ಮಂಗಳೂರು: ದೇಶದ ಪ್ರತಿಷ್ಠಿತ ಅಡುಗೆ ಸ್ಪರ್ಧೆ ಮಾಸ್ಟರ್ ಶೆಫ್ ಎಂಟನೇ ಆವೃತ್ತಿಯ ವಿಜೇತರಾಗಿರುವ ಮೊಹಮ್ಮದ್ ಆಶಿಕ್ ಅವರನ್ನು ಭಾನುವಾರ ಆಶಿಕ್ ಫ್ಯಾನ್ಸ್ ಕುಡ್ಲ ಗೆಳೆಯರ ಬಳಗದ ವತಿಯಿಂದ ಪಾಂಡೇಶ್ವರ ನೆಕ್ಸಸ್ ಫಿಝಾ ಮಾಲ್‌ನಲ್ಲಿ ಸನ್ಮಾನಿಸಲಾಯಿತು.'
ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಅವರು ಮೊಹಮ್ಮದ್ ಆಶಿಕ್ ಅವರನ್ನು ಸನ್ಮಾನಿಸಿದರು. ಊರಿನ ಯುವನಕ ಸಾಧನೆ ಹೆಮ್ಮೆಯ ವಿಷಯವಾಗಿದೆ ಎಂದು ಶ್ಲಾಘಿಸಿದರು. ಊರಿನ ಎಲ್ಲರ ಪ್ರೀತಿ, ವಿಶ್ವಾಸ, ಹಾರೈಕೆಯ ಫಲವಾಗಿ ತನಗೆ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ ಎಂದು ಸನ್ಮಾನಿತ ಆಶಿಕ್ ಪ್ರತಿಕ್ರಿಯಿಸಿದರು.
ನೆಕ್ಸಸ್ ಫಿಝಾ ಮಾಲ್‌ನ ನಿರ್ದೇಶಕ ಅರವಿಂದ ಶ್ರೀವಾಸ್ತವ್, ಆಶಿಕ್ ತಂದೆ ಅಬ್ದುಲ್ ಖಾದರ್ ಹಾಗೂ ತಾಯಿ ಸಾರಮ್ಮ ಉಪಸ್ಥಿತರಿದ್ದರು.
ಆಶಿಕ್ ಫ್ಯಾನ್ಸ್ ಕುಡ್ಲ ಗೆಳೆಯರ ಬಳಗದ ಸೈಫ್ ಸುಲ್ತಾನ್ ಕಾರ್ಯಕ್ರಮ ನಿರೂಪಿಸಿದರು.
ಅಂತರಾಷ್ಟ್ರೀಯ ಖ್ಯಾತಿಯ ಸೂಪರ್ ಸ್ಟಾರ್ ಶೆಪ್‌ಗಳು ತೀರ್ಪುಗಾರರಾಗಿರುವ ಸೋನಿ ಲೈವ್‌ನಲ್ಲಿ ಪ್ರಸಾರವಾದ ಮಾಸ್ಟರ್ ಶೆಫ್ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿರುವ ಮೊಹಮ್ಮದ್ ಆಶಿಕ್ ಅವರು ಮಧ್ಯಾಹ್ನ ಆಗಮಿಸಿದಾಗ ಅವರಿಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕುಟುಂದ ಸದಸ್ಯರು, ಅಭಿಮಾನಿಗಳು ಚೆಂಡೆ ವಾದ್ಯಗಳ ಸಹಿತ ಭರ್ಜರಿ ಸ್ವಾಗತ ನೀಡಿದರು ಬಳಿಕ ಫಿಝಾ ಮಾಲ್‌ಗೆ ಆಗಮಿಸಿದ ಆಶಿಕ್ ಅವರನ್ನು ನೋಡಲು ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಸೇರಿದ್ದರು. ಈ ಪೈಕಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.