ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಮೂಡುಬಿದಿರೆ ತಾಲೂಕು ವ್ಯಾಪ್ತಿ ಸಹಿತ ಸಮೀಪದ ಕಾರ್ಕಳ ತಾಲೂಕು ವ್ಯಾಪ್ತಿಯ ಸಚ್ಚರಿಪೇಟೆಯ ವಿವಿಧ ಕಡೆಗಳಲ್ಲಿ ಮಟ್ಕಾ ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಪುರಸಭಾ ಸದಸ್ಯರು ಪೊಲೀಸರಲ್ಲಿ ಆಗ್ರಹಿಸಿದರು.
ಮೂಡುಬಿದಿರೆ ಪುರಸಭಾ ಅಧ್ಯಕ್ಷೆ ಜಯಶ್ರೀ ಕೇಶವ್ ಅಧ್ಯಕ್ಷತೆಯಲ್ಲಿ ಪುರಸಭಾ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯ ರಾಜೇಶ್ ನಾಯ್ಕ ಈ ಬಗ್ಗೆ ಮಾತನಾಡಿ, ಮೂಡುಬಿದಿರೆ ಪೇಟೆ, ಶಿರ್ತಾಡಿ ಸಹಿತ ಇತರ ಕಡೆಗಳಲ್ಲಿ ಆಫೀಸ್ ಮಾಡಿಕೊಂಡು ಮಟ್ಕಾ ದಂಧೆ ನಡೆಯುತ್ತಿದೆ. ಈ ದಂಧೆಯಿಂದಾಗಿ ಈಗಾಗಲೇ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆಂದು ಮೂಡುಬಿದಿರೆ ಪೊಲೀಸ್ ಉಪನಿರೀಕ್ಷಕ ಸಿದ್ಧಪ್ಪ ನರನೂರ ಅವರ ಗಮನಕ್ಕೆ ತಂದರು.
ಇದಕ್ಕೆ ಉಳಿದ ಸದಸ್ಯರೂ ಧ್ವನಿಗೂಡಿಸಿದರು. ಎಲ್ಲೆಲ್ಲಿ ಮಟ್ಕಾ ದಂಧೆ ನಡೆಯುತ್ತಿದೆ ಎಂಬುದರ ಬಗ್ಗೆ ಲೊಕೇಷನ್ ಕಳುಹಿಸಿದರೆ ತಾವು ಖಂಡಿತವಾಗಿಯೂ ಕ್ರಮ ಕೈಗೊಳ್ಳುತ್ತೇವೆಂದು ಸಿದ್ಧಪ್ಪ ಭರವಸೆ ನೀಡಿದರು.
ಶಾಲೆಗಳ ಬಳಿಯಲ್ಲಿ ವಾಹನಗಳು ರಭಸವಾಗಿ ಹೋಗುತ್ತಿರುವುದರಿಂದ ಮಕ್ಕಳು ಅಪಾಯಕ್ಕೆ ಒಳಗಾಗುವ ಸಂಭವವಿದೆ. ಇಲ್ಲಿ ಪೊಲೀಸರನ್ನು ನಿಲ್ಲಿಸಬೇಕೆಂದು ಸದಸ್ಯೆ ಶ್ವೇತಾ ಕುಮಾರಿ ಆಗ್ರಹಿಸಿದರು.
ಮುಖ್ಯಾಧಿಕಾರಿ ಇಂದು ಎಂ. ಮಾತನಾಡಿ, ಬಸ್ ಸ್ಟಾಂಡ್ ಪಾರ್ಕಿಂಗ್ ಸಮಸ್ಯೆ ಬಗ್ಗೆ ಈ ಹಿಂದೆ ಮೀಟಿಂಗ್ ಆಗಿದೆ. ಅದು ಹೆಚ್ಚು ಫಲಕಾರಿಯಾಗಿಲ್ಲ. ಮತ್ತೊಮ್ಮೆ ಮೂಡುಬಿದಿರೆ ಇನ್‌ಸ್ಪೆಕ್ಟರ್, ಪುರಸಭೆ, ಬಸ್ ಮಾಲೀಕರು ಮತ್ತು ಏಜೆಂಟರ ಸಭೆ ನಡೆಸಲಾಗುವುದು ಎಂದರು.
ಫಾಸ್ಟ್‌ಫುಡ್ ಸ್ಟಾಲ್‌ಗೆ ವ್ಯವಸ್ಥೆ: ಆಹಾರ ಸುರಕ್ಷತೆ ದೃಷ್ಟಿಯಿಂದ ಫಾಸ್ಟ್‌ಫುಡ್ ಅಂಗಡಿಗಳಿಗೆ ಆರೋಗ್ಯ ನಿರೀಕ್ಷಕರು ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ಬೀದಿ ಬದಿ ವ್ಯಾಪಾರಿಗಳಿಗೆ ನಾವು ಸಾಲ ಕೊಡುತ್ತೇವೆ. ಅವರಿಂದ ನಮಗೂ ಬಾಡಿಗೆ ಬರುತ್ತಿದೆ. ಆದ್ದರಿಂದ ನಾವು ಅವರಿಗೆ ಸ್ಟಾಲ್ ಇಡಲು ಪೇಟೆಯ ಮೂರು ಕಡೆಗಳಲ್ಲಿ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಮುಖ್ಯಾಧಿಕಾರಿ ಇಂದು ಎಂ.ತಿಳಿಸಿದರು. ಅವರನ್ನು ಶಿಫ್ಟ್ ಮಾಡಿ ನಾವು ಜಾಗ ತೋರಿಸುವುದು ಬೇಡ. ಅವರು ಒಳಬಾಡಿಗೆಗೆ ಅಂಗಡಿಗಳನ್ನು ನೀಡಿ ಮಂಗಳೂರಿಗಿಂತಲೂ ಹೆಚ್ಚು ಬಾಡಿಗೆ ಪಡೆಯುತ್ತಿದ್ದಾರೆಂದು ರಾಜೇಶ್ ನಾಯ್ಕ ತಿಳಿಸಿದರು. ವ್ಯಾಪಾರ ಮಾಡಿ ಜೀವನ ಮಾಡುವವರಿಗೆ ನಾವು ತೊಂದರೆ ಮಾಡುವುದು ಬೇಡ ಎಂದು ಮುಖ್ಯಾಧಿಕಾರಿ ತಿಳಿಸಿದರು.
ಸಮಸ್ಯೆಗಳ ಪರಿಶೀಲನೆ: ಲಾಡಿ ಬಳಿ ವಿದ್ಯುತ್ ಕಂಬವೊಂದು ವಾಲಿದೆ. ಇದಕ್ಕೆ ಸೂಕ್ತ ವ್ಯವಸ್ಥೆ ಮಾಡುವಂತೆ ಸದಸ್ಯರಾದ ಸುರೇಶ್ ಪ್ರಭು, ವಿದ್ಯುತ್ ಕಂಬಗಳಲ್ಲಿ ಕೇಬಲ್ ವಯರ್‌ಗಳು ನೇತಾಡುತ್ತಿರುವುದರ ಬಗ್ಗೆ ಶ್ವೇತಾ ಅವರು ಮೆಸ್ಕಾಂ ಅಧಿಕಾರಿ ಸತೀಶ್ ಗಮನಕ್ಕೆ ತಂದರು. ಸಮಸ್ಯೆಗಳನ್ನು ಪರಿಶೀಲಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಮೆಸ್ಕಾಂ ಅಧಿಕಾರಿ ತಿಳಿಸಿದರು.
ಕುಡಿಯುವ ನೀರಿನ ಅಮೃತ್ ಜಲಜೀವನ್ ಯೋಜನೆಯ ಕಾಮಗಾರಿಗಳು ಆರಂಭವಾಗುವ ಮುನ್ನ ಕೌನ್ಸಿಲ್ ಗಮನಕ್ಕೆ ತರದೆ ಅಂತಿಮವಾಗಿ ಮಾಹಿತಿ ನೀಡಲು ಬಂದಿರುವ ಅಧಿಕಾರಿಗಳನ್ನು ಸದಸ್ಯರು ತರಾಟೆಗೆ ತೆಗೆದುಕೊಂಡರು ಮತ್ತು ಈ ಬಗ್ಗೆ ವಿಷಯ ಚರ್ಚಿಸಲು ಅಧಿಕಾರಿಗಳನ್ನು ಕರೆದು ಮತ್ತೊಮ್ಮೆ ಸಭೆ ನಡೆಸುವುದೆಂದು ತೀರ್ಮಾನಿಸಲಾಯಿತು.
ಉಪಾಧ್ಯಕ್ಷ ನಾಗರಾಜ ಪೂಜಾರಿ, ಸದಸ್ಯರಾದ ಸುರೇಶ್ ಕೋಟ್ಯಾನ್, ಪಿ.ಕೆ.ಥೋಮಸ್, ಪುರಂದರ ದೇವಾಡಿಗ, ಜೊಸ್ಸಿ ಮೆನೇಜಸ್, ಸೌಮ್ಯಾ ಶೆಟ್ಟಿ, ದಿವ್ಯಾ ಜಗದೀಶ್, ರೂಪಾ ಶೆಟ್ಟಿ, ಹಿದಾಯಲ್ ಆಲಿ, ಇಕ್ಬಾಲ್ ಕರೀಂ, ಇಂಜಿನಿಯರ್, ಆರೋಗ್ಯ ನಿರೀಕ್ಷಕಿ ಇದ್ದರು.
ಮೂಡುಬಿದಿರೆ ಬಸ್ಸು ನಿಲ್ದಾಣದಲ್ಲಿ ವಾಹನಗಳ ಪಾರ್ಕಿಂಗ್ ಸಮಸ್ಯೆ ಇನ್ನೂ ಸರಿಯಾಗಿಲ್ಲ. ಹಲವು ಬಾರಿ ಈ ಬಗ್ಗೆ ಮೀಟಿಂಗ್ ನಡೆಸಿದರೂ ಪ್ರಯೋಜನವಾಗಿಲ್ಲ. ಪುರಸಭಾ ವಾಣಿಜ್ಯ ಸಂಕೀರ್ಣದಲ್ಲಿರುವ ವ್ಯಾಪಾರಿಗಳಿಗೆ ಇದರಿಂದ ತುಂಬಾ ತೊಂದರೆಯಾಗುತ್ತದೆ. ಪುರಸಭೆಗೆ ಲಾಭ ಮಾಡಿಕೊಡುವ ಅಂಗಡಿ ವ್ಯಾಪಾರಸ್ಥರಿಗೆ ಅನ್ಯಾಯವಾದರೆ ಹೇಗೆ? ಎಂದು ಸದಸ್ಯೆ ಶ್ವೇತಾ ಜೈನ್ ಸಭೆಯ ಗಮನಕ್ಕೆ ತಂದರು.