ಜಿಲ್ಲೆ

ಶಾಸನ, ಸಾಹಿತಿಗಳ ಪರಿಚಯವಾಗುವಂತಿರಲಿ: ಎಂಎಲ್‌ಸಿ ಮಧು ಮಾದೇಗೌಡ ಅಧ್ಯಕ್ಷತೆಯಲ್ಲಿ ಸಭೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಸ್ತು ಪ್ರದರ್ಶನ ಸಮಿತಿ ಸಭೆ ಆಯೋಜಿಸಲಾಗಿತ್ತು.

ಸಮಿತಿ ಅಧ್ಯಕ್ಷರೂ ಆದ ಎಂಎಲ್‌ಸಿ ಮಧು ಮಾದೇಗೌಡ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಸದಸ್ಯರು ತಮ್ಮ ಸಲಹೆ ನೀಡಿದರು. ಅದರಂತೆ ಕನ್ನಡ ಸಾಹಿತ್ಯ, ಕಲೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಸಿಕ್ಕಿರುವ ಶಾಸನ, ಜಿಲ್ಲೆಯ ಸಾಹಿತಿಗಳ ಪರಿಚಯ, ಅವರ ಕೃತಿ ಹಾಗೂ ಪ್ರಶಸ್ತಿ, ರೈತ ಚಳವಳಿ, ಕನ್ನಡ ಬಾವುಟ, ಕನ್ನಡ ಸಾಹಿತ್ಯಕ್ಕೆ ಮುದ್ರಣ ಸಂಸ್ಥೆ ಹಾಗೂ ಪ್ರಕಾಶಕರು ಸಾಹಿತ್ಯಕ್ಕೆ ನೀಡಿರುವ ಕೊಡುಗೆಗಳ ಬಗ್ಗೆ ಪ್ರದರ್ಶನವನ್ನು ಏರ್ಪಡಿಸುವುದು ಅವಶ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಅಂತೆಯೇ ವಸ್ತು ಪ್ರದರ್ಶನ ಸಮಿತಿಗೆ ಸಂಬಂಧಿಸಿದಂತೆ ಮಳಿಗೆ ಸ್ಥಾಪಿಸಲು ಯಾವ ಇಲಾಖೆಗೆ ಎಷ್ಟು ವಿಸ್ತೀರ್ಣವುಳ್ಳ ಜಾಗಬೇಕು ಎಂಬುದರ ಬಗ್ಗೆ ಚರ್ಚಿಸಿದರು.

ಮಧು ಮಾದೇಗೌಡ ಮಾತನಾಡಿ, ವಸ್ತು ಪ್ರದರ್ಶನ ಮಳಿಗೆಗಳು ವಿನೂತನ ರೀತಿಯಲ್ಲಿ ಜನರನ್ನು ಆಕರ್ಷಿಸುವಂತಹ ವೈವಿಧ್ಯಮಯವಾಗಿರಬೇಕು. ಸಮ್ಮೇಳನಕ್ಕೆ ಬರುವ ಜನರಿಗೆ ಆಹಾರ ಮಳಿಗೆ ಜತೆಗೆ ಸರ್ಕಾರಿ ಕಾರ್ಯಕ್ರಮದ ಯೋಜನೆ, ಸೌಲಭ್ಯ ಹಾಗೂ ಆಯಾ ಇಲಾಖೆಗೆ ಸಂಬಂಧಿಸಿದ ಇನ್ನಿತರೆ ವಿಷಯಗಳ ಬಗ್ಗೆ ಅರಿವು ಮೂಡಿಸಿ. ಸಮ್ಮೇಳನದಲ್ಲಿ ವಸ್ತು ಪ್ರದರ್ಶನದಲ್ಲಿ ಎಷ್ಟು ಮಳಿಗೆ ಹಾಕಬಹುದು ಎಂದು ತಾತ್ಕಾಲಿಕವಾಗಿ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ನಿಖರ ಹಾಗೂ ಸ್ಪಷ್ಟವಾಗಿ ಯೋಜನೆ ರೂಪಿಸಿ ಅದರಂತೆ ಕಾರ್ಯ ನಿರ್ವಹಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಕಸಾಪ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ, ಜಂಟಿ ಕೃಷಿ ನಿರ್ದೇಶಕ ಡಾ.ವಿ.ಎಸ್.ಅಶೋಕ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಡಿಡಿಪಿಐ ಎಚ್.ಶಿವರಾಮೇಗೌಡ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ರಾಘವೇಂದ್ರ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಡಾ.ಸಿದ್ದಲಿಂಗೇಶ್, ನಬಾರ್ಡ್ ಜಿಲ್ಲಾ ವ್ಯವಸ್ಥಾಪಕಿ ಹರ್ಷಿತಾ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅರುಣ್‌ಕುಮಾರ್, ಸದಸ್ಯರಾದ ಕೆಂಪರಾಜು, ಮಹೇಶ್‌ಚಂದ್ರಗುರು, ಸತೀಶ್ ಜವರೇಗೌಡ ಇತರರಿದ್ದರು.