ಪಿಲಿಕುಳ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿಧಾನ ಮಂಡಲದ ಅಧೀನ ಶಾಸನ ಸಮಿತಿ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗುರ್ಮೆ ಸುರೇಶ್ ಶೆಟ್ಟಿ, ಡಾ.ಮಂಥರ್ ಗೌಡ, ಶಿವಣ್ಣ ಬಿ., ದರ್ಶನ್ ಎಚ್.ವಿ. ಮೊದಲಾದವರಿದ್ದರು. 
ಜಿಲ್ಲೆ

ಪಿಲಿಕುಳ ಜೈವಿಕ ಉದ್ಯಾನವನ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್

ಹರೀಶ ಎಂ.
ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ರಚಿಸಿ ಎರಡು ತಿಂಗಳೊಳಗೆ ನೀಡಬೇಕು. ಸಮಿತಿ ಈ ವರದಿಯನ್ನು ಸಿಎಂ ಅವರಿಗೆ ಸಲ್ಲಿಸಿ, ಹೆಚ್ಚಿನ ಅನುದಾನ ಬಿಡುಗಡೆ ಮಾಡಲು ಪ್ರಯತ್ನ ಮಾಡಲಿದೆ ಎಂದು ವಿಧಾನ ಮಂಡಲದ ಅಧೀನ ಶಾಸನ ಸಮಿತಿ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್ ಹೇಳಿದರು.
ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಎಸ್.ಆರ್. ಶ್ರೀನಿವಾಸ್ ನೇತೃತ್ವದ ಸಮಿತಿಯು ಶುಕ್ರವಾರ ಭೇಟಿ ನೀಡಿದ ಬಳಿಕ ಜಿ.ಪಂ.ನ ನೇತ್ರಾವತಿ ಸಭಾಂಗಣದಲ್ಲಿ ಪಿಲಿಕುಳದ ನ್ಯೂನ್ಯತೆಗಳ ಬಗ್ಗೆ ಅಧಿಕಾರಿಗಳ ಜತೆ ಚರ್ಚೆ ನಡೆಸಿತು.
ಮೃಗಾಲಯದ ನಿರ್ವಹಣೆ ಸೇರಿದಂತೆ ಪಿಲಿಕುಳದಲ್ಲಿ ಕೈಗೊಳ್ಳಬಹುದಾದ ಅಗತ್ಯ ಅಭಿವೃದ್ಧಿ ಕಾರ್ಯಗಳು, ಸಿಬ್ಬಂದಿ ಕೊರತೆ, ಸಂಪನ್ಮೂಲಗಳ ಕ್ರೋಢೀಕರಣ ಸೇರಿದಂತೆ ವಿವಿಧ ಇಲಾಖೆಗಳಿಂದ ಮಾಹಿತಿಯೊಂದಿಗೆ ಮಾಸ್ಟರ್ ಪ್ಲಾನ್ ತಯಾರಿಸಿ ನೀಡಿದರೆ ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮುಖ್ಯಮಂತ್ರಿ ಜತೆ ಚರ್ಚಿಸಿ ಅಗತ್ಯ ಕ್ರಮ ವಹಿಸುವುದಾಗಿ ತಿಳಿಸಿದರು.
ಪಿಲಿಕುಳ ಜೈವಿಕ ಉದ್ಯಾನನವು ಸಾಕಷ್ಟು ವಿಸ್ತಾರವಾದ ಭೂಮಿಯಿಂದ ಕೂಡಿದ್ದರೂ ಪ್ರಚಾರದ ಕೊರತೆಯಿಂದಾಗಿ ಸಮರ್ಪಕವಾಗಿ ಅಭಿವೃದ್ಧಿಯಾಗಿಲ್ಲ, ನಿರ್ವಹಣೆ ಕೊರತೆ ಕಂಡು ಬಂದಿರುವುದಾಗಿ ಸಮಿತಿ ಅಸಮಾಧಾನ ವ್ಯಕ್ತಪಡಿಸಿತು. ಕಳೆದ ಕೆಲವು ರ್ಷಗಳಿಂದ ಪಿಲಿಕುಳದ ಬಗ್ಗೆ ಯಾವುದೇ ರೀತಿಯ ಪ್ರಚಾರಗಳು ಕಂಡು ಬರುತ್ತಿಲ್ಲ ಎಂದು ಶಾಸಕರಾದ ಶಿವಕುಮಾರ್ ಆಕ್ಷೇಪಿಸಿದರು.
ಅನುದಾನ ಕೊರತೆ ನಿರ್ವಹಣೆ ಕಷ್ಟ: ಕಳೆದ ಮೂರು ವರ್ಷಗಳಲ್ಲಿ ಪಿಲಿಕುಳಕ್ಕೆ ಸರ್ಕಾರದಿಂದ ಎಷ್ಟು ಅನುದಾನ ಬಂದಿದೆ, ಯಾವೆಲ್ಲಾ ಕಂಪನಿಗಳ ಸಹಕಾರ ಪಡೆಯಲಾಗಿದೆ ಎಂದು ಶಾಸಕ ಶರವಣ ಅವರು ಪ್ರಶ್ನಿಸಿದಾಗ, 2023-24ನೆ ಸಾಲಿನಲ್ಲಿ 6.7 ಕೋಟಿ ರೂ., 24-25ಲ್ಲಿ 10.2 ಕೋಟಿ ರೂ. ಹಾಗೂ 25-26ನೇ ಸಾಲಿನಲ್ಲಿ 8 ಕೋಟಿ ರೂ. ಅನುದಾನ ಬಂದಿದೆ. ವಾರ್ಷಿಕ ನಿರ್ವಹಣಾ ವೆಚ್ಚವೇ ಸುಮಾರು 13 ಕೋಟಿ ರೂ.ಗಳವರೆಗೆ ಇದೆ. ಸಿಬ್ಬಂದಿ ಹಾಗೂ ಅನುದಾನದ ಕೊರತೆಯಿಂದ ನಿರ್ವಹಣೆ ಕಷ್ಟಸಾಧ್ಯವಾಗುತ್ತಿದೆ ಎಂದು ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ. ಅರುಣ್ ಕುಮಾರ್ ಶೆಟ್ಟಿ ಮಾಹಿತಿ ನೀಡಿದರು.
ಖರ್ಚು ವೆಚ್ಚಗಳ ಅಡಿಟ್ ವರದಿಯನ್ನು ಸಮಿತಿಗೆ ಒದಗಿಸುವಂತೆ ಶಾಸಕ ಶರವಣ ಅವರು ಅಧಿಕಾರಿಗಳಿಗೆ ತಿಳಿಸಿದರು. ಗಾಲ್ಫ್ ಕ್ಲಬ್, ಕೆಯುಐಡಿಎಫ್‌ಸಿಯಿಂದ ಎಷ್ಟು ಆದಾಯವನ್ನು ಪಡೆಯಲಾಗುತ್ತಿದೆ ಎಂಬ ಮಾಹಿತಿಯನ್ನು ಒದಗಿಸುವಂತೆ ಶಾಸಕ ಶಿವಕುಮಾರ್ ಹೇಳಿದರು.
ಪಿಲಿಕುಳದ ಒಟ್ಟು 356.20 ಎಕರೆ ಪ್ರದೇಶದಲ್ಲಿದ್ದು, ಕಂದಾಯ ಇಲಾಖೆಗೊಳಪಟ್ಟಿರುವ ಭೂಮಿಯನ್ನು ಲೀಸ್‌ನಡಿ ಪಿಲಿಕುಳ ಅಭಿವೃದ್ದಿ ಪ್ರಾಧಿಕಾರ ಬಳಕೆ ಮಾಡುತ್ತಿದೆ. 2030ಕ್ಕೆ ಲೀಸ್ ಅವಧಿ ಮುಗಿಯಲಿದ್ದು, ಭೂಮಿಯನ್ನು ಕಂದಾಯ ಇಲಾಖೆಯಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಹಸ್ತಾಂತರಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಲಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರವಾಗಬೇಕಿದೆ. ಕಳೆದ ಬಾರಿ ಭೇಟಿ ನೀಡಿದ್ದ ವಿಧಾನಮಂಡಲದ ಅಧೀನ ಶಾಸನ ರಚನಾ ಸಮಿತಿಯೂ ಪಿಲಿಕುಳದ ವೀಕ್ಷಣೆಯ ಬಳಿಕ ಉದ್ಯಾನವನದ ನಿರ್ವಹಣೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದರಲ್ಲದೆ, ಮೃಗಾಲಯವನ್ನು ಕರ್ನಾಟಕ ಮೃಗಾಲಯ ಪ್ರಾಧಿಕಾರಕ್ಕೆ ಹಸ್ತಾಂತರಿಸಲು ಸಲಹೆ ನೀಡಲಾಗಿತ್ತು. ಆ ಪ್ರಕ್ರಿಯೆ ನಡೆಯುತ್ತಿದ್ದು, ಖಾಯಂ ನೆಲೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯ ನೇಮಕವಾಗಿದೆ. ಮೃಗಾಲಯ ಪ್ರಾಧಿಕಾರ ನಿರ್ವಹಣೆಗೆ ಒಪ್ಪಿಕೊಂಡಿದೆ. ಪ್ರಾಧಿಕಾರದಡಿ ಮಂಜೂರಾತಿ ಆಗಿರುವ ಹುದ್ದೆಗಳು ಭರ್ತಿ ಆಗಿಲ್ಲ. 20ರಲ್ಲಿ 7 ಹುದ್ದೆ ಮಾತ್ರ ನೇಮಕಾತಿ ಆಗಿದೆ. ನಿರ್ವಹಣೆಗೆ 174 ಜನ ಸಿಬ್ಬಂದಿ ಅಗತ್ಯವಿದ್ದರೂ ಅಗತ್ಯವಿರುವ ಹುದ್ದೆ ಮಾತ್ರ ಗುರುತಿಸಿ ನೀಡಿ ಎಂಬ ಸರ್ಕಾರದ ಸಲಹೆ ಮೇರೆಗೆ 95 ಜನರ ಪ್ರಸ್ತಾವನೆಗೆ ಮಂಜೂರಾತಿ ಇನ್ನೂ ದೊರಕಿಲ್ಲ. ಮಾನವ ಸಂಪನ್ಮೂಲದ ಕೊರತೆಯಿಂದ ನಿರ್ವಹಣೆಗೆ ತೊಂದರೆಯಾಗಿದೆ ಎಂದು ಡಾ. ಅರುಣ್ ಕುಮಾರ್ ಶೆಟ್ಟಿ ವಿವರ ನೀಡಿದರು.
ತಾರಾಲಯದ ನಿರ್ವಹಣೆ ಆಗುತ್ತಿದೆಯಾದರೂ, ಅಲ್ಲಿನ ಸೌಂಡ್ ವ್ಯವಸ್ಥೆ, ವೀಡಿಯೋ ಪ್ರದರ್ಶನಗಳು ಮೇಲ್ದರ್ಜೆಗೇರಿಸಲ್ಪಟ್ಟಿಲ್ಲ. ಅದನ್ನು ಬದಲಾಯಿಸಬೇಕು ಎಂದು ಶಾಸಕ ಶಿವಕುಮಾರ್ ತಿಳಿಸಿದಾಗ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಪ್ರತಿಕ್ರಿಯಿಸಿ, ಆಧುನಿಕ ತಂತ್ರಜ್ಞಾನಕ್ಕೆ ಪ್ರದರ್ಶನ ಪರದೆಯನ್ನು ಬದಲಾಯಿಸಬೇಕಾದರೆ ಸುಮಾರು 10 ಕೋಟಿ ರೂ.ನಷ್ಟು ಖರ್ಚಾಗಲಿದೆ. ಸರ್ಕಾರದಿಂದ ಇಷ್ಟೊಂದು ಹಣ ವ್ಯಯಿಸುವುದಕ್ಕಿಂತ ಅದಕ್ಕೆ ಖಾಸಗಿ ಹೂಡಿಕೆಯನ್ನು ಮಾಡುವ ನಿಟ್ಟಿನಲ್ಲಿ ಕ್ರಮ ಆಗಬೇಕಾಗಿದೆ ಎಂದರು.
ಜನಾಕರ್ಷಣೆಗೆ ಪ್ರಯತ್ನಿಸಿ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಇಲಾಖೆಗಳ ಮೂಲಕ ಪಿಲಿಕುಳದಲ್ಲಿ ಪ್ರತಿ ತಿಂಗಳು ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಜನಾಕರ್ಷಣೆಯ ಕೇಂದ್ರವಾಗಿಸಬೇಕು ಎಂದು ಸಲಹೆ ನೀಡಿದ ಸಮಿತಿ ಸದಸ್ಯ ಶಿವಕುಮಾರ್, ಹಿಂದೆ ಇಬ್ರಾಹಿಂ ಅವರು ಜಿಲ್ಲಾಧಿಕಾರಿಯಾಗಿದ್ದ ವೇಳೆ ಸಾಕಷ್ಟು ಕಾರ್ಯಕ್ರಮಗಳ ಮೂಲಕ ಪಿಲಿಕುಳ ಪ್ರಚಾರದಲ್ಲಿತ್ತು ಎಂದು ನೆನಪಿಸಿಕೊಂಡರು. ಅಲ್ಲದೆ, ಎಲ್ಲಾ ಇಲಾಖೆಗಳು ಸಮನ್ವಯತೆಯೊಂದಿಗೆ ಪಿಲಿಕುಳದ ಅಭಿವೃದ್ಧಿಗೆ ಮುಂದಾಗದಿದ್ದರೆ ಇದು ಮುಚ್ಚಿಹೋಗಲಿದೆ ಎಂದು ಅವರು ಹೇಳಿದರು.
ಸಮಿತಿ ಸದಸ್ಯರಾದ ಗುರ್ಮೆ ಸುರೇಶ್ ಶೆಟ್ಟಿ, ಡಾ.ಮಂಥರ್ ಗೌಡ, ಶಿವಣ್ಣ ಬಿ., ಸಚಿವಾಲಯದ ಉಪ ಕಾರ್ಯದರ್ಶಿ ಗೋಪಾಲ ರೆಡ್ಡಿ, ಜಿಪಂ ಸಿಇಒ ವಿನಾಯಕ್ ಕರ್ಭಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್, ಪಿಲಿಕುಳ ವಿಜ್ಞಾನ ಕೇಂದ್ರದ ಡಾ. ಶ್ರೀನಿಕೇತನ್ ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.