ಜಿಲ್ಲೆ

ಹಾರಂಗಿಯಲ್ಲಿ ಮತ್ಸಾಲಯ

ಮಡಿಕೇರಿ:

ಹಾರಂಗಿಯ ಮಹಶೀರ್ ಮೀನು ಮರಿಗಳ ಉತ್ಪಾದನಾ ಮತ್ತು ಪಾಲನಾ ಕೇಂದ್ರದಲ್ಲಿ ‘ಮತ್ಸ್ಯಾಲಯ’ ಸ್ಥಾಪಿಸುವ ಬಗ್ಗೆ ಶಾಸಕರು ಕೋರಿದ್ದು, ಈ ಸಂಬಂಧ ಅಗತ್ಯ ಕ್ರಮವಹಿಸಲಾಗುವುದು ಎಂದು ಸಚಿವ ಮಂಕಾಳ ಎಸ್.ವೈದ್ಯ ತಿಳಿಸಿದರು.

ಹಾರಂಗಿಯ ಮಹಶೀರ್ ಮೀನುಮರಿಗಳ ಉತ್ಪಾದನಾ ಹಾಗೂ ಪಾಲನಾ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿ ವೀಕ್ಷಿಸಿದ ನಂತರ ಸುದ್ದಿಗಾರರ ಜೊತೆ ಸಚಿವರು ಮಾತನಾಡಿದರು. ಮೀನು ಸಾಕಾಣಿಕೆದಾರರಿಗೆ ಉಚಿತವಾಗಿ ಮೀನು ಮರಿಗಳನ್ನು ನೀಡಲಾಗುತ್ತದೆ. ಮೀನುಗಾರರಿಗೆ/ ಮೀನು ಮಾರಾಟಗಾರರಿಗೆ ಮತ್ಸ್ಯವಾಹಿನಿ ಯೋಜನೆಯಡಿ 150 ದ್ವಿಚಕ್ರ ವಾಹನಗಳನ್ನು ನೀಡಲು ಮುಂದಾಗಲಾಗಿದೆ. ಜೊತೆಗೆ ಇನ್ನೂ 150 ದ್ವಿಚಕ್ರ ವಾಹನಗಳನ್ನು ಒಟ್ಟು 300 ದ್ವಿಚಕ್ರ ವಾಹನಗಳನ್ನು ವಿತರಿಸಲು ನಿರ್ಧರಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಶಾಸಕರಾದ ಡಾ.ಮಂತರ್ ಗೌಡ ಅವರು ಮಹಶೀರ್ ಮೀನು ಮರಿಗಳ ಉತ್ಪಾದನಾ ಮತ್ತು ಪಾಲನಾ ಕೇಂದ್ರದಲ್ಲಿ ‘ಮತ್ಸ್ಯಾಲಯ’ ಸ್ಥಾಪಿಸಬೇಕಿದೆ. ಈ ಕೇಂದ್ರದಲ್ಲಿ ಕೊಳಗಳ ಅಭಿವೃದ್ಧಿಗೆ ಮುಂದಾಗಬೇಕಿದೆ ಎಂದು ಸಚಿವರಲ್ಲಿ ಮನವಿ ಮಾಡಿದರು. ಹಾರಂಗಿ ಜಲಾಶಯ ವೀಕ್ಷಣೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಆ ನಿಟ್ಟಿನಲ್ಲಿ ಮತ್ಸ್ಯಾಲಯ ಸ್ಥಾಪಿಸುವುದರಿಂದ ಸಾರ್ವಜನಿಕರಿಗೆ ಮೀನು ಉತ್ಪಾದನೆ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯಲಿದೆ ಎಂದು ಶಾಸಕರು ತಿಳಿಸಿದರು.

ಮೀನುಗಾರಿಕೆ ಇಲಾಖೆಯ ಹಾರಂಗಿ ವಿಭಾಗದ ಸಹಾಯಕ ನಿರ್ದೇಶಕರಾದ ಎಸ್.ಎಂ.ಸಚಿನ್ ಅವರು ಮಾಹಿತಿ ನೀಡಿ ಮಹಶೀರ್ ಒಂದು ಸಿಪ್ರಿನಿಡ್ (ಕಾರ್ಪ್ ಕುಟುಂಬಕ್ಕೆ) ಸೇರಿದ ಮೀನಾಗಿದೆ. ಅದರ ಪಾಶ್ರ್ವದ ರೇಖೆಯ ಉದ್ದಕ್ಕೂ ದೊಡ್ಡಗಾತ್ರದ ಉರುಪೆಗಳಿಂದ ಕೂಡಿದ್ದು, ಎರಡು ಜೋಡಿ ಬಾರ್ಬೇಲ್(ಮೀಸೆ)ಗಳಿಂದ ಗುರುತಿಸಬಹುದು. ಮಹಶೀರ್ ಜಾತಿ ಮೀನುಗಳು ವಲಸೆ ಮೀನುಗಳಾಗಿದ್ದು, ಮಳೆಗಾಲದಲ್ಲಿ ಮೇಲ್ಮುಖವಾಗಿ ಚಲಿಸುತ್ತವೆ. ಇವು ಸ್ವಚ್ಛ, ವೇಗವಾಗಿ ಹರಿಯುವ ಹಾಗೂ ಆಮ್ಲಜನಕಯುಕ್ತ ನೀರನ್ನು ಬಯಸುತ್ತವೆ. ಮಹಶೀರ್ ಜಾತಿ ಮೀನುಗಳಿಗೆ ಸಂತಾನೋತ್ಪತ್ತಿ ಮಾಡಲು ಜಲ್ಲಿ/ ಮರಳುಗಳಿಂದ ಕೂಡಿರುವ ಹೊಳೆಯ ಹಾಸಿಗೆ ಬೇಕಾಗುತ್ತದೆ ಹಾಗೂ ಸೂಕ್ತ ಸಂತಾನೋತ್ಪತಿ ಸ್ಥಳಗಳ ಹುಡುಕಾಟದಲ್ಲಿ ಸಾಕಷ್ಟು ದೂರ ವಲಸೆ ಹೋಗಬಹುದು ಎಂದು ಮಾಹಿತಿ ನೀಡಿದರು.

ಮಹಶೀರ್ ಒಮ್ನಿಓರ್(ಸರ್ವಭಕ್ಷಕ) ಮೀನಾಗಿದ್ದು, ಆಹಾರದಲ್ಲಿ ವ್ಯಾಪಕವಾದ ಪಾಚಿ, ಕ್ರಶ್ಟೇಶಿಯನ್ಸ್, ಕೀಟಗಳು, ಕಪ್ಪೆ ಇತರೆ ಮೀನು ಹಾಗೂ ಮರಗಳಿಂದ ಬೀಳುವ ಹಣ್ಣುಗಳು ಸೇರಿವೆ. ಮಹಶೀರ್ ದೇವರ ಮೀನು ಎಂದು ಪ್ರಸಿದ್ಧವಾಗಿದ್ದು, ಅದರ ಸಾಂಸ್ಕøತಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆಯ ಹೊರತಾಗಿ, ಮಹಶೀರ್ ಅನ್ನು ಭಾರತದಾದ್ಯಂತ ದೇವಾಲಯ, ಅಭಯಾರಣ್ಯಗಳಲ್ಲಿ ರಕ್ಷಿಸಲಾಗಿದೆ. ಮಹಶೀರ್ ಮೀನು ಚುರುಕುಬುದ್ದಿಯ ಕ್ರೀಡಾಮೀನಾಗಿದ್ದು, ಆಂಗ್ಲಿಂಗಗ್ ಮೂಲಕ ಸಂರಕ್ಷಣೆಯಲ್ಲಿ ಹೆಚ್ಚಿನ ಆದಾಯ ನೀಡುತ್ತದೆ ಎಂದು ಸಚಿನ್ ತಿಳಿಸಿದರು.

ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ಆರ್.ಗಣೇಶ್, ಉಪ ನಿರ್ದೇಶಕರಾದ ಸಿ.ಎಸ್.ಸಚಿನ್, ಸಹಾಯಕ ನಿರ್ದೇಶಕರಾದ ಮಿಲನ ಭರತ್, ಸ್ನೇಹ, ಮೇಲ್ವಿಚಾರಕರಾದ ಬಿ.ಮಂಜು ಇತರರು ಇದ್ದರು.