ಪುತ್ತೂರು ಗ್ರಾಮಾಂತರ: ಕೆಯ್ಯೂರಿನ ಕೆಪಿಎಸ್ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಿಂದ ಶುಕ್ರವಾರ ತಾವೇ ತಯಾರಿಸಿದ ವಸ್ತುಗಳ ವ್ಯಾಪಾರದ ಮೆಟ್ರಿಕ್ ಮೇಳ ನಡೆಯಿತು.
ವಿದ್ಯಾರ್ಥಿಗಳು ಮನೆಯಲ್ಲಿ ತಯಾರಿಸಿ ತಂದ ವಿವಿಧ ತಿಂಡಿ-ತಿನಿಸು, ಖಾದ್ಯಗಳನ್ನು ಹಾಗೂ ವಿವಿಧ ಬಗೆಯ ತರಕಾರಿ, ಹಣ್ಣು- ಹಂಪಲು ಸಹಿತ ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡಿ ಸಂಭ್ರಮಿಸಿದರು.
ಕೇಕ್, ಉಪ್ಪಿನಕಾಯಿ, ಚಟ್ಟಂಬಡೆ, ಎಳನೀರು ಜ್ಯೂಸ್, ವಿವಿಧ ಬಗೆಯ ಐಸ್‌ಕ್ರೀಮ್, ಚರುಮುರಿ, ಮನೆಯಲ್ಲಿ ಬೆಳೆದ ಸೌತೆಕಾಯಿ, ಸೋರೆಕಾಯಿ, ಬಸಳೆ, ಕುಂಬಳಕಾಯಿ, ಕಬ್ಬು, ಹರಿವೆ, ತೆಂಗಿನಕಾಯಿ, ನೆಲ್ಲಿಕಾಯಿ, ಪಪ್ಪಾಯಿ, ಕಲ್ಲಂಗಡಿ ಅಲ್ಲದೆ ಹಣ್ಣು- ಹಂಪಲುಗಳು, ಬಟ್ಟೆ ಸಹಿತ ವಿವಿಧ ವಸ್ತುಗಳನ್ನು ವಿದ್ಯಾರ್ಥಿಗಳು ಉತ್ಸಾಹದಿಂದ ಮಾರಾಟ ಮಾಡಿದರು. ಪಾಲಕರು, ಶಿಕ್ಷಕರು ಹಾಗೂ ಗ್ರಾಮಸ್ಥರು ಗ್ರಾಹಕರಾಗಿ ಪ್ರೋತ್ಸಾಹಿಸಿದರು.
ಎಸ್‌ಡಿಎಂಸಿ ಉಪಾಧ್ಯಕ್ಷ ಚರಣ್ ಕುಮಾರ್ ಸಣಂಗಳ ಮೇಳ ಉದ್ಘಾಟಿಸಿದರು. ಕೆಯ್ಯೂರು ಕೆಪಿಎಸ್ ಪ್ರಾಂಶುಪಾಲ ಇಸ್ಮಾಯಿಲ್ ಕೆ, ಉಪಪ್ರಾಂಶುಪಾಲ ವಿನೋದ್ ಕುಮಾರ್ ಕೆ.ಎಸ್. ಮಾರ್ಗದರ್ಶನ ನೀಡಿದರು. ಎಸ್‌ಡಿಎಂಸಿ ಸದಸ್ಯರು, ಹಳೇ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು, ವಿದ್ಯಾರ್ಥಿಗಳ ಪಾಲಕರು ಪಾಲ್ಗೊಂಡರು. ಕೆಪಿಎಸ್ ಕೆಯ್ಯೂರು ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕ ಬಾಬು ಎಂ. ಸ್ವಾಗತಿಸಿದರು. ಶಿಕ್ಷಕ ರವಿ ವಂದಿಸಿದರು.