ಬೆಳಗಾವಿ:ಭಾರತೀಯ ಹಬ್ಬಗಳು ಸಂಸ್ಕೃತಿಯ ಪ್ರತೀಕವಾಗಿವೆ. ಮಾನವನ ಜೀವನದಲಂಕಾರ ಮತ್ತು ಮನಸ್ಸಿನ ಉದ್ಧಾರಕ್ಕಾಗಿ ಹಬ್ಬಗಳ ಆಚರಣೆ ಇಂದು ತುಂಬ ಅವಶ್ಯಕ. ಪಾಶ್ಚಾತ್ಯ ಸಂಸ್ಕೃತಿಯ ಪರಿಣಾಮ ಮೌಲ್ಯಗಳು ಅಧಃಪತನವಾಗುತ್ತಿರುವ ಸಂದರ್ಭದಲ್ಲಿ ನಮ್ಮ ಮುಂದಿನ ಪೀಳಿಗೆಗೆ ಈ ಹಬ್ಬಗಳ ಆಚರಣೆಯ ನಿಜವಾದ ಅರ್ಥವನ್ನು ತಿಳಿಸಿಕೊಡಬೇಕು ಎಂದು ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಹೇಳಿದರು.
ನಗರದ ಕಾರಂಜಿ ಮಠದಲ್ಲಿ ಜರುಗಿದ ಶ್ರಾವಣ ಮಾಸದ ಮೊದಲ ಸೋಮವಾರದ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಮಚಂದ್ರ ಏಡಕೆ ಅವರು "ಭಾರತೀಯ ಹಬ್ಬಗಳ ಮಹತ್ವ" ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು. ಯುಗಾದಿಯಿಂದ ಆರಂಭವಾಗುವ ಭಾರತೀಯ ಹಬ್ಬಗಳ ಹಿಂದೆ ಹಿರಿಯರು ವೈಜ್ಞಾನಿಕ ಚಿಂತನೆ ಮಾಡಿದ್ದಾರೆ. ಹೀಗಾಗಿ ಋತುಮಾನಕ್ಕೆ ತಕ್ಕಂತೆ ಪ್ರಕೃತಿ ಬದಲಾವಣೆ ಆಗುತ್ತದೆ, ಅದಕ್ಕೆ ತಕ್ಕಂತೆ ಹಬ್ಬಗಳ ಆಚರಣೆ ರೂಢಿಯಲ್ಲಿ ಬಂದಿವೆ. ಇಂದಿನ ಮಕ್ಕಳಿಗೆ ಹಬ್ಬಗಳ ಮಹತ್ವ ತಿಳಿಸಿ, ನಮ್ಮ ಉದಾತ್ತ ಸಂಸ್ಕೃತಿಯನ್ನು ಕಾಪಾಡಕೊಳ್ಳಬೇಕಾಗಿದೆ ಎಂದು ಉಪನ್ಯಾಸದಲ್ಲಿ ಹೇಳಿದರು.
ಇದೇ ಸಂದರ್ಭದಲ್ಲಿ ಕನ್ನಡ ಹೋರಾಟಗಾರ ಅಶೋಕ ಚಂದರಗಿ ಅವರನ್ನು ಶ್ರೀಗಳು ಸನ್ಮಾನಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ವಿದ್ವಾಂಸರಾದ ಎಲ್.ಎಸ್. ಶಾಸ್ತ್ರಿ ಅವರು ವಹಿಸಿ ಮಾತನಾಡುತ್ತಾ ಇಂದು ಪರಿಸರ ಹಾನಿ ಮಾಡಿದ ಪರಿಣಾಮವಾಗಿ ಕೆರಳದ ವಯನಾಡು, ಉತ್ತರದಲ್ಲಿ ಆಗುತ್ತಿರುವ ಪ್ರಕೃತಿ ವಿಕೋಪಗಳು ಆತಂಕವನ್ನುಂಟು ಮಾಡುತ್ತಿವೆ. ನಾವು ಪರಿಸರ ಸಂರಕ್ಷಣೆ ಮಾಡಿದರೆ, ಪರಿಸರ ನಮ್ಮನ್ನು ಕಾಪಾಡುತ್ತದೆ. ಆದ್ದರಿಂದ ಭವಿಷ್ಯದಲ್ಲಿ ಆಗಬಹುದಾದ ಅನಾಹುತಗಳನ್ನು ತಡೆಗಟ್ಟಲು ನಾವೆಲ್ಲ ಪರಿಸರ ರಕ್ಷಣೆಗಾಗಿ ಹೋರಾಡಬೇಕಾಗಿದೆ ಎಂದು ತಿಳಿಸಿದರು.
ಶ್ರೀಮಠದ ಉತ್ತರಾಧಿಕಾರಿಗಳಾದ ಶ್ರೀ ಶಿವಯೋಗಿ ದೇವರು ಉಪಸ್ಥಿತರಿದ್ದರು.
ಕುಮಾರೇಶ್ವರ ಸಂಗೀತ ಶಾಲೆಯ ಮಕ್ಕಳು ವಚನ ಪ್ರಾರ್ಥನೆ ಸಲ್ಲಿಸಿದರು. ಎ. ಕೆ. ಪಾಟೀಲ ನಿರೂಪಿಸಿದರು, ವಿ. ಕೆ. ಪಾಟೀಲ ವಂದಿಸಿದರು.