯಿಂದಲೇ ಶ್ರೀಕ್ಷೇತ್ರ ಧರ್ಮಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರು ವಧು-ವರರಿಗೆ ಸೀರೆ, ರವಿಕೆ ಕಣ, ಧೋತಿ ಮತ್ತು ಶಾಲು ವಿತರಿಸುವರು. ಸಂಜೆ 5ಕ್ಕೆ ವಧು-ವರರು ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು ಅಮೃತವರ್ಷಿಣಿ ಸಭಾಭವನಕ್ಕೆ ಹೋಗುವರು. ಅಲ್ಲಿ ಅವರವರ ಜಾತಿ ಸಂಪ್ರದಾಯದಂತೆ ಒಂದೇ ಮುಹೂರ್ತದಲ್ಲಿ ಸಾಮೂಹಿಕ ವಿವಾಹ ನಡೆಯುತ್ತದೆ. ಹೆಗ್ಗಡೆಯವರು ಹಾಗೂ ಚಲನಚಿತ್ರ ನಟ ದೊಡ್ಡಣ್ಣ ಶುಭಾಶಂಸನೆ ಮಾಡುವರು. ಬಳಿಕ ನೂತನ ದಂಪತಿ ದೇವರ ದರ್ಶನ ಮಾಡಿ, ಅನ್ನಪೂರ್ಣ ಭೋಜನಾಲಯದಲ್ಲಿ ಮದುವೆ ಊಟ ಮಾಡಿ ಊರಿಗೆ ತೆರಳುವರು.
ಸಾಮೂಹಿಕ ವಿವಾಹದಲ್ಲಿ ಮದುವೆ ಆದವರಿಗೆ ಸರ್ಕಾರದ ವತಿಯಿಂದ ವಿವಾಹ ನೋಂದಣಿ ಪ್ರಮಾಣಪತ್ರ ನೀಡಲಾಗುವುದು. ವರದಕ್ಷಿಣೆ ಹಾಗೂ ದುಂದುವೆಚ್ಚ ತಡೆಯುವ ಉದ್ದೇಶದಿಂದ ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳದಲ್ಲಿ 1972ರಲ್ಲಿ ಉಚಿತ ಸಾಮೂಹಿಕ ವಿವಾಹ ಆರಂಭಿಸಿದ್ದು, ಪ್ರತಿ ವರ್ಷ ನಡೆಸಲಾಗುತ್ತದೆ. ಕಳೆದ ವರ್ಷದವರೆಗೆ 12,777 ಜೋಡಿ ಸಾಮೂಹಿಕ ವಿವಾಹದಲ್ಲಿ ವ್ಯವಸ್ಥೆಯಲ್ಲಿ ಮದುವೆಯಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.