ಮಡಿಕೇರಿ:
ಜಗತ್ಪçಸಿದ್ಧ ಮೈಸೂರು ದಸರಾದ ಪ್ರಮುಖ ಆಕರ್ಷಣೆ ಜಂಬೂ ಸವಾರಿಯನ್ನು ಮುನ್ನಡೆಸುವ ಬಹುತೇಕ ಮಾವುತರು ಮತ್ತು ಕಾವಾಡಿಗರ ಬದಕು ಇನ್ನೂ ಕತ್ತಲೆಯಲ್ಲಿದೆ. ದುಬಾರೆ, ಹಾರಂಗಿ ಹಾಗೂ ಆನೆಕಾಡುವಿನಲ್ಲಿ ಆನೆಗಳ ಯೋಗಕ್ಷೇಮ ನೋಡಿಕೊಳ್ಳುವ ಈ ಗಜಪರಿಚಾರಕರ ಯೋಗಕ್ಷೇಮ ವಿಚಾರಿಸಲು ದಸರೆ ಕಳೆದ ನಂತರ ಯಾರೂ ಬರುವುದಿಲ್ಲ. ಮತ್ತೊಂದು ಕಡೆ ಸ್ಥಳೀಯ ಬುಡಕಟ್ಟು ಜನರ ಈ ವಂಶಪಾರAಪರ್ಯ ಕೆಲಸಕ್ಕೆ ಹೊರಗಿನ ವ್ಯಕ್ತಿಗಳನ್ನು ಅರಣ್ಯ ಇಲಾಖೆ ನೇಮಕ ಮಾಡಿಕೊಳ್ಳಲು ಹೊರಟಿರುವುದು ಇಲ್ಲಿನವರ ಆತಂಕಕ್ಕೆ ಕಾರಣವಾಗಿದೆ.
ಮೈಸೂರು ದಸರಾ ಸಂದರ್ಭದಲ್ಲಿ ಗಾಂಭಿರ್ಯದಿAದ ಹೆಜ್ಜೆ ಹಾಕುವ ಆನೆಗಳ ಜತೆ ಅವುಗಳನ್ನು ಮುನ್ನಡೆಸುವ ಮಾವುತ, ಕಾವಾಡಿಗಳು ಎಲ್ಲರ ಕೇಂದ್ರ ಬಿಂದು ಆಗಿರುತ್ತಾರೆ. ಜಂಬೂಸವಾರಿ ಮುಗಿಯುತ್ತಿದ್ದಂತೆಯೇ ತಮ್ಮ ತಮ್ಮ ಆನೆಗಳೊಂದಿಗೆ ಇವರೂ ಕಾಡು ಸೇರಿಕೊಳ್ಳುತ್ತಾರೆ. ದಸರೆಯ ಅವಧಿಯಲ್ಲಿ ರಾಜೋಪಚಾರಕ್ಕೆ ಪಾತ್ರರಾಗುವ ಆನೆಗಳ ಮಾವುತ ಮತ್ತು ಕಾವಾಡಿಗಳ ಬಗ್ಗೆ ಉಳಿದ ಸಮಯದಲ್ಲಿ ಯಾರು ಕೂಡ ಗಮನ ಹರಿಸುವುದಿಲ್ಲ ಎನ್ನುವುದು ಸ್ಥಳೀಯ ಬುಡಕಟ್ಟು ಸಮುದಾಯದ ಮುಖಂಡರ ಆರೋಪ.
ಅರಣ್ಯ ಇಲಾಖೆಯ ಕೊಡಗು ವೃತ್ತಕ್ಕೆ ಸಂಬAಧಿಸಿದAತೆ ಮಡಿಕೇರಿ ವಿಭಾಗದಲ್ಲಿ ಮಂಜೂರಾದ ಗ್ರೂಪ್ ಸಿ ವೃಂದದ 2 ಆನೆ ಜಮದಾರ್ ಹುದ್ದೆಗಳು ಇದ್ದು, 2 ಕೂಡ ಭರ್ತಿ ಆಗಿದೆ. ಮಂಜೂರಾಗಿರುವ ಗ್ರೂಪ್ ಸಿ ವೃಂದದ 30 ಆನೆ ಮಾವುತ ಹುದ್ದೆಗಳ ಪೈಕಿ 18 ಹುದ್ದೆಗಳು ಭರ್ತಿ ಆಗಿದ್ದು, 12 ಹುದ್ದೆಗಳು ಖಾಲಿ ಇದೆ. ಮಂಜೂರಾದ ಗ್ರೂಪ್ ಡಿ ವೃಂದದ 30 ಕಾವಾಡಿಗ ಹುದ್ದೆ ಪೈಕಿ 18 ಭ ಹುದ್ದೆಗಳು ಭರ್ತಿ ಆಗಿದ್ದು, 12 ಹುದ್ದೆಗಳು ಖಾಲಿ ಇದೆ. ಈ ಕಾಯಂ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಮತ್ತು ಸರ್ಕಾರದ ಎಲ್ಲಾ ಸವಲತ್ತುಗಳು ಕೊಡಬೇಕಾಗುತ್ತದೆ.
ಅರಣ್ಯ ಇಲಾಖೆಯಲ್ಲಿ ಕಾಯಂ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆನೆ ಜಮೆದಾರರು, ಆನೆ ಮಾವುತರು ಹಾಗೂ ಆನೆ ಕಾವಾಡಿಗರಿಗೆ ಸ್ಥಳೀಯ ಲಭ್ಯತೆಯಂತೆ ವಸತಿ ಗೃಹಗಳು, ಮಕ್ಕಳು ಅಥವಾ ಅವಲಂಬಿತರನ್ನು ಒಳಗೊಂಡAತೆ ಸರ್ಕಾರಿ ನೌಕರರಿಗೆ ನಿಯಮಗಳಲ್ಲಿ ಲಭ್ಯವಿರುವ ಅವಕಾಶಗಳನ್ವಯ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು. ಆದರೆ ಪರಿಸ್ಥಿತಿ ಅಧಿಕಾರಿಗಳು ಹೇಳಿಕೊಳ್ಳುವ ರೀತಿಯಲ್ಲಿ ಇಲ್ಲ ಎನ್ನುವ ಆರೋಪ ಮಾಡುತ್ತಾರೆ ಬುಡಕಟ್ಟು ಸಮುದಾಯದ ಮುಖಂಡರು.
ಆನೆಗಳನ್ನು ನೋಡಿಕೊಳ್ಳುವುದಕ್ಕೆ ಅರಣ್ಯ ಇಲಾಖೆಯ ಕಾಯಂ ಸಿಬ್ಬಂದಿ ಅಷ್ಟೇ ಸಾಕಾಗುವುದಿಲ್ಲ. ಮಾವುತರು, ಕಾವಾಡಿಗರ ಕುಟುಂಬದವರು ಕೂಡ ತಮ್ಮ ಮನೆಯ ಒಬ್ಬ ಸದಸ್ಯನಂತೆ ಆನೆಗಳನ್ನು ಪಾಲನೆ ಮಾಡುವುದನ್ನು ಸಾಕಾನೆ ಶಿಬಿರಗಳಿಗೆ ಭೇಟಿ ನೀಡಿದ ಸಂದರ್ಭ ಗಮನಿಸಬಹುದು. ಇದರ ಜತೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ದಿನಗೂಲಿ ನೌಕರರು ಕೂಡ ಇರುತ್ತಾರೆ. ಖಾಲಿ ಇರುವ ಮಾವುತ, ಕಾವಾಡಿಗರ ಹುದ್ದೆಗಳಿಗೂ ದಿನಗೂಲಿ ಆಧಾರದಲ್ಲೇ ನೌಕರರನ್ನು ನೇಮಕ ಮಾಡಿಕೊಳ್ಳಲಾಗಿದೆ.
ಆದಿವಾಸಿ ಸಮುದಾಯಕ್ಕೆ ಸೇರಿರುವ ಮಾವುತ, ಕಾವಾಡಿಗರಿಗೆ ಅರಣ್ಯ ಇಲಾಖೆ ಸುಸಜ್ಜಿತ ವಸತಿ ವ್ಯವಸ್ಥೆಯನ್ನೂ ಮಾಡಿಕೊಟ್ಟಿಲ್ಲ. ಉಳಿದ ಸೌಲಭ್ಯಗಳಂತೂ ಕನಸಿನ ಮಾತೇ ಸರಿ. ಸರ್ಕಾರದ ವಸತಿ ಗೃಹಗಳನ್ನು ಅರಣ್ಯ ವೀಕ್ಷಕ, ಅರಣ್ಯ ರಕ್ಷಕ, ಉಪ ವಲಯಾರಣ್ಯಾಧಿಕಾರಿ, ವಲಯಾರಣ್ಯಾಧಿಕಾರಿ... ಹೀಗೆ ಪ್ರಮುಖ ಸಿಬ್ಬಂದಿ ಮತ್ತು ಅಧಿಕಾರಿಗಳೇ ಪಡೆದುಕೊಂಡಿರುತ್ತಾರೆ. ಆದರೆ ಇದೇ ಸರ್ಕಾರಿ ನೌಕರರು ಅನ್ನಿಸಿಕೊಂಡಿರುವ ಆನೆ ಪರಿಚಾರಕರರಲ್ಲಿ ಹೆಚ್ಚಿನವರಿಗೆ ಇನ್ನೂ ಗುಡಿಸಲು ವಾಸದಿಂದ ಮುಕ್ತಿ ಸಿಕ್ಕಿಲ್ಲ.
ತಮಗೂ ಸರ್ಕಾರದಿಂದ ವಸತಿ ಗೃಹ ನಿರ್ಮಿಸಿಕೊಡಬೇಕು ಎಂದು ಈ ಹಿಂದೆ ಹಲವು ಬಾರಿ ಹಿರಿಯಾಧಿಕಾರಿಗಳ ಆನೆಪರಿಚಾರಕರು ಸರ್ಕಾರದ ಗಮನ ಸೆಳೆದಿದ್ದಾರೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ಬುಡಕಟ್ಟು ಕೃಷಿಕರ ಸಂಘದ ತಾಲೂಕು ಅಧ್ಯಕ್ಷ ಆರ್.ಕೆ. ಚಂದ್ರ ಸೇರಿದಂತೆ ಹಲವು ಆದಿವಾಸಿ ಮುಖಂಡರು ಕೂಡ ಸಾಕಷ್ಟು ಶ್ರಮವಹಿಸಿದ್ದು ಅರಣ್ಯ ಮಂತ್ರಿಯ ತನಕ ಮನವಿ ಸಲ್ಲಿಸಿದ್ದಾರೆ. ಆದರೂ ಹೆಚ್ಚಿನ ಪ್ರಗತಿಯೇನೂ ಆಗಿಲ್ಲ. ಕೆಲವು ಕಡೆಗಳಲ್ಲಿ ಒಂದೊAದು ಗುಡಿಸಲಿನಲ್ಲಿ 2 ಅಥವಾ 3 ಕುಟುಂಬಗಳು ವಾಸ ಮಾಡುತ್ತಿರುವುದನ್ನು ಆನೆ ಶಿಬಿರಗಳಲ್ಲಿ ಕಾಣಬಹುದಾಗಿದೆ.
ಕಾಯಂ ಆಗಿರುವ ಆನೆ ಜಮೆದಾರ, ಮಾವುತ ಹಾಗೂ ಕಾವಾಡಿಗರಿಗೆ ಇತರ ಸರ್ಕಾರಿ ನೌಕರರಂತೆ ಪ್ರತಿ ತಿಂಗಳೂ ಸರಿಯಾಗಿ ವೇತನ ಸಿಗುತ್ತಿದೆ. ಆದರೆ ದಿನಗೂಲಿ ನೌಕರರ ಪಾಡು ಕೇಳುವವರಿಲ್ಲ. ನಿಯಮಿತವಾಗಿ ಇವರಿಗೆ ವೇತನ ಸಿಗುವುದಿಲ್ಲ. ಸಂಬಳಕ್ಕಾಗಿ ಹಿರಿಯ ಅಧಿಕಾರಿಗಳ ಮುಂದೆ ಅಂಗಲಾಚುವ ಸ್ಥಿತಿಯೂ ಇದೆ ಎಂದು ಕೆಲವು ದಿನಗೂಲಿ ಆಧಾರದಲ್ಲಿ ಕೆಲಸ ಮಾಡುವ ಮಾವುತರು ನೋವು ತೋಡಿಕೊಳ್ಳುತ್ತಾರೆ.
ದುಬಾರೆ ಸಾಕಾನೆ ಶಿಬಿರದಲ್ಲಿ ಆನೆಗಳನ್ನು ನಂಬಿಕೊAಡೇ ಬದುಕು ಸಾಗಿಸುತ್ತಿರುವ ಸುಮಾರು 120 ಕುಟುಂಬಗಳಿವೆ. ಇವರಿಗೆ ಈ ವೃತ್ತಿ ವಂಶಪಾರAಪರ್ಯವಾಗಿ ಬಂದಿದೆ. ಆನೆಗಳ ಪರಿಚಾರಿಕೆ ಬಿಟ್ಟರೆ ಇವರಿಗೆ ಬೇರೆ ಕೆಲಸ ಗೊತ್ತಿಲ್ಲ. ಕಾಡಿನಲ್ಲಿ ಉಪಟಳ ಮಾಡಿಕೊಂಡು ತಾನು ನಡೆದಿದ್ದೇ ಹಾದಿ ಎನ್ನುವಂತೆ ಅಡ್ಡಾಡುವ ಆನೆಗಳನ್ನು ಹಿಡಿಯುವುದರಿಂದ ಆರಂಭವಾಗಿ ಆ ಆನೆಗಳನ್ನು ಅಲ್ಪ ಸಮಯದಲ್ಲೇ ತಮ್ಮ ಅಂಕುಶದ ನಿಯಂತ್ರಣಕ್ಕೆ ತೆಗೆದುಕೊಳ್ಳುವಲ್ಲಿ ಇಲ್ಲಿಯ ಬುಡಕಟ್ಟು ಜನರು ಪರಿಣಿತಿ ಸಾಧಿಸಿದ್ದಾರೆ. ಮನೆಯಲ್ಲಿ ಸಾಕಿದ ಹಸುವಿನ ರೀತಿಯಲ್ಲೇ ಇಲ್ಲಿಯ ಮಕ್ಕಳು ಸಲೀಸಾಗಿ ಆನೆಗಳ ಜತೆಗೆ ಒಡನಾಡುತ್ತಾರೆ. ಆದರೆ ಈಗ ಹೊಸದಾಗಿ ಆನೆ ಮಾವುತ, ಕಾವಾಡಿಗರ ಹುದ್ದೆ ಭರ್ತಿ ಮಾಡುವ ಸಂದರ್ಭ ಹೊರಗಿನವರಿಗೆ ಅವಕಾಶ ಮಾಡಿಕೊಡುತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಆನೆಗಳ ಜತೆಗೇ ಬದುಕು ಕಟ್ಟಿಕೊಂಡಿರುವ ಸ್ಥಳೀಯರನ್ನು ಆನೆ ಪರಿಚಾರಕರಾಗಿ ನೇಮಕ ಮಾಡಿಕೊಳ್ಳುವ ಬದಲು ಬೇರೆ ಸರ್ಕಾರಿ ಉದ್ಯೋಗಗಳ ನೇಮಕ ರೀತಿಯಲ್ಲಿ ಪರಿಗಣಿಸಿರುವುದಕ್ಕೆ ಈಗಾಗಲೇ ಆದಿವಾಸಿ ಮುಖಂಡರು ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ. ಇಲ್ಲಿ ಈಗ ಆನೆ ಪರಿಚಾರಿಕೆಯಲ್ಲಿ ತೊಡಗಿಸಿಕೊಂಡಿರುವವರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರ ಜತೆಗೆ ಆನೆಗೆ ಸಂಬAಧಿಸಿದ ಎಲ್ಲಾ ಕೆಲಸಗಳನ್ನೂ ಸ್ಥಳೀಯ ಬುಡಕಟ್ಟು ಜನರಿಗೇ ಮೀಸಲಿಡಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.
ದಸರೆ ಸಂದರ್ಭದಲ್ಲಿ ಮಾತ್ರ ಮಾವುತರು ಮತ್ತು ಕಾವಾಡಿಗರ ಬಗ್ಗೆ ಸರ್ಕಾರಕ್ಕೆ ನೆನಪಾಗುತ್ತದೆ. ಉಳಿದ ಅವಧಿಯಲ್ಲಿ ಅವರ ಬಗ್ಗೆ ಯಾರೂ ಕಾಳಜಿ ತೋರಿಸುವುದಿಲ್ಲ. ಸ್ವಾತಂತ್ರö್ಯ ಬಂದು ಇಷ್ಟು ವರ್ಷವಾದರೂ ಅವರ ಬದುಕು ಸುಧಾರಿಸಿಲ್ಲ. ಮೂಲಭೂತ ಸೌಲಭ್ಯಗಳೇ ಇಲ್ಲದ ಪ್ರದೇಶದಲ್ಲಿ ವಾಸ ಮಾಡುತ್ತಿದ್ದಾರೆ. ಇಲ್ಲಿರುವ ಆನೆಪರಿಚಾರಕರಿಗೆ ಅನುಕೂಲಗಳನ್ನು ಕಲ್ಪಿಸಲು ವಿಫಲವಾಗಿರುವ ಇಲಾಖೆ ಈಗ ಆನೆ ಮಾವುತ, ಕಾವಾಡಿ ಹುದ್ದೆಗೆ ಹೊರಗಿನವರನ್ನು ನೇಮಕ ಮಾಡಲು ಹೊರಟಿದೆ. ಸರ್ಕಾರದ ಈ ನಿರ್ಧಾರವನ್ನು ತೀವ್ರವಾಗಿ ವಿರೋಧಿಸುತ್ತೇವೆ. ದುಬಾರೆಯ ಆನೆ ಪರಿಚಾರಿಕೆ ಇಲ್ಲಿನ ಬುಡಕಟ್ಟು ಜನರ ವಂಶಪಾರAಪರ್ಯ ಕೆಲಸ. ಇದು ಇಲ್ಲಿನವರಿಗೇ ಮೀಸಲಾಗಿರಬೇಕು.
ಆರ್.ಕೆ. ಚಂದ್ರ, ಅಧ್ಯಕ್ಷ, ಬುಡಕಟ್ಟು ಕೃಷಿಕರ ಸಂಘ
ಅರಣ್ಯ ಇಲಾಖೆಯಲ್ಲಿ ಆನೆ ಜಮದಾರ ವೃಂದದಲ್ಲಿನ ಹುದ್ದೆಗಳನ್ನು ಸಂಪೂರ್ಣವಾಗಿ ಆನೆ ಮಾವುತ ವೃಂದದಲ್ಲಿನ ಅರ್ಹ ನೌಕರರುಗಳಿಗೆ ಮುಂಬಡ್ತಿ ಮೂಲಕ ಭರ್ತಿ ಮಾಡಲಾಗುತ್ತಿದೆ. ಆನೆ ಮಾವುತ ವೃಂದದಲ್ಲಿನ ಹುದ್ದೆಗಳನ್ನು ಸಂಪೂರ್ಣವಾಗಿ ಆನೆ ಕಾವಾಡಿಗ ವೃಂದದಲ್ಲಿನ ಅರ್ಹ ನೌಕರರುಗಳಿಗೆ ಮುಂಬಡ್ತಿ ಮೂಲಕ ಭರ್ತಿ ಮಾಡಬೇಕಾಗಿದ್ದು, ಆನೆ ಕಾವಾಡಿಗ ವೃಂದದಲ್ಲಿ ಅರ್ಹ ನೌಕರರು ಲಭ್ಯವಾದ ನಂತರ ಕಾಲಕಾಲಕ್ಕೆ ಮುಂಬಡ್ತಿ ಮೂಲಕ ಭರ್ತಿ ಮಾಡಲಾಗುತ್ತಿದೆ. ಆನೆ ಕಾವಾಡಿಗ ವೃಂದದಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಕ್ರಮವಹಿಸಲಾಗುತ್ತಿದೆ.
ಈಶ್ವರ ಬಿ. ಖಂಡ್ರೆ, ಅರಣ್ಯ ಸಚಿವ