ಮಡಿಕೇರಿ:
ಪಶ್ಚಿಮಘಟ್ಟದಲ್ಲಿ ಭೂ ಪರಿವರ್ತನೆಗೆ ತಾತ್ಕಾಲಿಕವಾಗಿ ಕಡಿವಾಣ ಹಾಕಲು ರಾಜ್ಯ ಸರ್ಕಾರ ನಡೆಸಿರುವ ಚಿಂತನೆ ಜಿಲ್ಲೆಯಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಚಿಂತನೆಗೆ ಪೂರಕವಾಗಿ ಕೊಡಗಿನಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದ್ದ ಸಂದರ್ಭ ಸಲ್ಲಿಕೆಯಾಗಿದ್ದ ತಜ್ಞರ ವರದಿಯನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಉಲ್ಲೇಖಿಸಿದ್ದಾರೆ. ಮತ್ತೊಂದು ಕಡೆ ಜಿಲ್ಲೆಯಲ್ಲಿ ಇತ್ತೀಚೆಗೆ ದೊಡ್ಡ ಪ್ರಮಾಣದಲ್ಲಿ ಭೂ ಪರಿವರ್ತನೆಗಳು ನಡೆಯುತ್ತಿದ್ದು, ಕಳೆದ ಮೂರು ವರ್ಷಗಳಲ್ಲಿ 1,977 ಪ್ರಸ್ತಾವನೆಗಳು ಸರ್ಕಾರದಿಂದ ಸ್ವೀಕೃತವಾಗಿದೆ.
ಇತ್ತೀಚೆಗೆ ಪಕ್ಕದ ಕೇರಳದ ವಯನಾಡಿನಲ್ಲಿ ಸಂಭವಿಸಿದ ಪ್ರಾಕೃತಿಕ ದುರಂತ, ನಮ್ಮ ರಾಜ್ಯದ ಶಿರಾಡಿ, ಉತ್ತರಕನ್ನಡ ಜಿಲ್ಲೆಯಲ್ಲಿನ ದುರ್ಘಟನೆಗಳ ನಂತರ ಪಶ್ಚಿಮಘಟ್ಟದ ಸಂರಕ್ಷಣೆಗೆ ಸರ್ಕಾರ ವಿಶೇಷ ಆದ್ಯತೆ ಕೊಡುತ್ತಿದೆ. ಸೂಕ್ಷ್ಮ ಪರಿಸರ ಪ್ರದೇಶ ಹೊಂದಿರುವ ಪಶ್ಚಿಮ ಘಟ್ಟ ರಕ್ಷಣೆ ಮಾಡದಿದ್ದರೆ ಭವಿಷ್ಯದಲ್ಲಿ ಮತ್ತಷ್ಟು ಅಪಾಯದ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಕರ್ನಾಟಕ ಸರ್ಕಾರ ಇದನ್ನು ರಕ್ಷಿಸುವ ನಿಟ್ಟಿನಲ್ಲಿ ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದರ ಒಂದು ಭಾಗವಾಗಿ ಈ ಪ್ರದೇಶದ ಭೂ ಪರಿವರ್ತನೆ ಪ್ರಸ್ತಾವನೆಗಳನ್ನು ತಾತ್ಕಾಲಿಕವಾಗಿ ತಡೆ ಹಿಡಿಯುವ ಬಗ್ಗೆ ಚಿಂತನೆ ಹಂಚಿಕೊAಡಿದ್ದು, ಪರಿಸರ ಸೂಕ್ಷ್ಮ ಪ್ರದೇಶ ರಕ್ಷಿಸುವ ಸಲುವಾಗಿ ಒಂದು ಮಾಸ್ಟರ್ ಪ್ಲಾಸ್ ರೂಪಿಸುವ ತೀರ್ಮಾನವನ್ನೂ ತೆಗೆದುಕೊಳ್ಳಲಾಗಿದೆ.
ಪಶ್ಚಿಮ ಘಟ್ಟ ಸಂರಕ್ಷಣೆಗೆ ಸಂಬAಧಿಸಿದAತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಬಿ. ಖಂಡ್ರೆ ತಮ್ಮ ಇಲಾಖೆಯ ಅಧಿಕಾರಿಗಳ ಜೊತೆಗೆ ಸಮಾಲೋಚನೆ ಸಭೆ ನಡೆಸುವ ಸಂದರ್ಭ ಈ ವಿಷಯದಲ್ಲಿ ತಜ್ಞರ ಅಭಿಪ್ರಾಯಕ್ಕೆ ಮನ್ನಣೆ ನೀಡುವುದಕ್ಕೆ ಒತ್ತು ಕೊಟ್ಟಿದ್ದಾರೆ. ದಕ್ಷಿಣ ಭಾರತಕ್ಕೆ ಜೀವಜಲ ನೀಡುವ ಹಲವು ನದಿಗಳ ಮೂಲವಾಗಿರುವ, ಅಪರೂಪದ ಜೀವ ವೈವಿಧ್ಯತೆಗಳನ್ನು ಹೊಂದಿರುವ ಪಶ್ಚಿಮ ಘಟ್ಟ ಸಂರಕ್ಷಿಸುವುದರ ಅಗತ್ಯತೆ ಬಗ್ಗೆ ಸಚಿವ ಈಶ್ವರ ಖಂಡ್ರೆ ಕಾಳಜಿ ತೋರಿಸುತ್ತಿದ್ದಾರೆ. ಇದಕ್ಕಾಗಿ ಕರ್ನಾಟಕದಲ್ಲಿರುವ ಪಶ್ಚಿಮ ಘಟ್ಟದ ಭಾಗದಲ್ಲಿ ಭೂ ಉಪಯೋಗ ಕುರಿತು ಹೊಸ ನಿಯಮಾವಳಿ ರೂಪಿಸುವ ತನಕ ಎಲ್ಲ ಭೂ ಪರಿವರ್ತನೆ ಪ್ರಸ್ತಾವನೆಗಳನ್ನು ತಾತ್ಕಾಲಿಕವಾಗಿ ತಡೆ ಹಿಡಿಯುವುದು ಸೂಕ್ತ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದನ್ನು ಅಧಿಕಾರಿಗಳ ಸಭೆಯಲ್ಲಿ ಉಲ್ಲೇಖಿಸಿದ್ದಾರೆ.
ಕರ್ನಾಟಕ, ಕೇರಳ ಹಾಗೂ ಪಶ್ಚಿಮಘಟ್ಟದ ಇತರ ಭಾಗಗಳಲ್ಲೂ ಹಲವೆಡೆ ಭೂಕುಸಿತ, ಗುಡ್ಡ ಕುಸಿತ ಸಂಭವಿಸುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಸಚಿವ ಖಂಡ್ರೆ, ಕೊಡಗಿನಲ್ಲಿ 2018,19ರಲ್ಲಿ ಸಂಭವಿಸಿದ ಭೂಕುಸಿತ ಪ್ರಕರಣಗಳ ಅಧ್ಯಯನ ನಡೆಸಿದ್ದ ತಜ್ಞರ ವರದಿಯಲ್ಲಿನ ಅಂಶಗಳನ್ನು ಪ್ರಸ್ತಾಪ ಮಾಡಿದ್ದಾರೆ. ಅರಣ್ಯ ಒತ್ತುವರಿ ಮತ್ತು ಮಾನವ ಅಭಿವೃದ್ಧಿ ಚಟುವಟಿಕೆಗಳೇ ಅನಾಹುತಳಿಗೆ ಪ್ರಾಥಮಿಕ ಕಾರಣ ಎಂಬ ಉಲ್ಲೇಖ ಆ ವರದಿಯಲ್ಲಿರುವುದರಿಂದ ಪಶ್ಚಿಮಘಟ್ಟ ಭಾಗದಲ್ಲಿ ಸಂಭಾವ್ಯ ದುರಂತ ತಡೆಯಲು ಮುನ್ನೆಚ್ಚರಿಕೆ ಕ್ರಮಗಳ ಅಗತ್ಯತೆ ಇದ್ದು, ಭೂ ಪರಿವರ್ತನೆಗೆ ಕಡಿವಾಣ ಹಾಕುವುದರ ಮಹತ್ವವನ್ನು ಪ್ರತಿಪಾದಿಸಿದ್ದಾರೆ.
ಭೂ ಪರಿವರ್ತನೆಗೆ ಕೊಡಗಿನಲ್ಲಿ ಈಗಾಗಲೇ ಪರಿಸರ ಪ್ರಿಯರಿಂದ ವಿರೋಧ ವ್ಯಕ್ತವಾಗುತ್ತಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಭೂ ಪರಿವರ್ತನೆ ಮತ್ತು ಇದರಿಂದ ಆಗುವ ಪರಿಣಾಮಗಳ ಬಗ್ಗೆ ಜನಜಾಗೃತಿ ಮೂಡಿಸುವ ಸಲುವಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರದ ಚಿಂತನೆಯನ್ನು ಹಂಚಿಕೊAಡಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಮಾತುಗಳು ಪರಿಸರಾಸಕ್ತರಲ್ಲಿ ಒಂದಿಷ್ಟು ನಿರೀಕ್ಷೆಗಳನ್ನು ಮೂಡಿಸಿದೆ.
2018ರ ಆಗಸ್ಟ್ನಲ್ಲಿ ಕೊಡಗಿನಲ್ಲಿ ಸಂಭವಿಸಿದ್ದ ಭೀಕರ ಪ್ರಾಕತಿಕ ದುರಂತದ ಬೆನ್ನಲ್ಲೇ ದುರಂತ ಸಂಭವಿಸಿದ್ದ ಸ್ಥಳಗಳ ಪರಿಶೀಲನೆ ನಡೆಸಿದ್ದ ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ ಕೊಡಗಿನಲ್ಲಿ ಭೂ ಪರಿವರ್ತನೆ ನಿಷೇಧಿಸಲು ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಈ ಹಿನ್ನೆಲೆಯಲ್ಲಿ ಕೊಡಗಿನಲ್ಲಿ ಭೂ ಪರಿವರ್ತನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು 2018ರ ನವೆಂಬರ್ 23ರಂದು ಅಂದಿನ ಜಿಲ್ಲಾಧಿಕಾರಿಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ನಿರ್ದೇಶನ ನೀಡಿದ್ದರು. ನಂತರ 2019ರ ಮೇ 8ರಂದು ಆದೇಶದಲ್ಲಿ ಸ್ವಲ್ಪ ಮಾರ್ಪಾಡು ಮಾಡಿ ವಾಸ್ತವ್ಯದ ಉದ್ದೇಶಕ್ಕೆ ಮನೆ ನಿರ್ಮಾಣ ಮಾಡುವವರಿಗೆ 15ರಿಂದ 20 ಸೆಂಟ್ಸ್ ಪ್ರದೇಶಕ್ಕೆ ಸೀಮಿತಗೊಳಿಸಿ ಭೂ ಪರಿವರ್ತನೆಗೆ ಅನುಮತಿಸಲು ಆದೇಶ ಹೊರಡಿಸಲಾಗಿತ್ತು. ಕೊಡಗಿನಲ್ಲಿ ಸ್ಥಗಿತಗೊಳಿಸಲಾಗಿದ್ದ ಭೂ ಪರಿವರ್ತನೆಗೆ 2020ರಲ್ಲಿ ಮತ್ತೆ ಯಥಾ ಪ್ರಕಾರ ಬಹುತೇಕ ಮುಕ್ತ ಅವಕಾಶ ಸಿಕ್ಕಿತ್ತು.
ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪಗಳ ನಂತರ ಇಲ್ಲಿ ಭೂಪರಿವರ್ತನೆಗೆ ಸರ್ಕಾರ ಷರತ್ತುಗಳನ್ನು ವಿಧಿಸಿದೆ. ನಾನ್ ಸ್ಟೇಬಲ್ ಏರಿಯಾ ಇದ್ದಲ್ಲಿ ಭೂ ಪರಿವರ್ತನೆಗೆ ಅವಕಾಶ ನೀಡಬಾರದು. ಭೂ ಪರಿವರ್ತನೆಗೆ ಅನುಮತಿ ಕೋರಿರುವ ಪ್ರದೇಶ ನದಿ, ಹಳ್ಳಗಳಿಂದ ಕನಿಷ್ಠ 10 ಮೀ. ದೂರದಲ್ಲಿರಬೇಕು. ತೀವ್ರತರವಾದ ಇಳಿಜಾರು ಇರುವ ಮತ್ತು ಕಣಿವೆಯಂತಹ ಪ್ರದೇಶಗಳಲ್ಲಿ ಮನೆ ನಿರ್ಮಾಣ ಮಾಡುವುದು ಅಪಾಯಕಾರಿಯಾಗಿರುವ ಹಿನ್ನೆಲೆಯಲ್ಲಿ ಇಲ್ಲಿ ಭೂ ಪರಿವರ್ತನೆಗೆ ಅವಕಾಶ ಕೊಡಬಾರದು. 2018ರ ಮಳೆಗಾಲದಲ್ಲಿ ಭೂ ಕುಸಿತ ಉಂಟಾದ ಜಮೀನಿನಲ್ಲಿ ಮನೆ ನಿರ್ಮಾಣ ಮಾಡುವುದು ಸೂಕ್ತವಲ್ಲದ ಕಾರಣ ಅಂತಹ ಜಮೀನುಗಳಲ್ಲಿ ಭೂ ಪರಿವರ್ತನೆಗೆ ಅವಕಾಶ ನೀಡಬಾರದು ಎನ್ನುವ ನಿಬಂಧನೆಗಳಿವೆ.
ಆದರೂ ಕಳೆದ ಮೂರು ವರ್ಷಗಳಲ್ಲಿ ಕೊಡಗಿನಲ್ಲಿ ಕಾಫಿ ತೋಟಗಳು ಮತ್ತು ಇತರ ಜಮೀನುಗಳು ಸೇರಿದಂತೆ ಒಟ್ಟು 1,977 ಭೂ ಪರಿವರ್ತನೆಯ ಪ್ರಸ್ತಾವನೆಗಳು ಸರ್ಕಾರದಿಂದ ಸ್ವೀಕೃತವಾಗಿದೆ. ಮಡಿಕೇರಿ ತಾಲೂಕಿನಲ್ಲಿ 665 ಪ್ರಸ್ತಾವನೆಗಳು ಸ್ವೀಕಾರವಾದರೆ, 465 ಪ್ರಸ್ತಾವನೆಗಳಿಗೆ ಅನುಮೋದನೆ ಸಿಕ್ಕಿದೆ. ಸೋಮವಾರಪೇಟೆ ತಾಲೂಕಿನಲ್ಲಿ 328 ಪ್ರಸ್ತಾವನೆಗಳು ಸ್ವೀಕಾರವಾಗಿದ್ದು, 148 ಅರ್ಜಿಗಳಿಗೆ ಅನುಮೋದನೆ ಸಿಕ್ಕಿದೆ. ಕುಶಾಲನಗರ ತಾಲೂಕಿನಲ್ಲಿ 506 ಪ್ರಸ್ತಾವನೆಗಳು ಸ್ವೀಕಾರವಾಗಿದ್ದು, 344 ಪ್ರಸ್ತಾವನಗಳಿಗೆ ಅನುಮತಿ ಕೊಡಲಾಗಿದೆ. ವಿರಾಜಪೇಟೆ ತಾಲೂಕಿನಲ್ಲಿ ಅತೀ ಹೆಚ್ಚು 823 ಪ್ರಸ್ತಾವನೆಗಳು ಸ್ವೀಕಾರವಾಗಿದ್ದು, 602 ಪ್ರಸ್ತಾವನೆಗಳಿಗೆ ಅನುಮತಿ ದೊರೆತಿದೆ. ಪೊನ್ನಂಪೇಟೆ ತಾಲೂಕಿನಲ್ಲಿ 665 ಪ್ರಸ್ತಾವನೆಗಳನ್ನು ಸ್ವೀಕರಿಸಿದ್ದು, 418 ಪ್ರಸ್ತಾವನೆಗಳಿಗೆ ಅನುಮತಿ ಸಿಕ್ಕಿದೆ. ಇದೀಗ ಸರ್ಕಾರದ ಮುಂದಿನ ತೀರ್ಮಾನ ಸ್ಥಳೀಯರ ಕುತೂಹಲಕ್ಕೆ ಕಾರಣವಾಗಿದೆ.
ಭೂ ಪರಿವರ್ತನೆ ಪ್ರಸ್ತಾವನೆಗಳಿಗೆ ಅನುಮೋದನೆ ನೀಡುವುದಕ್ಕೂ ಮೊದಲು ತಜ್ಞರ ಅಭಿಪ್ರಾಯಕ್ಕೆ ಮನ್ನಣೆ ನೀಡುವುದು ಒಳ್ಳೆಯದು. ಹಲವು ನದಿಗಳ ಮೂಲ, ಜೀವ ವೈವಿಧ್ಯತೆ ಹೊಂದಿರುವ ಪಶ್ಚಿಮ ಘಟ್ಟ ಪ್ರದೇಶ ಸಂರಕ್ಷಿಸುವುದಕ್ಕಾಗಿ ಕರ್ನಾಟಕದಲ್ಲಿರುವ ಈ ಭಾಗದ ಭೂ ಉಪಯೋಗ ಕುರಿತು ಹೊಸ ನಿಯಮಾವಳಿ ರೂಪಿಸುವ ತನಕ ಎಲ್ಲ ಭೂ ಪರಿವರ್ತನೆ ಪ್ರಸ್ತಾವನೆಗಳನ್ನು ತಾತ್ಕಾಲಿಕವಾಗಿ ತಡೆ ಹಿಡಿಯುವುದು ಸೂಕ್ತ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದನ್ನು ಆಧರಿಸಿ ಸೂಕ್ತ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಈಶ್ವರ ಬಿ. ಖಂಡ್ರೆ, ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಖಾತೆ ಸಚಿವ
ಕೊಡಗಿನಲ್ಲಿ ಬಂಡವಾಳಶಾಹಿಗಳಿಗೆ 99 ವರ್ಷಗಳಿಗೆ ಗುತ್ತಿಗೆ ಆಧಾರದಲ್ಲಿ ನೀಡಿರುವ ಸಾವಿರಾರು ಎಕರೆ ಭೂಮಿಯನ್ನು ಸರ್ಕಾರ ಮೊದಲು ವಶಕ್ಕೆ ಪಡೆಯಬೇಕು. ಜಿಲ್ಲೆಯಲ್ಲಿ ನಡೆದಿರುವ ಬೃಹತ್ ಭೂಪರಿವರ್ತನೆಗಳ ಕುರಿತು ಶ್ವೇತಪತ್ರ ಹೊರಡಿಸಬೇಕು. ಕೊಡಗಿನಲ್ಲಿ ನಿರಂತರವಾಗಿ ಹೊರ ಪ್ರದೇಶದ ಬಂಡವಾಳಶಾಹಿಗಳಿಗೆ, ಕಾರ್ಪೋರೇಟ್ ವಲಯಕ್ಕೆ, ಬಹುರಾಷ್ಟಿçÃಯ ಕಂಪೆನಿಗಳಿಗೆ, ಅನಿವಾಸಿ ಭಾರತೀಯರಿಗೆ, ರೆಸಾರ್ಟ್ ಮಾಫಿಯಾಗಳಿಗೆ, ದೊಡ್ಡ ಉದ್ಯಮಪತಿಗಳಿಗೆ ಭೂಮಿಯನ್ನು ಮಿತಿ ಮೀರಿ ನೀಡಿದರೆ ಭವಿಷ್ಯದಲ್ಲಿ ತೊಂದರೆಯಾಗಲಿದೆ.
ಎನ್.ಯು. ನಾಚಪ್ಪ, ಅಧ್ಯಕ್ಷ, ಕೊಡವ ನ್ಯಾಷನಲ್ ಕೌನ್ಸಿಲ್