ಜಿಲ್ಲೆ

ಸಮಸ್ಯೆಗಳ ಪರಿಹಾರಕ್ಕೆ ಗಣಿತವೇ ಮದ್ದು

ನರಗುಂದ: ಜೀವನದಲ್ಲಿ ರ್ತಾಕ ಮನೋಭಾವ, ಆಲೋಚನಾ ಶಕ್ತಿ, ಬುದ್ಧಿ ಶಕ್ತಿಯ ಬೆಳವಣಿಗೆಗೆ ನಿರಂತರ ಗಣಿತ ಕಲಿಯುವುದರಿಂದ ಮಾತ್ರ ಸಾಧ್ಯ. ಜೀವನದ ಸಾಮಾನ್ಯ ಸಮಸ್ಯೆಗಳ ಪರಿಹಾರಕ್ಕೆ ಗಣಿತವೇ ಮುಖ್ಯ ಮದ್ದು ಎಂದು ಲಯನ್ಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಜಿ.ಟಿ. ಗುಡಿಸಾಗರ ಹೇಳಿದರು.

ಪಟ್ಟಣದ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಅಂತರ ಶಾಲಾ ಗಣಿತ ಮಾದರಿ ವಸ್ತು ಪ್ರದರ್ಶನ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಗಣಿತವನ್ನು ಕಬ್ಬಿಣದ ಕಡಲೆ ಎಂದು ಪರಿಗಣಿಸದೆ ಅದರ ಜತೆ ತಲ್ಲೀನರಾಗಬೇಕು. ವಿವಿಧ ಸೂತ್ರಗಳೊಂದಿಗೆ, ತಂತ್ರಗಳೊಂದಿಗೆ ನಿರಂತರ ಲೆಕ್ಕಗಳನ್ನು ಬಿಡಿಸಿದಾಗ ಸರಳವಾಗಿ ಸಂತಸದೊಂದಿಗೆ ಗಣಿತ ಕಲಿಯಬಹುದು. ಗಣಿತದಲ್ಲಿ ಪಾಂಡಿತ್ಯ ಹೊಂದಿದರೆ ಎಲ್ಲ ವಿಷಯಗಳಲ್ಲಿ ಪಾಂಡಿತ್ಯ ಹೊಂದಿದಂತೆ. ಆದ್ದರಿಂದ ಲಕ್ಷವಿಟ್ಟು ಗಣಿತ ಕಲಿತು ಎಲ್ಲ ರೀತಿಯ ಜ್ಞಾನ ಹೊಂದಬೇಕು ಎಂದರು.

ಹದಲಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಪಿ.ಸಿ. ಕಲಹಾಳ ಮಾತನಾಡಿ, ಗಣಿತವನ್ನು ನಿರಂತರ ಚಟುವಟಿಕೆಗಳ ಮೂಲಕ ಸರಳವಾಗಿಸಲು ಸಾಧ್ಯ. ಅದರಷ್ಟು ಸರಳವಾದ ವಿಷಯ ಮತ್ತೊಂದಿಲ್ಲ. ಜೀವನಕ್ಕೆ ಹತ್ತಿರವಾಗಿರುವ ಗಣಿತ ಬದುಕಿನ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯ. ಗಣಿತ ಇಲ್ಲದೇ ಉಳಿದ ವಿಷಯಗಳನ್ನು ಅರಿಯಲು ಸಾಧ್ಯವಿಲ್ಲ. ಗಣಿತ ಎಲ್ಲ ವಿಷಯಗಳ ಮಹಾರಾಣಿಯಾಗಿದೆ ಎಂದರು.

ಲಯನ್ಸ್ ಶಿಕ್ಷಣ ಸಂಸ್ಥೆ ನಿರ್ದೇಶಕ ಜಿ.ಬಿ. ಕುಲಕರ್ಣಿ, ಡಾ.ಬಿ.ಎಂ. ಜಾಬಣ್ಣವರ, ಸಿ.ಎಸ್. ಸಾಲೂಟಗಿಮಠ, ವಿಜಯಕುಮಾರ ಬೇಲೇರಿ, ಎಸ್.ಎಸ್. ಪಾಟೀಲ, ರಾಘವೇಂದ್ರ ಆನೇಗುಂದಿ, ನಿರ್ಣಾಯಕ ಗಂಗಾಧರ, ಐ.ಎಂ. ಹುರಕಡ್ಲಿ, ಮಾರುತಿ ಭಜಂತ್ರಿ, ನಿತಿನ್ ಕೇಸರಕರ, ಮುಖ್ಯೋಪಾಧ್ಯಾಯ ಡಾ.ವೈ.ಪಿ. ಕಲ್ಲನಗೌಡ್ರ, ಪ್ರಾಚಾರ್ಯ ಎಸ್.ಜಿ. ಜಕ್ಕಲಿ, ವಿಭಾ ರಾಮದುರ್ಗ, ಕಿರಣ ಪೂಜಾರ, ಪಾರ್ವತಿ ಹಿರೇಮಠ, ಅಕ್ಷತಾ ಅವಘಾನ, ಪೂಜಾ ಚವಡನ್ನವರ ಭಾಗವಹಿಸಿದ್ದರು.

 ಆಕರ್ಷಕ ಮಾದರಿ ಪ್ರದರ್ಶನ:  ಗಣಿತದ ಮಾದರಿ ವಸ್ತು ಪ್ರದರ್ಶನದಲ್ಲಿ ಜ್ಞಾನ ಮುದ್ರಾ ಪಬ್ಲಿಕ್ ಶಾಲೆ, ಶಾರದಾಂಬಾ ಪ್ರೌಢಶಾಲೆ, ಜಗನ್ನಾಥ ಅಕ್ಷರಂ ವಿದ್ಯಾಮಂದಿರ, ಎಸ್.ಎಂ.ವಿ ಸಿಬಿಎಸ್​ಇ ಶಾಲೆ, ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ಅಲ್ಲಮಪ್ರಭು ಪ್ರೌಢಶಾಲೆ, ಲಯನ್ಸ್​ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಂದ ಘಾತಾಂಕಗಳ ನಿಯಮ, ವಾಸ್ತವ ಸಂಖ್ಯೆಗಳು, ಭಿನ್ನರಾಶಿಗಳು, ರೇಖಾ ಗಣಿತದ ನಗರ, ತ್ರಿಕೋನ ಮಿತಿಯತೋಟ, ಘನಾಕೃತಿಗಳ ರಚನೆ, ಫೈಥಾಗೋರಸ್​ನ ಪ್ರಮೇಯದ ಮಾದರಿ ಸೇರಿ ತಾಲೂಕಿನ ವಿವಿಧ ಶಾಲೆಗಳ 100 ವಿದ್ಯಾರ್ಥಿಗಳಿಂದ 70ಕ್ಕೂ ಹೆಚ್ಚು ಗಣಿತದ ಮಾದರಿಗಳ ವಸ್ತು ಪ್ರದರ್ಶನ ಆಕರ್ಷಕವಾಗಿ ನಡೆಯಿತು. ಪಟ್ಟಣದ ವಿವಿಧ ಶಾಲೆಗಳ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.