ಜಿಲ್ಲೆ

17ರಿಂದ ಮತ್ಸ್ಯಗಂಧ ರೈಲು ಸಂಚಾರ

Dakshina Kannada

ಮಂಗಳೂರು: ಕರಾವಳಿ ಭಾಗದ ಜನರು ಬಹುಕಾಲದಿಂದ ಕಾಯುತ್ತಿದ್ದ ಮಂಗಳೂರು-ಮುಂಬೈ ನಡುವಿನ ಮತ್ಸೃಗಂಧ ರೈಲು ಡಿ.17ರಂದು ಸಂಚಾರ ಪ್ರಾರಂಭಿಸಲಿದೆ. ಕರೊನಾ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ರೈಲಿನ ಸಂಚಾರ ಪುನರಾರಂಭಕ್ಕೆ ರೈಲ್ವೆ ಮಂಡಳಿ ಒಪ್ಪಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ವೇಳಾಪಟ್ಟಿಯನ್ನೂ ಬಿಡುಗಡೆ ಮಾಡಲಾಗಿದೆ.

ನಂ.02620/02619 ಮಂಗಳೂರು-ಲೋಕಮಾನ್ಯ ತಿಲಕ್ ಎಕ್ಸ್‌ಪ್ರೆಸ್ ರೈಲು ಪ್ರಾರಂಭಕ್ಕೆ ರೈಲ್ವೆ ಮಂಡಳಿಯು ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ ಪ್ರಸ್ತುತ ತಲಾ 15 ದಿನಗಳ ಕಾಲ ಪ್ರತಿದಿನ ಉತ್ಸವ ರೈಲು ರೂಪದಲ್ಲಿ ಓಡಿಸುವುದಕ್ಕೆ ದಕ್ಷಿಣ ರೈಲ್ವೆ ತೀರ್ಮಾನಿಸಿದೆ.

ಡಿ.17ರಿಂದ 31ರ ವರೆಗೆ ನಂ.02620 ಮಂಗಳೂರು ಸೆಂಟ್ರಲ್-ಎಲ್‌ಟಿಟಿ ರೈಲು ಹಾಗೂ ನಂ.02619 ಎಲ್‌ಟಿಟಿ-ಮಂಗಳೂರು ಸೆಂಟ್ರಲ್ ರೈಲುಗಳು ಸಂಚರಿಸಲಿವೆ. ಎರಡೂ ರೈಲುಗಳ ತಲಾ 15 ಟ್ರಿಪ್ ಇರುವುದಾಗಿ ದಕ್ಷಿಣ ರೈಲ್ವೆ ತಿಳಿಸಿದೆ.

02620 ಮಂಗಳೂರು ಸೆಂಟ್ರಲ್‌ನಿಂದ ಮಧ್ಯಾಹ್ನ 2.25ಕ್ಕೆ ಹೊರಟು ಮರುದಿನ ಮುಂಜಾನೆ 6.35ಕ್ಕೆ ಲೋಕಮಾನ್ಯ ತಿಲಕ್ ತಲುಪುವುದು. ನಂ.02619 ಎಲ್‌ಟಿಟಿಯಿಂದ ಮಧ್ಯಾಹ್ನ 3.20ಕ್ಕೆ ಹೊರಟು ಮರುದಿನ ಬೆಳಗ್ಗೆ 7.30ಕ್ಕೆ ಮಂಗಳೂರು ಸೆಂಟ್ರಲ್ ತಲುಪುತ್ತದೆ.

ಸುರತ್ಕಲ್, ಮೂಲ್ಕಿ, ಉಡುಪಿ, ಕುಂದಾಪುರ, ಬೈಂದೂರು, ಭಟ್ಕಳ, ಮುರುಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರೋಡ್, ಅಂಕೋಲ, ಕಾರವಾರ, ಮಡಗಾಂವ್, ಕುಡಾಳ್, ರತ್ನಗಿರಿ, ಚಿಪ್ಲುನ್, ಖೇಡ್, ಮನಗಾಂವ್, ಪನ್ವೆಲ್ ಥಾನೆಗಳಲ್ಲಿ ನಿಲುಗಡೆ ಇದೆ.

ಎರ್ನಾಕುಳಂ ವಿಶೇಷ ರೈಲು

ಮಂಗಳೂರು: ಎರ್ನಾಕುಳಂ ಜಂಕ್ಷನ್-ಓಖಾ-ಎರ್ನಾಕುಳಂ ಜಂಕ್ಷನ್ ಮಧ್ಯೆ ವಾರಕ್ಕೆ ಎರಡು ಬಾರಿ ಉತ್ಸವ ವಿಶೇಷ ರೈಲು(ಪೂರ್ಣ ಕಾದಿರಿಸಿದ)ಗಳನ್ನು ಓಡಿಸಲಾಗುತ್ತಿದೆ.

ನಂ.06338 ಎರ್ನಾಕುಳಂ-ಓಖಾ ರೈಲು ಎರ್ನಾಕುಳಂನಿಂದ ಡಿ.11ರಿಂದ 30ರ ವರೆಗೆ ಬುಧವಾರ, ಶುಕ್ರವಾರಗಳಂದು ರಾತ್ರಿ 8.25ಕ್ಕೆ ಹೊರಟು ಪ್ರಯಾಣದ ಮೂರನೇ ದಿನ ಸಂಜೆ 4.40ಕ್ಕೆ ಓಖಾ ತಲುಪುವುದು.

ನಂ.06337 ಓಖಾ-ಎರ್ನಾಕುಳಂ ರೈಲು ಡಿ.14ರಿಂದ ಜನವರಿ 2ರವರೆಗೆ ಸೋಮವಾರ, ಶನಿವಾರಗಳಂದು ಬೆಳಗ್ಗೆ 6.45ಕ್ಕೆ ಓಖಾದಿಂದ ಹೊರಟು ಎರಡನೇ ದಿನ ರಾತ್ರಿ 11.55ಕ್ಕೆ ಎರ್ನಾಕುಳಂ ತಲುಪುತ್ತದೆ.

ತಿರುನಲ್ವೇಲಿ-ದಾದರ್ ರೈಲು

ತಿರುನಲ್ವೇಲಿ-ದಾದರ್-ತಿರುನಲ್ವೇಲಿ ಮಧ್ಯೆ ನಂ.06072/06071 ಸೂಪರ್‌ಫಾಸ್ಟ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಡಿ.16ರಿಂದ 31ರ ವರೆಗೆ ಸಂಚರಿಸಲಿವೆ.

ನಂ.06072 ತಿರುನಲ್ವೇಲಿ-ದಾದರ್ ರೈಲು ಡಿ.16ರಿಂದ 30ರ ವರೆಗೆ ಮೂರು ಟ್ರಿಪ್ ಹಾಗೂ ನಂ.06071 ದಾದರ್-ತಿರುನಲ್ವೇಲಿ ರೈಲು ಡಿ.17ರಿಂದ 31ರ ವರೆಗೆ ಮೂರು ಟ್ರಿಪ್ ಓಡುತ್ತದೆ.

ನಂ. 06072 ತಿರುನಲ್ವೇಲಿಯಿಂದ ಬೆಳಗ್ಗೆ 7.15ಕ್ಕೆ ಹೊರಟು ಮರುದಿನ ಮಧ್ಯಾಹ್ನ 3 ಗಂಟೆಗೆ ದಾದರ್ ತಲಪುವುದು. ದಾದರ್‌ನಿಂದ ರಾತ್ರಿ 8.40ಕ್ಕೆ ಹೊರಟು ಎರಡನೇ ದಿನ ಮುಂಜಾನೆ 4ಕ್ಕೆ ತಿರುನಲ್ವೇಲಿ ತಲಪುವುದು. ರೈಲಿಗೆ ಕೋವಿಲ್‌ಪಟ್ಟಿ, ವಿರುಧನಗರ್, ಮಧುರೈ, ದಿಂಡುಗಲ್, ಕರೂರ್, ಈರೋಡ್, ತಿರುಪುರ್, ಕೊಯಂಬತ್ತೂರು, ಪಾಲಕ್ಕಾಡ್, ಶೋರ‌್ನೂರ್, ಕೋಝಿಕೋಡ್, ಕಣ್ಣೂರು, ಮಂಗಳೂರು ಜಂಕ್ಷನ್, ಉಡುಪಿ, ಹೊನ್ನಾವರ, ಕಾರವಾರ, ಮಡಗಾಂವ್, ತಿವಿಂ, ಕಂಕಾವಲಿ, ರತ್ನಗಿರಿ, ಚಿಪ್ಲುನ್, ಪನ್ವೇಲ್, ಥಾನೆಗಳಲ್ಲಿ ನಿಲುಗಡೆ ಇದೆ.