ವಿಜಯಪುರ : ಮಕ್ಕಳಿಗೆ ಸಾಮಾನ್ಯ ಜ್ಞಾನ ವೃದ್ಧಿಸುವ ಉದ್ದೇಶದಿಂದ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮೆಟ್ರಿಕ್ ಮೇಳ ಆಯೋಜಿಸಲಾಗಿತ್ತು.
ಶಿಕ್ಷಣದೊಂದಿಗೆ ವ್ಯವಹಾರದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಆಯೋಜಿಸಿದ್ದ "ಮೆಟ್ರಿಕ್ ಮೇಳ'ದಲ್ಲಿ 8 ರಿಂದ 10ನೇ ತರಗತಿವರೆಗಿನ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದು, ಮಳಿಗೆಗಳಲ್ಲಿ ನಾನಾ ಬಗೆಯ ವಸ್ತುಗಳನ್ನು ಮಾರಾಟ ಮಾಡಿ ವ್ಯಾಪಾರದ ಅರಿವು ಪಡೆಯುವುದರೊಂದಿಗೆ ಲಾಭ ಗಳಿಸುವ ಮಾರ್ಗವನ್ನು ವಿದ್ಯಾರ್ಥಿಗಳು ಕಂಡುಕೊಂಡರು. ಶಾಲಾ ಆವರಣದಲ್ಲಿ ಸಾಲು ಸಾಲು ಮಳಿಗೆಗಳು, ಬಗೆ ಬಗೆಯ ತಾಜಾ ಹಣ್ಣು, ತರಕಾರಿ, ಬಣ್ಣ&ಬಣ್ಣದ ಉಡುಪುಗಳು, ಸೌಂದರ್ಯ ವರ್ಧಕಗಳು, ಸಿಹಿ ತಿನಿಸುಗಳು, ವೆಜ್ ಹಾಗೂ ನಾನ್ ವೈಜ್ ಊಟದ ಟೆಂಟುಗಳು ಸೇರಿ ನಾನಾ ರೀತಿಯ ವಸ್ತುಗಳ ಮಾರಾಟ ಭರದಿಂದ ನಡೆಯಿತು. ಸಾರ್ವಜನಿಕರು, ಪಾಲಕರು, ಮಕ್ಕಳು ಮುಗಿಬಿದ್ದು ಅಗತ್ಯ ವಸ್ತುಗಳನ್ನು ಖರೀದಿಸಿದರು. ಗ್ರಾಹಕರನ್ನು ಸೆಳೆಯಲು ಮಕ್ಕಳು ವಸ್ತುಗಳ ಅಗ್ಗದ ಬೆಲೆ ಕೂಗಿ ಕರೆದರೆ, ಮತ್ತೆ ಕೆಲ ಮಕ್ಕಳು ಎರಡು ವಸ್ತು ಕೊಂಡರೆ, ಒಂದು ವಸ್ತು ಉಚಿತ ಎಂಬ ಆಕರ್ಷಣೆಯ ತಂತ್ರ ಉಪಯೋಗಿಸಿದರು.
ಮೆಟ್ರಿಕ್ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಪುರಸಭಾ ಮಾಜಿ ಅಧ್ಯೆ ವಿಮಲಾ ಬಸವರಾಜ್, ತರಗತಿಯಲ್ಲಿ ಪಡೆದ ಜ್ಞಾನವನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಲು ಈ ಮೇಳ ಸಹಕಾರಿಯಾಗಿದೆ ಎಂದರು. ಪ್ರಭಾರಿ ಉಪಾಪ್ರಾಂಶುಪಾಲ ಬಿ.ಎಸ್.ನಾರಾಯಣ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವ್ಯವಹಾರಿಕ ಕೌಶಲ ಬೆಳೆಸುವ ಉದ್ದೇಶದಿಂದ ಮೇಳ ಹಮ್ಮಿಕೊಳ್ಳಲಾಗಿದೆ. ವ್ಯಾಪಾರ ಮಾಡುವುದರಿಂದ ಗಣಿತದ ಲೆಕ್ಕಗಳನ್ನು ಸರಳಗೊಳಿಸುವ ತಂತ್ರವನ್ನು ವಿದ್ಯಾರ್ಥಿಗಳು ಅರಿಯುತ್ತಾರೆ ಎಂದರು. ಪುರಸಭೆ ಸದಸ್ಯ ಎಂ.ನಾರಾಯಣಸ್ವಾಮಿ, ನಿವೃತ್ತ ಪ್ರಾಂಶುಪಾಲ ವೆಂಕಟೇಶ್, ಏರ್ಟೆಲ್ನ ಪವನ್ ಜೋಷಿ, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.