ಜಿಲ್ಲೆ

15 ಹೊಸ ಮತ್ಸ್ಯಧಾಮ ಘೋಷಣೆಗೆ ಶಿಫಾರಸು

Dakshina Kannada

ಮಂಗಳೂರು: ಮಲೆನಾಡಿನಲ್ಲಿ ಹುಟ್ಟಿ ಹರಿಯುವ ನದಿಗಳ ಅಪರೂಪದ ಮೀನು ವೈವಿಧ್ಯತೆ ಇರುವ ಸ್ಥಳಗಳನ್ನು ಗುರುತಿಸಲಾಗಿದ್ದು, ಅವುಗಳನ್ನು ಮೀನುಗಾರಿಕೆ ಕಾಯ್ದೆ ಅಡಿಯಲ್ಲಿ ಮತ್ಸ್ಯಧಾಮ ಎಂದು ಘೋಷಿಸಬೇಕು ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಭೇಟಿ ಮಾಡಿ ಶಿಫಾರಸು ವಿವರ ನೀಡಿದರು.

ಈ ಸಂದರ್ಭ ಮಾತನಾಡಿದ ಸಚಿವರು, ಮತ್ಸ್ಯಧಾಮಗಳ ಮೂಲಕ ಅಪರೂಪದ ಮೀನು ಸಂತತಿ ಸಂರಕ್ಷಣೆ ಸಾಧ್ಯ. ಇದು ಸಂತಸದ ಸಂಗತಿ. ಹೊಸ ಮತ್ಸ್ಯಧಾಮಗಳ ಘೋಷಣೆಗೆ ಕ್ರಮ ಕೈಗೊಳ್ಳುತ್ತೇನೆ ಎಂದರು. ದಕ್ಷಿಣ ಕನ್ನಡ ಜಿಲ್ಲೆಯ 8, ಉಡುಪಿಯ 1, ಉತ್ತರ ಕನ್ನಡ ಜಿಲ್ಲೆಯ 1, ಕೊಡಗು ಜಿಲ್ಲೆಯ 2, ಮಂಡ್ಯ ಜಿಲ್ಲೆಯ 2, ಕಲಬುರಗಿಯ 1 ಸ್ಥಳವನ್ನು (ಶಿಶಿಲ, ಅಡ್ಡಹೊಳೆ, ಪಚ್ಚನಾಯಕನ ಗುಂಡಿ, ಪಾಕ, ರಂಗನತಿಟ್ಟು, ಕುಶಾಲನಗರ, ಸೀತಾನದಿ, ರಾಮನಗುಳಿ, ಮುಂತಾದ ಸ್ಥಳಗಳು) ಮತ್ಸೃಧಾಮ ಎಂದು ಗುರುತಿಸಲಾಗಿದೆ.

ಶೃಂಗೇರಿ, ತೊಡಿಕಾನ, ಶಿವನ ಸಮುದ್ರ, ಹರಿಹರಪುರ, ತಿಂಗಳೆ, ರಾಮನಾತಪುರ ಮುಂತಾದ 11 ಸ್ಥಳಗಳನ್ನು ಈಗಾಗಲೇ ಮತ್ಸೃಧಾಮ ಎಂದು ಘೋಷಿಸಲಾಗಿದೆ. ಮತ್ಸ್ಯಧಾಮಗಳಲ್ಲಿ ಮಹಶೀರ್, ಹರಗಿ(ಹುಲ್ಲುಗೆಂಡೆ), ಪರ್ಲಸ್ಪಾಟ್, ಪಪ್ಫರ್, ಸಾಲ್ಮೊಸ್ಟೋಮ್, ಗಾರ್, ಬೆರಿಲ್, ಸೆಟ್ನಾಯಿ ಬಾರ್ಬ, ಪುಂಟಿಯಸ್, ಡೇನಿಯೊ, ಗ್ಲಾಸ್ ಫಿಶ್, ಕಿಲ್ಲಿ ಫಿಶ್ ಅಪರೂಪದ ಮೀನು ಜಾತಿಗಳಿವೆ. ದೇಶದಲ್ಲಿ ಮತ್ಸ್ಯಧಾಮ ಘೋಷಣೆ ಮಾಡಿರುವ ಮೊದಲ ರಾಜ್ಯ ಕರ್ನಾಟಕ(2009) ಎಂಬ ಹೆಗ್ಗಳಿಕೆ ಇದೆ ಎಂದು ಜೀವ ವೈವಿಧ್ಯಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾಹಿತಿ ನೀಡಿದರು.