ಜಿಲ್ಲೆ

ಹಾವೇರಿ ಜಿಲ್ಲೆಯಲ್ಲಿ ಎಗ್ಗಿಲ್ಲದೆ ಸಾಗಿದೆ ಮಟ್ಕಾ ದಂಧೆ

ಹಾವೇರಿ: ರಾಣೆಬೆನ್ನೂರ ತಾಲೂಕಿನ ಕುಮಾರಪಟ್ಟಣ, ಹಲಗೇರಿ, ಹಿರೇಕೆರೂರ, ರಟ್ಟಿಹಳ್ಳಿ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಮಟ್ಕಾ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಯುವಕರು ಹಾಗೂ ಬಡ ಕೂಲಿ ಕಾರ್ವಿುಕರು ಮಟ್ಕಾ ದಂಧೆ ಬಲೆಗೆ ಸಿಲುಕಿರುವುದರಿಂದ ಅವಲಂಬಿತ ಕುಟುಂಬದ ಮಹಿಳೆಯರು, ಮಕ್ಕಳು ಕಣ್ಣೀರಲ್ಲಿ ಕೈ ತೊಳೆಯುವ ಪರಿಸ್ಥಿತಿ ಎದುರಾಗಿದೆ.

ಕೇವಲ 15 ದಿನಗಳಲ್ಲಿ ರಾಣೆಬೆನ್ನೂರ ಶಹರ ಠಾಣೆ, ತಾಲೂಕಿನ ಕುಮಾರಪಟ್ಟಣ ಠಾಣೆ, ರಟ್ಟಿಹಳ್ಳಿ, ಹಿರೇಕೆರೂರ ಸೇರಿ ವಿವಿಧ ಠಾಣೆಗಳಲ್ಲಿ 11 ಮಟ್ಕಾ ದಂಧೆ ಪ್ರಕರಣಗಳು ದಾಖಲಾಗಿವೆ. ರಾಣೆಬೆನ್ನೂರ ವ್ಯಾಪ್ತಿಯ ಕುಮಾರಪಟ್ಟಣ, ಹಲಗೇರಿ, ಶಹರ ಹಾಗೂ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಮಾಣದ ಮಟ್ಕಾ ದಂಧೆ ನಡೆಯುತ್ತಿದೆ ಎನ್ನಲಾಗಿದೆ.

ಹಾವೇರಿ ಗ್ರಾಮೀಣ ಭಾಗ, ಗುತ್ತಲ ಠಾಣೆ, ರಟ್ಟಿಹಳ್ಳಿ, ಹಿರೇಕೆರೂರ ಭಾಗದಲ್ಲೂ ಮಟ್ಕಾ ದಂಧೆ ಸಲೀಸಾಗಿ ನಡೆಯುತ್ತಿದೆ. ಆದರೆ, ಪೊಲೀಸರು ನೆಪಮಾತ್ರಕ್ಕೆ ಆಗೊಂದು, ಈಗೊಂದು ಎನ್ನುವ ರೀತಿಯಲ್ಲಿ ಮಟ್ಕಾ ದಂಧೆ ಪ್ರಕರಣ ದಾಖಲಿಸಿ ಕೈತೊಳೆದುಕೊಳ್ಳುತ್ತಿದ್ದಾರೆ ಹೊರತು ದಂಧೆಗೆ ಬ್ರೇಕ್ ಹಾಕುವ ಗೋಜಿಗೆ ಹೋಗಿಲ್ಲ ಎಂದು ದೂರುತ್ತಾರೆ ವಿವಿಧೆಡೆಯ ಜನರು.

ಹೈಟೆಕ್ ಸ್ಪರ್ಶ, ಯುವಕರು ಬಲಿ

ದಂಧೆಕೋರರು ಕೈ ಚೀಟಿ ಬದಲಾಗಿ ಮಟ್ಕಾ ದಂಧೆಯನ್ನು ವಾಟ್ಸ್ ಆಪ್ ಮೂಲಕ ಬರೆದುಕೊಳ್ಳುತ್ತಿರುವ ಕಾರಣ ಇದೀಗ ಮಟ್ಕಾ ದಂಧೆ ಕೂಡ ಹೈಟೆಕ್ ಸ್ಪರ್ಶ ಪಡೆದುಕೊಂಡಿದೆ. ಹೀಗಾಗಿ, ಗ್ರಾಮೀಣ ಭಾಗದಲ್ಲಿ ಯುವಕರು, ಕಾರ್ವಿುಕರು ಹೆಚ್ಚಾಗಿ ದಂಧೆಗೆ ಬಲಿಯಾಗುತ್ತಿದ್ದಾರೆ. ಇದನ್ನು ತಡೆಯಬೇಕಾದ ಪೊಲೀಸ್ ಇಲಾಖೆ ಮೌನ ವಹಿಸಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ವಾಟ್ಸ್ ಆಪ್ ಮೂಲಕ ಹೈಟೆಕ್ ದಂಧೆ ಶುರು ಮಾಡಿರುವ ಖರೀದಿಮರು, ತಮಗೆ ಆಪ್ತರಿರುವ ಕೆಲವರನ್ನು ಗುರುತಿಸಿ ಅವರ ವಾಟ್ಸ್​ಆಪ್ ಮಟ್ಕಾ ನಂಬರ್ ಮೂಲಕ ಅಂಕಿ, ಸಂಖ್ಯೆ ನಮೂದಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಗುರುತು, ಪರಿಚಯವಿಲ್ಲದ ನಂಬರ್​ನಿಂದ ಕರೆ ಬಂದರೆ, ಫೋನ್ ತೆಗೆದುಕೊಳ್ಳುವುದಿಲ್ಲ. ಬದಲಾಗಿ ಇಂಥ ಸ್ಥಳಕ್ಕೆ ಖುದ್ದಾಗಿ ಬಂದು ಬರೆಸಿರಿ ಎಂದು ಹೇಳುತ್ತಿದ್ದಾರಂತೆ.

ಬೇಸತ್ತು ಹೋದ ಮಹಿಳೆಯರು

ಗ್ರಾಮೀಣ ಭಾಗದಲ್ಲಿ ಮಟ್ಕಾ ದಂಧೆಯಿಂದಾಗಿ ಮಹಿಳೆಯರು ಬೇಸತ್ತು ಹೋಗಿದ್ದಾರೆ. ಪತಿ ದುಡಿಯಲು ಹೋಗುತ್ತಿಲ್ಲ. ನಾವು ಜಮೀನಿನಲ್ಲಿ ದುಡಿದು ತಂದ ದುಡ್ಡನ್ನು ಕಸಿದುಕೊಂಡು ಹೋಗಿ ಮಟ್ಕಾ ದಂಧೆಗೆ ಸುರಿಯುತ್ತಿದ್ದಾರೆ. ನಿತ್ಯದ ತುತ್ತಿನ ಚೀಲ ತುಂಬಿಸಿಕೊಳ್ಳುವುದೇ ಕಷ್ಟಕರವಾಗಿದೆ. ಇಂಥ ಸಮಯದಲ್ಲಿ ಗಂಡಸರು ಮನೆಯಲ್ಲಿನ ವಸ್ತುಗಳನ್ನು ಮಾರಾಟ ಮಾಡಿ ಮಟ್ಕಾ ದಂಧೆಕೋರರಿಗೆ ಹಣ ಸುರಿಯುತ್ತಿದ್ದಾರೆ ಎಂದು ಮಹಿಳೆಯರು ಅಳಲು ತೋಡಿಕೊಂಡಿದ್ದಾರೆ.

ಹೀಗಾಗಿ ಮಟ್ಕಾ ದಂಧೆಯಿಂದ ಬಡಕುಟುಂಬಗಳು ಬೀದಿಗೆ ಬರುವ ಸ್ಥಿತಿ ನಿರ್ವಣವಾಗಿದೆ. ಅನೇಕ ಕುಟುಂಬಗಳು ನಲುಗಿ ಹೋಗಿವೆ. ಪೊಲೀಸ್ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ದಂಧೆಗೆ ಬ್ರೇಕ್ ಹಾಕಬೇಕು ಎಂಬುದು ಸಾರ್ವಜನಿಕರ ಒಕ್ಕೊರಲ ಆಗ್ರಹವಾಗಿದೆ.

ಪುಕ್ಕ ಬಿಚ್ಚಿದ ಕಳ್ಳರು

ಕಳೆದ ವರ್ಷ ಹಾವೇರಿ ತಾಲೂಕಿನಲ್ಲಿ ಗೋವಾದಿಂದ ಬಂದು ಬುಕ್ಕಿಯೊಬ್ಬ ಮಟ್ಕಾ ದಂಧೆ ನಡೆಸುತ್ತಿದ್ದಾನೆ ಎಂಬ ಆರೋಪವಿತ್ತು. ಆದರೀಗ ಹಾವೇರಿ, ರಾಣೆಬೆನ್ನೂರ ಶಹರ, ಕುಮಾರಪಟ್ಟಣ, ಹಲಗೇರಿ ಭಾಗದಲ್ಲಿ ಸ್ಥಳೀಯರೇ ಮಟ್ಕಾ ದಂಧೆಯ ಬುಕ್ಕಿಗಳಾಗಿದ್ದಾರೆ. ಅವರೆ ಏಜೆಂಟರ ಹಣ ಪಡೆದುಕೊಂಡು ಮಟ್ಕಾ ದಂಧೆ ನಡೆಸುತ್ತಿದ್ದಾರೆ. ಕೆಲ ಪೊಲೀಸ್ ಅಧಿಕಾರಿ, ಸಿಬ್ಬಂದಿಯ ಬೆಂಬಲವೂ ಇದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಇವರ ವಿರುದ್ಧ ಯಾರೇ ಆರೋಪ ಮಾಡಲು ಬಂದರೂ ಅವರಿಗೆ ಹಣದ ಆಮಿಷವೊಡ್ಡಿ ಬಾಯಿ ಮುಚ್ಚಿಸುತ್ತಿದ್ದಾರಂತೆ. ಆದ್ದರಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅವರನ್ನು ಪತ್ತೆ ಮಾಡಿ ಜೈಲಿಗೆ ಅಟ್ಟಬೇಕು ಎಂಬುದು ಜಿಲ್ಲೆಯ ಜನರ ಒತ್ತಾಯವಾಗಿದೆ.

ಈ ಹಿಂದೆ ತಾಲೂಕಿನಲ್ಲಿ ಮಟ್ಕಾ ದಂಧೆ ಅಷ್ಟೊಂದು ಇರಲಿಲ್ಲ. ಆದರೆ, ಒಂದೂವರೆ ತಿಂಗಳಿಂದ ಸ್ಥಳೀಯರೇ ಮಟ್ಕಾ ಆಟವಾಡಿಸಲು ಶುರು ಮಾಡಿದ್ದರಿಂದ ಬಹಳಷ್ಟು ಜನ ಮಟ್ಕಾ ಹಿಂದೆ ಬಿದ್ದಿದ್ದಾರೆ. ಮನೆಯಲ್ಲಿ ಅಡುಗೆ ಪದಾರ್ಥ ತರಲು ಇಟ್ಟುಕೊಂಡ ಹಣವನ್ನೂ ಕೆಲ ಗಂಡಸರು ಬಿಡುತ್ತಿಲ್ಲ. ಪೊಲೀಸರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಇದಕ್ಕೆ ಕಡಿವಾಣ ಹಾಕಬೇಕು. | ತಿಪ್ಪವ್ವ ಎಂ., ಕುಮಾರಪಟ್ಟಣ ನಿವಾಸಿ ಮಟ್ಕಾ ದಂಧೆ ನಡೆಸುವವರನ್ನು ಪತ್ತೆ ಹಚ್ಚಿ ಅಗತ್ಯ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ಪೊಲೀಸ್ ಅಧಿಕಾರಿ, ಸಿಬ್ಬಂದಿ ಯಾರಾದರೂ ಬೆಂಬಲಿಸಿದರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ದಂಧೆ ಬಗ್ಗೆ ಮಾಹಿತಿ ಇದ್ದರೆ ಸಾರ್ವಜನಿಕರು ಎಎಸ್​ಪಿ (ಮೊ.ಸಂ. 94808 04502) ಅಥವಾ ನನ್ನನ್ನೇ (ಮೊ.ಸಂ. 94808 04501) ನೇರವಾಗಿ ಸಂರ್ಪಸಬಹುದು. ಅಂಥವರ ಮಾಹಿತಿ ಗೌಪ್ಯವಾಗಿ ಇಡಲಾಗುವುದು. | ಡಾ.ಶಿವಕುಮಾರ ಗುಣಾರೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ