ಜಿಲ್ಲೆ

ಬದುಕಿಗೆ ಬಣ್ಣ ನೀಡುವ ಕಲೆ-ಕಲಾವಿದರು...

ಪ್ರಶಾಂತ ಜಿ. ಭಾಗ್ವತ

ಆರ್ಕಿಟೆಕ್ಟ್​ ಶ್ರೀಜಾ ಜಯಕುಮಾರ್​ ಅಭಿಪ್ರಾಯ

ಮಥುರಾದ ಸಾಂಝಿ ಕಲಾ ಪ್ರದರ್ಶನ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ತಂತ್ರಜ್ಞಾನದ ಯುಗದಲ್ಲಿ ದಾಪುಗಾಲಿಟ್ಟು ಓಡುತ್ತಿರುವ ನಾವುಗಳೆಲ್ಲ ರೋಬಾಟ್​ ಹಾಗೂ ಮೆಕ್ಯಾನಿಕಲ್​ ವ್ಯವಸ್ಥೆಯಲ್ಲಿ ಜೀವನ ಸಾಗಿಸುತ್ತಿದ್ದೇವೆ. ಬದುಕು ಕಳಾಹೀನವಾಗುತ್ತಿರುವ ಇಂದಿನ ಸಂದರ್ಭದಲ್ಲಿ ನಮಗೆ ದೇಸೀಯ ವಿವಿಧ ಕಲೆಗಳು ಸ್ಫೂರ್ತಿಯಾಗುತ್ತವೆ. ಕಲೆ-ಕಲಾವಿದರು ಇದ್ದಲ್ಲಿ ಮಾತ್ರ ಎಲ್ಲರ ಬದುಕಿಗೂ ವಿವಿಧ ಬಣ್ಣ ಲಭಿಸುತ್ತವೆ. ಇಲ್ಲದಿದ್ದಲ್ಲಿ ಎಲ್ಲರ ಬದುಕು ಕಪ್ಪು-ಬಿಳುಪು ಎಂದು ಉಡುಪಿಯ ಆರ್ಕಿಟೆಕ್ಟ್​ ಶ್ರೀಜಾ ಜಯಕುಮಾರ್​ ಅಭಿಪ್ರಾಯ ವ್ಯಕ್ತಪಡಿಸಿದರು.

ಉಡುಪಿಯ ಬಡಗುಪೇಟೆಯ ಹತ್ತು ಮೂರು ಇಪ್ಪತ್ತೆಂಟು ಗ್ಯಾಲರಿಯಲ್ಲಿ ಭಾವನಾ ಫೌಂಡೇಷನ್ ​(ರಿ.) ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ, ಉಡುಪಿಯ ಮಧುರಂ ವೈಟ್​ ಲೋಟಸ್​ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಬೃಂದಾವನದಿಂದ ಉಡುಪಿಯೆಡೆಗೆ ಶೀರ್ಷಿಕೆಯಡಿ ಮಥುರಾದ ಸಾಂಝಿ ಪೇಪರ್​ ಕಲಾಕೃತಿಗಳ ಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಕಲೆ ಪರಿಚಯಿಸುವ ಉದ್ದೇಶ

ಕಾರ್ಯಕ್ರಮದ ಸಂಯೋಜಕ, ಕಾವಿ ಕಲಾವಿದ ಡಾ. ಜನಾರ್ದನ್​ ರಾವ್​ ಹಾವಂಜೆ ಪ್ರಾಸ್ತಾವಿಕವಾಗಿ ಮಾತನಾಡಿ, ಮಥುರಾದ ಸಾಂಝಿ ಕಲೆಯು ದೇಸೀಯ ಕಲಾ ಪ್ರಕಾರವಾಗಿದೆ. ಟ್ರೀ ಆಫ್​ ಲೈಫ್​, ಕೃಷ್ಣನ ಲೀಲೆಗಳು, ಬುದ್ಧ, ನಿಸರ್ಗದ ಚಿತ್ರಗಳಿಗೆ ಈ ಕಲೆ ಪ್ರಸಿದ್ಧವಾಗಿದೆ. ಇಂದಿಗೂ ಒಳಾಂಗಣ ವಿನ್ಯಾಸದಲ್ಲಿ ಮಹತ್ವದ ಸ್ಥಾನ ಉಳಿಸಿಕೊಂಡಿದೆ. ಜಿಐ ಟ್ಯಾಗ್​ ಗಳಿಸಿರುವ ದೇಸೀಯ ಕಲಾಪ್ರಕಾರವೊಂದನ್ನು ಉಡುಪಿಗೆ ಪರಿಚಯಿಸುವ ನಿಟ್ಟಿನಲ್ಲಿ ಈ ಕಲಾಪ್ರದರ್ಶನ ಏರ್ಪಡಿಸಲಾಗಿದೆ. ಜ. 26ರ ವರೆಗೆ ಮಧ್ಯಾಹ್ನ 3ರಿಂದ 7ರ ವರೆಗೆ ಕಲಾಸಕ್ತರ ವೀಕ್ಷಣೆ ತೆರೆದಿರಲಿದೆ ಎಂದರು.

ಫೌಂಡೇಷನ್​ನ ನಿರ್ದೇಶಕ ಹಾವಂಜೆ ಮಂಜುನಾಥ ರಾವ್​, ಕಲಾವಿದ ಪಿ.ಎನ್​. ಆಚಾರ್ಯ, ವರ್ಷಾ ಎ.ಜೆ. ಉಪಸ್ಥಿತರಿದ್ದರು. ಅನೇಕರು ಸಾಂಝಿ ಕಲೆಯಲ್ಲಿ ಅರಳಿದ ವಿವಿಧ ಕಲಾಕೃತಿ ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.

ಕಲೆಯ ರಚನೆಯಲ್ಲಿ ತಾಳ್ಮೆ ಮುಖ್ಯ

ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಾಂಝಿ ಕಲಾವಿದ ಶ್ರೀರಾಮ ಸೋನಿ ಮಾತನಾಡಿ, ಸಾಂಝಿ ಕಲೆಯು 5 ಸಾವಿರ ವರ್ಷಗಳಷ್ಟು ಹಳೆದಾದ ಕಲೆ. ಇದು ದ್ವಾಪರಯುಗದಲ್ಲಿ ಮಹಾಭಾರತದ ಕಾಲದಲ್ಲಿ ಅದರಲ್ಲೂ ಮಥುರಾದಲ್ಲಿ ಹೆಚ್ಚು ಪ್ರಸಿದ್ಧವಾಗಿತ್ತು. ಶ್ರೀಕೃಷ್ಣನ ಲೀಲೆಯನ್ನು, ಆತನ ಜನ್ಮದಿಂದ ಅಂತ್ಯದವರೆಗಿನ ಕಥಾನಕವನ್ನು ಸಾಂಝಿ ಕಲೆ ಅನಾವರಣಗೊಳಿಸುತ್ತದೆ. ಕೃಷ್ಣನ ಪ್ರಿಯತಮೆಯಾದ ರಾಧಾ, ಹೂವಿನಲ್ಲಿ ಶ್ರೀಕೃಷ್ಣನನ್ನು ರಚಿಸುವ ಮೂಲಕ ಸಾಂಝಿ ಕಲೆ ಗಮನ ಸೆಳೆಯಿತು. ರಾಸಾಯನಿಕ ಮಿಶ್ರಣವಿಲ್ಲದ, ಕೈಯಿಂದಲೇ ತಯಾರಿಸಿದ ಕಾಗದದ ಮೇಲೆ ವಿಶಿಷ್ಟ ರಚನೆಯ ಕತ್ತರಿಯಿಂದ ಕತ್ತರಿಸಿ ಸಾಂಝಿ ಚಿತ್ರ ರಚಿಸಲಾಗುತ್ತದೆ. ಇಲ್ಲಿ ತಾಳ್ಮೆ ಬಹುಮುಖ್ಯ. ಯಾವುದೇ ತಪ್ಪಾಗದಂತೆ ಕತ್ತರಿಸಬೇಕು. ಇಲ್ಲದಿದ್ದಲ್ಲಿ ಎಲ್ಲ ಶ್ರಮವೂ ವ್ಯರ್ಥವಾಗುತ್ತದೆ ಎಂದರು.
ನಮ್ಮ ದೇಶದ ಎಲ್ಲ ಕಲೆಗಳೂ ಸಹ ಅತ್ಯಂತ ಶ್ರೀಮಂತವಾಗಿದ್ದು, ಶತಶತಮಾನಗಳ ಹಿಂದಿನ ದೇವ-ಮಾನವರ ಹಾಗೂ ಪೃಕೃತಿಯ ನಡುವಿನ ಸಂಬಂಧ ತಿಳಿಸುವ ಮಹತ್ತರವಾದ ಕುರುಹು ಆಗಿದೆ. ಶಿಕ್ಷಣದ ಭಾಗವೇ ಆಗಿರುವ ಇಂತಹ ದೇಸೀ ಕಲೆಗಳನ್ನು, ಆ ಕಲೆಯನ್ನು ರಕ್ಷಿಸುತ್ತಿರುವ ಕಲಾವಿದರನ್ನು ಪ್ರೋತ್ಸಾಹಿಸುವುದು ಎಲ್ಲರ ಕರ್ತವ್ಯ. | ಶ್ರೀಜಾ ಜಯಕುಮಾರ್​. ಆರ್ಕಿಟೆಕ್ಟ್​, ಉಡುಪಿ