ಗಂಗಾವತಿ ಆನೆಗೊಂದಿ ರಸ್ತೆ ಉಪವಿಭಾಗ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯ ವ್ಯಾಪ್ತಿಯಲ್ಲಿ ಅಂಗಡಿ ಮುಂಗಟ್ಟುಗಳಿಗೆ ನಗರಸಭೆ ಆರೋಗ್ಯ ನಿರೀಕ್ಷಕ ಎ.ನಾಗರಾಜ್ ನೇತೃತ್ವದ ತಂಡ ಗುರುವಾರ ಭೇಟಿ ನೀಡಿ ಗುಟ್ಕಾ ಪೌಚಗಳನ್ನು ವಶಪಡಿಸಿಕೊಂಡಿತ್ತು. 
ಜಿಲ್ಲೆ

ಹೆರಿಗೆ, ಮಕ್ಕಳ ಆಸ್ಪತ್ರೆ ವ್ಯಾಪ್ತಿಯಲ್ಲಿ ಗುಟ್ಕಾ, ಸಿಗರೇಟ್, ಪ್ಲಾಸ್ಟಿಕ್ ಪ್ರೇರಿತ ವಸ್ತುಗಳು ಜಪ್ತಿ

ಗಂಗಾವತಿ: ನಗರದ ಆನೆಗೊಂದಿ ರಸ್ತೆ ಉಪವಿಭಾಗ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ ವ್ಯಾಪ್ತಿಯಲ್ಲಿ ಅಂಗಡಿ ಮುಂಗಟ್ಟುಗಳಿಗೆ ನಗರಸಭೆ ಆರೋಗ್ಯ ನಿರೀಕ್ಷಕರ ತಂಡ ಗುರುವಾರ ಭೇಟಿ ನೀಡಿ ಪರಿಶೀಲಿಸಿತು.

ಆಸ್ಪತ್ರೆಯ 100 ಮೀ.ವ್ಯಾಪ್ತಿಯಲ್ಲಿ ಗುಟ್ಕಾ, ಸಿಗರೇಟ್, ಮದ್ಯ, ಮಾದಕ ವಸ್ತುಗಳು ಮತ್ತು ಪ್ಲಾಸ್ಟಿಕ್ ಪ್ರೇರಿತ ವಸ್ತುಗಳನ್ನು ಮಾರಾಟ ಮಾಡದಂತೆ ನಿಯಮವಿದ್ದು, ಇತ್ತೀಚೆಗೆ ಮಾರಾಟ ಹೆಚ್ಚಾಗಿತ್ತು. ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಆರೋಗ್ಯ ನಿರೀಕ್ಷಕ ಎ.ನಾಗರಾಜ್ ನೇತೃತ್ವದ ಅಧಿಕಾರಿಗಳ ತಂಡ ದಿಢೀರ ಭೇಟಿ ನೀಡಿ ಪರಿಶೀಲಿಸಿತು.

ಗುಟ್ಕಾ, ಸಿಗರೇಟ್ ಸೇರಿ ಪ್ಲಾಸ್ಟಿಕ್ ಪ್ರೇರಿತ ವಸ್ತುಗಳನ್ನು ಜಪ್ತಿ ಮಾಡಿದ ಅಧಿಕಾರಿಗಳು, ಪುನಃ ಮಾರಾಟ ಮಾಡಿದರೆ ಪ್ರಕರಣ ದಾಖಲಿಸುವ ಬಗ್ಗೆ ಮಾಲೀಕರಿಗೆ ಎಚ್ಚರಿಸಿದರು. ಸ್ಥಳಕ್ಕೆ ಆಡಳಿತಾಧಿಕಾರಿ ಡಾ.ಈಶ್ವರ ಸವಡಿ ಭೇಟಿ ನೀಡಿ ಅಂಗಡಿಕಾರರು ಮತ್ತು ಆಟೋ ಚಾಲಕರೊಂದಿಗೆ ಪರಿಸರ ಸ್ವಚ್ಛತೆ ಬಗ್ಗೆ ಚರ್ಚಿಸಿದರು.

ಆರೋಗ್ಯ ನಿರೀಕ್ಷಕ ಎ.ನಾಗರಾಜ್ ಮಾತನಾಡಿ, ಆಸ್ಪತ್ರೆ ಆರಂಭವಾದ್ದರಿಂದ ಬೀದಿಬದಿ ಅಂಗಡಿಗಳು ಹೆಚ್ಚಾಗಿದ್ದು, ಆಸ್ಪತ್ರೆ ವ್ಯಾಪ್ತಿಯಲ್ಲಿ ಗುಟ್ಕಾ, ಸಿಗರೇಟ್, ಮದ್ಯ ಸೇರಿ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡಬಾರದು. ನೀರಿನ ಬಾಟಲ್ ಮತ್ತು ಪೌಚ್‌ಗಳನ್ನಿಡದಂತೆ ಸೂಚಿಸಲಾಗಿದ್ದು, ಆಸ್ಪತ್ರೆ ಸುತ್ತಲೂ ಸ್ವಚ್ಛತೆ ಕಾಯ್ದುಕೊಳ್ಳದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದರು.