ಜಿಲ್ಲೆ

26ರಂದು ಮಾಸ್ತಿ ಸರ್ಕಾರಿ ಶಾಲೆ ಲೋರ್ಕಾಪಣೆ

ಮಾಸ್ತಿ: ಗ್ರಾಮದಲ್ಲಿ 7.50 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಿರುವ ಸುಸಜ್ಜಿತ ಸರ್ಕಾರಿ ಶಾಲಾ ಕಟ್ಟಡವನ್ನು ಶಿಕ್ಷಣ ಮಂತ್ರಿ ಮಧು ಬಂಗಾರಪ್ಪ ಹಾಗೂ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್​ ಅವರು ಜು.26 ಶನಿವಾರದಂದು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.

ಮಾಸ್ತಿ ಗ್ರಾಮದ ಬಸ್​ ನಿಲ್ದಾಣದ ಸಮೀಪ ಪಬ್ಲಿಕ್​ ಶಾಲೆಯ ಆವರಣದಲ್ಲಿ ಓಸಾಟ್​ ಸಂಸ್ಥೆಯ ಸಹಯೋಗದಲ್ಲಿ ನಿರ್ಮಿಸಿರುವ ನೂತನ ಸರ್ಕಾರಿ ಶಾಲೆ ಕಟ್ಟಡವನ್ನು ಪರಿಶೀಲಿಸಿ ಮಾತನಾಡಿದ ಅವರು, ಖ್ಯಾತ ಸಾಹಿತಿ ಡಾ.ಮಾಸ್ತಿ ವೆಂಕಟೇಶ್​ ಅಯ್ಯಂಗಾರ ಜನಿಸಿದ ಈ ಗ್ರಾಮಕ್ಕೆ ಕೆಪಿಎಸ್​ ಶಾಲೆ ಮಂಜೂರು ಮಾಡಲಾಗಿತ್ತು. ಪ್ರಸ್ತುತ ಎಲ್​ಕೆಜಿಯಿಂದ ಪಿಯುಸಿವರೆಗೂ ಸುಮಾರು 1,250 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಶಾಲೆಗೆ ಒಸಾಟ್​ ಸಂಸ್ಥೆಯ ಲಿಂಡಾ ಮತ್ತು ಶ್ರೀ ಜನಾರ್ಧನ್​ ಟಕ್ಕರ್​ ಅವರು ಸರ್ಕಾರಿ ಶಾಲೆಗೆ ಬರುವ ಬಡವರು ಮಧ್ಯಮ ವರ್ಗದ ಮಕ್ಕಳ ಗುಣಾತ್ಮಕ ಶಿಕ್ಷಣಾಕ್ಕಾಗಿ ಸುಸಜ್ಜಿತ ಕಟ್ಟಡ ನಿರ್ಮಿಸಿದ್ದಾರೆ ಎಂದರು.

ಪ್ರತಿ ತರಗತಿಯಲ್ಲಿ ಮಕ್ಕಳು ಕುಳಿತುಕೊಳ್ಳಲು ಡೆಸ್ಕ್​ಗಳು ಹಾಗೂ ಕಬೋರ್ಡ್​ಗಳನ್ನು ನಿರ್ಮಿಸಲಾಗಿದೆ. ಶಿಕ್ಷಕರ ಕೊಠಡಿಗೆ ಟೇಬಲ್​, ಚೇರ್​ಗಳನ್ನು, ವಿಜ್ಞಾನ ಪ್ರಯೋಗಾಲಯಕ್ಕೆ, ಗ್ರಂಥಾಲಯಕ್ಕೆ ಗುಣಮಟ್ಟದ ಪೀಠೋಪಕರಣಗಳನ್ನು ನೀಡಿದ್ದಾರೆ. ಮಕ್ಕಳ ಕಲಿಕೆಗೆ ಅನುಕೂಲವಾಗುವ ಚಿತ್ರಗಳನ್ನು ಗೋಡೆಗಳ ಮೇಲೆ ಬರೆಸಲಾಗಿದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಸುಸಜ್ಜಿತ ಕಾಂಪೌಂಡ್​ ನಿರ್ಮಿಸಿದ್ದು, ವಿದ್ಯಾರ್ಥಿಗಳ ಕ್ರೀಡೆ ಸಹಕರಿಸುವಂತಹ ಸಾಮಾಗ್ರಿಗಳನ್ನು ಒದಗಿಸಿದ್ದಾರೆ. 1 ವರ್ಷದ ಕಾಲ ಶಾಲೆಯನ್ನು ನಿರ್ವಹಣೆ ಮಾಡಲಿದ್ದಾರೆ. ಇದಲ್ಲದೆ ಮುಂದಿನ ದಿನಗಳಲ್ಲಿ ಇನ್ನು ಅಗತ್ಯವಿರುವ 6 ತರಗತಿ ಕೊಠಡಿ ನಿರ್ಮಿಸಿಕೊಡಲಿದ್ದಾರೆ ಎಂದರು.

ಎಸ್​ಡಿಎಂಸಿ ಅಧ್ಯಕ್ಷ ಅಕ್ರಂಪಾಷಾ, ಮಾಸ್ತಿ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಎಚ್​.ಎಂ.ವಿಜಯ ನರಸಿಂಹ, ಗ್ರಾಪಂ ಉಪಾಧ್ಯಕ್ಷ ಚೇತನ್​, ಗ್ರಾಪಂ ಸದಸ್ಯ ಜೆಸಿಬಿ ನಾಗರಾಜ್​, ಮುಖಂಡ ಟೆಂಪೋ ಮುನಿಯಪ್ಪ, ಪಿಡಿಒ ನನೀನ್​ ಇದ್ದರು.