ದಾಂಡೇಲಿ: ಭಾರತದ ಚಂದ್ರಯಾನ-3 ಯೋಜನೆ ಯಶಸ್ವಿಯಾಗಬೇಕು, ಜನರಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಆಧ್ಯಾತ್ಮಿಕ ಶಕ್ತಿ ಜಾಗೃತಗೊಳ್ಳಬೇಕು ಹಾಗೂ ಧಾರ್ಮಿಕವಾಗಿ ಗುರುತಿಸಿಕೊಂಡಿರುವ ಉಳವಿ ಶ್ರೀಕ್ಷೇತ್ರ ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕು ಎಂಬುದು ಮೌನಾನುಷ್ಠಾನದ ಸದುದ್ದೇಶವಾಗಿದೆ ಎಂದು ಶ್ರೀಶೈಲ ಜಗದ್ಗುರು ಡಾ. ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.
ಜೊಯಿಡಾ ತಾಲೂಕಿನ ಕುಂಬಾರವಾಡಾದ ಶ್ರೀಕ್ಷೇತ್ರಪಾಲ ದೇವಸ್ಥಾನದ ಸಭಾಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮೌನಾನುಷ್ಠಾನ ಮಂಗಳ ಕಾರ್ಯಕ್ರಮದಲ್ಲಿ ಇಷ್ಠಲಿಂಗ ಪೂಜೆ ನೆರವೇರಿಸಿ ಭಕ್ತಾದಿಗಳನ್ನು ಉದ್ದೇಶಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಅಧಿಕ ಮಾಸದ ಮೌನಾನುಷ್ಠಾನ ಆಚರಣೆ ಪವಿತ್ರ ಕಾರ್ಯವಾಗಿದ್ದು, ಆಧ್ಯಾತ್ಮಿಕ ಶಕ್ತಿ ಜಾಗೃತಿಗೆ ದಾರಿ ಮಾಡಿಕೊಡುತ್ತದೆ. ಒಂದು ವಾರ ಯಾರ ಸಹವಾಸವೂ ಬೇಡವೆಂದು ಕಾಡಿನಲ್ಲಿ ಪೂರ್ಣ ಮೌನ ಆಚರಿಸಲು ಬಂದರೂ, ಈ ಭಾಗದ ಭಕ್ತರು ತೋರಿಸಿದ ಪ್ರೀತಿ, ಭಕ್ತಿ ಕಾಡನ್ನೇ ನಾಡನ್ನಾಗಿ ಮಾಡಿ ತಮಗೆ ಸಂತಸ ನೀಡಿದ್ದಾರೆ ಎಂದರು.
ಬರುವ ದಿನದಲ್ಲಿ ಕಳಸಾಯಿಯ ಶಾಖಾ ಮಠದ ಜಾಗೆಯಲ್ಲಿ ಮಧುಮೇಹ ನಿವಾರಣಾ, ನಿಸರ್ಗ ಚಿಕಿತ್ಸೆ, ಯೋಗ ಆಯುರ್ವೇದ ಕೇಂದ್ರ ಸ್ಥಾಪನೆ ಯೋಜನೆ ಇದೆ. ಮಾನವರ ಕಲ್ಯಾಣ ಇದರ ಉದ್ದೇಶವಾಗಿದೆ ಎಂದರು.
ಅಂಬಿಕಾನಗರದ ಶ್ರೀ ಈಶ್ವರ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಮಾಜಿ ಶಾಸಕ ಸುನೀಲ ಹೆಗಡೆ, ವಿ.ಎಸ್.ಪಾಟೀಲ, ತೋಗರ್ಸಿಯ ಮಹಾಂತ ದೇಶಿಕೇಂದ್ರ ಶಿವಾಚಾರ್ಯರು, ಗೋಕರ್ಣದ ಗುರು ಸಿದ್ದೇಶ್ವರ ಶಿವಾಚಾರ್ಯಸ್ವಾಮೀಜಿ, ಹುನಗುಂದದ ಸಿದ್ಧಲಿಂಗಸ್ವಾಮೀಜಿ, ಹನುಪಾಪುರದ ಸೋಮಶೇಖರ ಶಿವಾಚಾರ್ಯರು, ಹಳಿಯಾಳದ ಕುಮಾರ ವಿರುಪಾಕ್ಷ ಸ್ವಾಮೀಜಿ ಹಾಗೂ ಮುಂಡಗೋಡದ ರುದ್ರಮುನಿ ಸ್ವಾಮೀಜಿ ಮಾತನಾಡಿದರು.
ಅನುಷ್ಠಾನ ಸಮಿತಿ ವತಿಯಿಂದ ಶ್ರೀಶೈಲ ಜಗದ್ಗುರುಗಳನ್ನು ಸತ್ಕರಿಸಲಾಯಿತು. ವೇದಿಕೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಉತ್ತರಕನ್ನಡ ಜಿಲ್ಲಾಧ್ಯಕ್ಷ ಉದಯ ಹೂಲಿ, ಉಳವಿ ದೇವಸ್ಥಾನದ ಟ್ರಸ್ಟ್ ಸದಸ್ಯ ಪ್ರಕಾಶ ಕಿತ್ತೂರ, ಉಳವಿ ದೇವಸ್ಥಾನದ ಪ್ರಧಾನ ಅಚರ್ಕ ಶಂಕರಯ್ಯ ಕಲ್ಮಠ ಉಪಸ್ಥಿತರಿದ್ದರು.
ಅನುಷ್ಠಾನ ಸಮಿತಿ ಸದಸ್ಯರಾದ ಸಿದ್ದಾಪುರದ ಪರಮೇಶ್ವರಯ್ಯ ಕನ್ನಾಳಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲ್ಯಾಣಿ ಕನ್ನಾಳಿಮಠ, ಶಿವು ದೇಸಾಯಿ, ದಾಂಡೇಲಿಯ ಯು.ಎಸ್. ಪಾಟೀಲ ನಿರ್ವಹಿಸಿದರು.