ಮತ್ತಾವು ಅಪಾಯಕಾರಿ ಕಾಲು ಸಂಕದ ಮೇಲೆ ವ್ಯಕ್ತಿಯೊಬ್ಬ ಸಂಚರಿಸುತ್ತಿರುವುದು. 
ಜಿಲ್ಲೆ

ಮತ್ತಾವುಗೆ ಸೇತುವೆಯದ್ದೇ ಚಿಂತೆ

Avinash R

ವಿಜಯವಾಣಿ ಸುದ್ದಿಜಾಲ ಹೆಬ್ರಿ

ನಾಲ್ಕು ದಶಕಗಳಿಂದ ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಪಂ ವ್ಯಾಪ್ತಿಯ ನಕ್ಸಲ್ ಪೀಡಿತ ಮತ್ತಾವು ಭಾಗದ ಜನರ ಸೇತುವೆ ಕನಸು ಇನ್ನೂ ಈಡೇರಿಲ್ಲ. ಅದು ನನಸಾಗಲು ಇನ್ನೆಷ್ಟು ದಿನ, ದಶಕಗಳು ಬೇಕೋ?

ಮಳೆಗಾಲವೂ ಸೇರಿದಂತೆ 6 ತಿಂಗಳು ಮತ್ತಾವು ಸಂಪರ್ಕಕ್ಕೆ ಕೃತಕ ಕಾಲುಸಂಕ ಬಿಟ್ಟರೆ ಮತ್ಯಾವುದೇ ಆಧಾರ ಇಲ್ಲ. ಹೀಗಾಗಿ ನಿತ್ಯವೂ ಇಲ್ಲಿನ ಜನರಿಗೆ ಸಂಚಾರ ಸವಾಲು ಹಾಕುತ್ತದೆ. ಸ್ವಲ್ಪ ಎಡವಿದರೂ ಹೊಳೆಪಾಲಾಗುವುದು ನಿಶ್ಚಿತ. ಆದರೂ ಶಾಶ್ವತ ಸೇತುವೆ ನಿರ್ಮಿಸುವುದು ಇನ್ನೂ ಖಚಿತವಾಗಿಲ್ಲ.

ಜನಜೀವನಕ್ಕೆ ತೊಡಕು

ಇಲ್ಲಿರುವ ಕುಟುಂಬಗಳಿಗೆ ಜೀವನ ನಿರ್ವಹಣೆಗೂ ತೊಂದರೆಯಿದೆ. ಅಗತ್ಯ ವಸ್ತುಗಳ ಸಂಗ್ರಹ, ಆರೋಗ್ಯ ಹದಗೆಟ್ಟಾಗ, ಗರ್ಭಿಣಿಯರಿಗೆ ಹೆರಿಗೆ ನೋವು ಉಂಟಾದಾಗ, ಕೃಷಿ ಉತ್ಪನ್ನ ಮಾರಾಟಕ್ಕಾಗಿ ತೆರಳುವಾಗ ಮಳೆಗಾಲದ ದಿನಗಲ್ಲಿ ಇಲ್ಲಿ ಸಾಧ್ಯವೇ ಇಲ್ಲ. ಅಪಾಯಕಾರಿಯಾದ ಕಾಲುಸಂಕದಲ್ಲಿ ಬದುಕು ನೂಕಿಸಲು ಆಗುತ್ತಲೇ ಇಲ್ಲ. ಹೆತ್ತವರು ಜೀವಭಯದಿಂದ ತಮ್ಮ ಮಕ್ಕಳನ್ನು ಹೆಬ್ರಿ ಮತ್ತು ಕಾರ್ಕಳದ ಹಾಸ್ಟೆಲ್‌ಗೆ ಸೇರಿಸಿದ್ದಾರೆ. ಹೀಗಾಗಿಯೇ ಮತ್ತಾವು ಭಾಗದ ಜನರು ಸೇತುವೆ ಬೇಡಿಕೆ ಇಟ್ಟಿದ್ದು. ಆದರೆ, ಅದು ಕೈಗೆಟುಕದ ಗಗನ ಕುಸುಮವಾಗಿಯೇ ಇದೆ.

ಕಾಲುಸಂಕ ನಿರ್ಮಾಣ

ಮತ್ತಾವಿನಲ್ಲಿ ಮಲೆಕುಡಿಯ ಕುಟುಂಬದ ಸುಮಾರು 11 ಕುಟುಂಬಗಳಿದ್ದು, 40ಕ್ಕೂ ಹೆಚ್ಚು ಮಂದಿ ವಾಸಿಸುತ್ತಿದ್ದಾರೆ. ಇವರ ಪೂರ್ವಜರು 200 ವರ್ಷಗಳ ಹಿಂದೆಯೇ ಮತ್ತಾವಿನಲ್ಲಿ ನೆಲೆಯೂರಿದ್ದರು. ಇಲ್ಲಿನವರು ಕಾರ್ಕಳ, ಹೆಬ್ರಿ, ಮುನಿಯಾಲು ಹಾಗೂ ಕಬ್ಬಿನಾಲೆ ಸಂಪರ್ಕಿಸಲು ಕಾಲುಸಂಕವೇ ಗತಿ. ಕಾನನದ ನಡುವೆ ವಾಸಿಸುವ ಇವರು ಇನ್ನೊಂದು ಪ್ರದೇಶಕ್ಕೆ ಸಂಪರ್ಕ ಸಾಧಿಸಲು ಮಳೆಗಾಲದಲ್ಲಿ ಅಬ್ಬರದಲ್ಲಿ ಹರಿಯುವ ಹಳ್ಳಕ್ಕೆ ಕಾಲುಸಂಕ ನಿರ್ಮಿಸಿಕೊಳ್ಳುತ್ತಾರೆ. ಕೆಲವೊಮ್ಮೆ ವಿಪರೀತ ಮಳೆಗೆ ಕಾಲುಸಂಕ ಕೊಚ್ಚಿಹೋಗುತ್ತವೆ. ಈ ಬಾರಿ ಕಾಲುಸಂಕ ಕೊಚ್ಚಿ ಹೋಗಬಾರದೆಂದು ಅಲ್ಲಲ್ಲಿ ಮರಕ್ಕೆ ತಂತಿ ಅಳವಡಿಸಿ ಕಟ್ಟಿದ್ದಾರೆ.

ಆರೋಗ್ಯ ಹದಗೆಟ್ಟರೆ ಅಪಾಯ

ಕಾಲುಸಂಕದಿಂದ ಕಿಲೋ ಮೀಟರ್ ದೂರದಲ್ಲಿ ಒಂದೊಂದು ಮನೆಗಳಿವೆ. ಮಳೆಗಾಲದಲ್ಲಿ ವಾಹನದ ಸಂಪರ್ಕ ಇಲ್ಲದ್ದರಿಂದ ವರ್ಷಕ್ಕೆ ಬೇಕಾಗುವಷ್ಟು ಅಕ್ಕಿ ಸಹಿತ ಅಗತ್ಯ ವಸ್ತುಗಳ ದಾಸ್ತಾನು ಮಾಡಬೇಕಾಗುತ್ತದೆ. ಅನಾರೋಗ್ಯ ಉಂಟಾದರೆ ಅವರನ್ನು ಕಂಬಳಿಯಲ್ಲಿ ಮಲಗಿಸಿ ಹೊತ್ತು ಸಾಗಿಸಬೇಕಾಗಿದೆ. ‘ಕೆಲವು ವರ್ಷದ ಹಿಂದೆ ಹುಲ್ಲು ತರಲು ಹೋದ ನನ್ನ ತಮ್ಮ ಬಂಡೆಕಲ್ಲಿನಿಂದ ಜಾರಿ ಬಿದ್ದಿದ್ದ. ಕಾಲುಸಂಕದಲ್ಲಿ ಹೊತ್ತು ಆಸ್ಪತ್ರೆಗೆ ದಾಖಲಿಸಿದರೂ ಉಳಿಸಿಕೊಳ್ಳಲಾಗಲಿಲ್ಲ. ಸೇತುವೆ ಇದ್ದಿದ್ದರೆ ತಮ್ಮ ಉಳಿಯುತ್ತಿದ್ದ’ ಎಂದು ಅಣ್ಣ ನಾರಾಯಣ ಗೌಡ ಅಳಲು ತೋಡಿಕೊಳ್ಳುತ್ತಾರೆ. ಇದು ಇಲ್ಲಿನ ಜನರ ಅಸಹಾಯಕತೆಯ ಕೇವಲ ಒಂದು ಉದಾಹರಣೆಯಷ್ಟೇ.

ಕಾಡು ಉತ್ಪತ್ತಿಯೇ ಆಧಾರ

ಈ ಭಾಗದಲ್ಲಿ ಕಾಡುಪ್ರಾಣಿಗಳ ಹಾವಳಿಯೂ ಇದೆ. ಈಗೀಗ ಹುಲಿ ಹಾಗೂ ಚಿರತೆಗಳ ಓಡಾಟ ಕಂಡುಬರುತ್ತಿದೆ. ಕಾಡೆಮ್ಮೆ, ಹಂದಿ, ಕರಡಿ, ಜಿಂಕೆ ಹಾಗೂ ಇನ್ನಿತರ ಪ್ರಾಣಿಗಳು ಕೃಷಿ ನಾಶಪಡಿಸುತ್ತಿದೆ. ಹೀಗಾಗಿ ಇವರಿಗೆ ಕಾಡು ಉತ್ಪತ್ತಿಯಾದ ಗೋರೆಕಾಯಿ, ರಾಮಪತ್ರೆ, ಸೀಗೆ, ಹುಳಿ, ಜೇನು, ದಾಲ್ಚಿನ್ನಿ ಹಾಗೂ ಇನ್ನಿತರ ಸಾಂಬಾರು ಪದಾರ್ಥಗಳನ್ನು ಸಂಗ್ರಹಿಸಿ ಮಾರಾಟ ಮಾಡುವುದೇ ಜೀವನಾಧಾರವಾಗಿದೆ. ಯಾವುದೇ ಸೌಕರ್ಯ ಇಲ್ಲದ್ದರಿಂದ ಇಲ್ಲಿನ ಯುವಕ-ಯುವತಿಯರಿಗೆ ವೈವಾಹಿಕ ಸಂಬಂಧ ಬೆಸೆಯುವುದೇ ಕಷ್ಟವಾಗಿದೆ.

ಲೆಕ್ಕಕ್ಕಿಲ್ಲದ ಅರಣ್ಯ ಹಕ್ಕುಪತ್ರ

ಬುಡಕಟ್ಟು ವ್ಯವಹಾರಗಳ ಮಂತ್ರಾಲಯ ಸ್ವಾಧೀನತೆಯಲ್ಲಿರುವ ಅರಣ್ಯ ಭೂಮಿಗಾಗಿ ಹಕ್ಕುಪತ್ರ ನೀಡಿರುತ್ತಾರೆ. ಈ ಹಕ್ಕುಪತ್ರ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ. ಇದಕ್ಕೆ ಸರ್ಕಾರದ ಯಾವುದೇ ಸೌಲಭ್ಯ ಸಿಗದಾಗಿದೆ. ಬ್ಯಾಂಕ್ ಸಾಲ ಪಡೆಯಲು, ಅಡಮಾನವಿಡಲು, ಬೇರೆಯವರಿಗೆ ವರ್ಗಾಯಿಸಲೂ ಅಸಾಧ್ಯ. ಇಲ್ಲಿ ಅಡಕೆ ಬೆಳೆಯುತ್ತಾರೆ. ಆದರೆ, ಕೃಷಿ ಇಲಾಖೆ ವತಿಯಿಂದ ಟಾರ್ಪಲ್ ಕೂಡ ಪಡೆಯಲು ಸಾಧ್ಯವಿಲ್ಲ.

ನಕ್ಸಲ್ ಬಾಂಬ್ ದಾಳಿಗೆ 18 ವರ್ಷ

ಮತ್ತಾವು ಸೇತುವೆ ನಿರ್ಮಾಣಕ್ಕೆ ನಕ್ಸಲರು ಪರೋಕ್ಷವಾಗಿ ಜನರಿಗೆ ಕುಮ್ಮಕ್ಕು ನೀಡಿದ್ದರು. ವಿವಿಧ ಬೇಡಿಕೆ ಈಡೇರಿಸುವಂತೆ 2005ರ ಜುಲೈ 28ರಂದು ಮತ್ತಾವು ಸಮೀಪದಲ್ಲಿ ನೆಲಬಾಂಬ್ ಸ್ಫೋಟಿಸಿದ್ದರು. ದೇಶದ ಗಮನ ಸೆಳೆದ ಈ ದುರ್ಘಟನೆಯಲ್ಲಿ ಹಲವು ಪೊಲೀಸರು ಗಾಯಗೊಂಡಿದ್ದರು. ಇಂದಿಗೆ (ಜುಲೈ 28) ನಕ್ಸಲ್ ದಾಳಿ ನಡೆದು 18 ವರ್ಷ ಕಳೆದಿದೆ. ವಿದ್ಯುತ್ ಸಂಪರ್ಕ ನೀಡಲು ಮಹತ್ತರ ಪಾತ್ರವಹಿಸಿದ ನಕ್ಸಲ್ ನಿಗ್ರಹ ದಳದ ಸಿಬ್ಬಂದಿಯನ್ನು ಇಲ್ಲಿಯ ಜನ ಸದಾ ಸ್ಮರಿಸುತ್ತಾರೆ. ಗೋಪಾಲ ಭಂಡಾರಿ ಅವರು ವಿದ್ಯುತ್ ಒದಗಿಸುವ ಇರಾದೆ ಹೊಂದಿದ್ದು, ಅರಣ್ಯ ಇಲಾಖೆ ಹಾಗೂ ಮೆಸ್ಕಾಂ ಸೂಕ್ತವಾಗಿ ಸ್ಪಂದಿಸಿರಲಿಲ್ಲ. ಹೀಗಾಗಿ ರಾತ್ರೋರಾತ್ರಿ ನಕ್ಸಲ್ ನಿಗ್ರಹದಳದ ಸಿಬ್ಬಂದಿ ಮತ್ತಾವಿಗೆ ವಿದ್ಯುತ್ ಸಂಪರ್ಕ ಕೊಡಿಸಲು ಹರಸಾಹಸ ಪಟ್ಟಿದ್ದರು. ಅವರ ಸ್ಮರಣೆ ನಾವು ನಿರಂತರ ಮಾಡುತ್ತೇವೆ ಎನ್ನುತ್ತಾರೆ ಇಲ್ಲಿಯ ಜನ.

ಮತ್ತಾವು ಸೇತುವೆ ನಮ್ಮ ಸಮುದಾಯದ ಬಹುಕಾಲದ ಬೇಡಿಕೆಯಾಗಿದೆ. ಇದಕ್ಕಾಗಿ ಮಲೆಕುಡಿಯ ಸಂಘದ ವತಿಯಿಂದಲೂ ನಾವೆಲ್ಲ ಬೇಡಿಕೆ ಇಟ್ಟಿದ್ದೆವು. ಮುಂದಿನ ವರ್ಷ ಆಗುತ್ತದೆ ಎಂಬ ಭರವಸೆ ಕೊಡುತ್ತಾರೆ. ನಮಗೆ ಕಾಲುಸಂಕದಲ್ಲಿ ಸಂಚರಿಸಲು ಭಯವಾಗುತ್ತಿದೆ. ಶೀಘ್ರ ಸೇತುವೆ ನಿರ್ಮಿಸಿಕೊಡಬೇಕು.-ಗೀತಾ ಮತ್ತಾವು, ಸ್ಥಳೀಯ ಮಹಿಳೆ ಮತ್ತಾವು ಸೇತುವೆ ನಿರ್ಮಾಣಕ್ಕೆ ಅರಣ್ಯ ಇಲಾಖೆಯಿಂದ ತೊಡಕಾಗಿದೆ. ಅರಣ್ಯ ಇಲಾಖೆಯಿಂದ ಸೇತುವೆ ನಿರ್ಮಾಣಕ್ಕೆ ಅಧಿಕೃತ ಅನುಮತಿ ಇನ್ನೂ ಸಿಕ್ಕಿಲ್ಲ. ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಮುಂದಿನ ದಿನಗಳಲ್ಲಿ ಜನರ ಬೇಡಿಕೆಯ ಸೇತುವೆ ನಿರ್ಮಾಣದ ಬಗ್ಗೆ ಅಗತ್ಯ ಕ್ರಮ ವಹಿಸಲಾಗುವುದು.-ಸುನೀಲ್‌ ಕುಮಾರಶಾಸಕ, ಕಾರ್ಕಳ ವಿಧಾನಸಭಾ ಕ್ಷೇತ್ರ ಜನರ ಬೇಡಿಕೆಯಂತೆ ಮೇಲಧಿಕಾರಿಗಳ ನಿರ್ದೇಶನದಲ್ಲಿ ಅರಣ್ಯ ಇಲಾಖೆಯಿಂದ ಎಲ್ಲ ಪ್ರಕ್ರಿಯೆ ಮುಗಿದಿದೆ. ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸ್ಟೇಟ್ ಬೋರ್ಡ್ ಫಾರ್ ವೈಲ್ಡ್‌ಲೈಫ್ ಮಂಡಳಿ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಸೇತುವೆ ನಿರ್ಮಾಣದ ಕನಸು ನನಸಾಗಬಹುದು.-ಗಣಪತಿ ಕೆ.ಡಿಸಿಎಫ್, ಕುದುರೆಮುಖ ವನ್ಯಜೀವಿ ವಿಭಾಗ ನಮ್ಮ ಸಮುದಾಯದ ಜನರ ಸಮಸ್ಯೆ ಹೇಳತೀರದು. ಆರೋಗ್ಯ ಹದಗೆಟ್ಟರೆ ಜೋಲಿಯೇ ಗತಿ. ಆರು ತಿಂಗಳು ಮತ್ತಾವಿಗೆ ಸಂಪರ್ಕ ಕಷ್ಟ. ಮೂಲಸೌಲಭ್ಯ ಇಲ್ಲದ್ದರಿಂದ ಅಲ್ಲಿನ 11 ಕುಟುಂಬಗಳು ಅತ್ಯಂತ ಕಷ್ಟದಾಯಕ ಜೀವನ ನಡೆಸುತ್ತಿದೆ. ನಮ್ಮವರ ಸಮಸ್ಯೆ ಬಗೆಹರಿಸಲು ರಾಜಕೀಯ ನಾಯಕರು ಕೈಜೋಡಿಸಬೇಕು.-ಗಂಗಾಧರ ಗೌಡಅಧ್ಯಕ್ಷ, ಜಿಲ್ಲಾ ಮಲೆಕುಡಿಯ ಸಂಘ, ಉಡುಪಿ https://www.vijayavani.net/manglore-city-road-problem https://www.vijayavani.net/boat-fishing-stopped-due-to-red-alert