ಮೈಸೂರು: ಚಾಮುಂಡಿ ಬೆಟ್ಟವನ್ನು ಆಕರ್ಷಣೀಯ ಕ್ಷೇತ್ರವಾಗಿ ರೂಪಿಸಲಾಗುವುದು. ಅದಕ್ಕಾಗಿ ಮಾಸ್ಟರ್ ಪ್ಲಾನ್ ತಯಾರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಚಾಮುಂಡಿಬೆಟ್ಟದಲ್ಲಿ ಆಯೋಜಿಸಿದ್ದ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಪ್ರಥಮ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿ ಕೆಲಸ ಕುರಿತು ಮುಂದಿನ 5 ವರ್ಷದ ಮಾಸ್ಟರ್ ಪ್ಲಾೃನ್ ರೂಪಿಸುವಂತೆ ಸೂಚಿಸಲಾಗಿದೆ. ಈ ಕ್ಷೇತ್ರವನ್ನು ಹೆಚ್ಚು ಆಕರ್ಷಣೀಯವಾಗಿ ಮಾಡುವ ಜತೆಗೆ ಹೆಚ್ಚಿನ ಸವಲತ್ತುಗಳನ್ನು ಒದಗಿಸಲು, ದೇವಿಕೆರೆ, ನಂದಿ ಪ್ರತಿಮೆ, ಬೆಟ್ಟದ ಮೆಟ್ಟಿಲುಗಳ ಅಭಿವೃದ್ಧಿಗೂ ತೀರ್ಮಾನಿಸಲಾಗಿದೆ ಎಂದರು.
ಹಿಂದೆ ಅಪರ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿಯಡಿ ಕಾರ್ಯನಿರ್ವಾಹಕ ಅಧಿಕಾರಿಗಳು ದೇವಸ್ಥಾನದ ಅಭಿವೃದ್ಧಿ ಮತ್ತು ಸೌಲಭ್ಯ ಕಲ್ಪಿಸುವ ಕಾರ್ಯ ಮಾಡುತ್ತಿದ್ದರು. ಇದೀಗ ಚಾಮುಂಡೇಶ್ವರಿ ಪ್ರಾಧಿಕಾರ ರಚಿಸಲಾಗಿದೆ. ಚಾಮುಂಡೇಶ್ವರಿ ದೇಗುಲ ಸೇರಿದಂತೆ 23 ದೇವಾಲಯಗಳ ಅಭಿವೃದ್ಧಿ ಹಾಗೂ ಭಕ್ತರಿಗೆ ಸೌಲಭ್ಯ ಒದಗಿಸಿಕೊಡಬೇಕೆಂಬ ಉದ್ದೇಶದಿಂದ ರಚನೆ ಮಾಡಲಾಗಿದೆ ಎಂದು ತಮ್ಮ ಕ್ರಮವನ್ನು ಸಿಎಂ ಸಮರ್ಥಿಸಿಕೊಂಡರು.
ಚಾಮುಂಡೇಶ್ವರಿ ಕ್ಷೇತ್ರಕ್ಕೆ ಸಾವಿರಾರು ಜನರು ಶುಕ್ರವಾರ, ಶನಿವಾರ, ಭಾನುವಾರದಂದು ಭೇಟಿ ನೀಡುತ್ತಾರೆ. ಶ್ರೀಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. ಈ ಪೈಕಿ ಕೆಲವು ಪೂರ್ಣಗೊಂಡಿಲ್ಲ. ಬಸ್ ನಿಲ್ದಾಣ, ವಾಹನ ನಿಲುಗಡೆ ಮತ್ತು ವ್ಯಾಪಾರ ಮಳಿಗೆಗಳ ನಿರ್ಮಾಣವಾಗಿದೆ.
ಈ ಹಿಂದೆ ಕೈಗೆತ್ತಿಕೊಂಡಿರುವ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಲು ಸೂಚಿಸಲಾಗಿದೆ. 2018ರಲ್ಲಿ ಕುಡಿಯುವ ನೀರಿನ ಕಾಮಗಾರಿ ಮಂಜೂರಾಗಿದ್ದರೂ ಇನ್ನೂ ಪೂರ್ಣವಾಗಿಲ್ಲ. ಕೂಡಲೇ ಪೂರ್ಣಗೊಳಿಸಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನಿರ್ದೇಶಿಸಲಾಗಿದೆ. ಕಸ ವಿಲೇವಾರಿಗೆ ಸಂಬಂಧಿಸಿದ ಸಿವಿಲ್ ಕಾಮಗಾರಿಗಳು ಪೂರ್ಣವಾಗಿವೆ. ಈ ತಿಂಗಳೊಳಗೆ ವಿದ್ಯುದ್ದೀಕರಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕೆಂದು ನಿರ್ದೇಶಿಸಲಾಗಿದೆ ಎಂದು ಸಿಎಂ ತಿಳಿಸಿದರು.
ಬೆಟ್ಟದ ಪ್ರದೇಶವನ್ನು ಪ್ಲಾಸ್ಟಿಕ್‌ಮುಕ್ತ ಮಾಡಲು ತೀರ್ಮಾನಿಸಲಾಗಿದೆ. ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಚಾಮುಂಡಿ ದೇವಸ್ಥಾನ ಮಾತ್ರವಲ್ಲದೇ ಎಲ್ಲ ದೇವಸ್ಥಾನಗಳಲ್ಲೂ ಸ್ವಚ್ಛತೆ ಕಾಪಾಡಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ಅರಮನೆಯ ಪ್ರಸನ್ನ ಕೃಷ್ಣಸ್ವಾಮಿ ದೇವಾಲಯ, ಗಾಯತ್ರಿ ಅಮ್ಮನವರ ದೇವಾಲಯ, ಭುವನೇಶ್ವರಿ ಅಮ್ಮನವರ ದೇವಾಲಯ, ಕೋಟೆ ಆಂಜನೇಯಸ್ವಾಮಿ ದೇವಾಲಯ, ವರಾಹಸ್ವಾಮಿ ದೇವಾಲಯ ಸೇರಿದಂತೆ 5 ದೇಗುಲಗಳನ್ನು ಜೀರ್ಣೋದ್ಧಾರ ಮಾಡಲಾಗುವುದು. ಪ್ರಾಧಿಕಾರದ ಅಧೀನದಲ್ಲಿ ಕರ್ತವ್ಯ ನಿರ್ವಹಿಸುವ ಕಾಯಂ ಸಿಬ್ಬಂದಿಗೆ ವೈದ್ಯಕೀಯ, ಅವರ ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯ ಒದಗಿಸಲು ತೀರ್ಮಾನಿಸಲಾಗಿದೆ ಎಂದು ವಿವರಿಸಿದರು.
ಬೆಟ್ಟದ ದಾಸೋಹ ಭವನದ ವ್ಯವಸ್ಥೆ ಸುಧಾರಿಸಿ, ಭಕ್ತರಿಗೆ ಶುಚಿ- ರುಚಿಯಾದ ಊಟದ ವ್ಯವಸ್ಥೆ ಕಲ್ಪಿಸಲಾಗುವುದು. ಶ್ರೀಚಾಮುಂಡೇಶ್ವರಿ ಕ್ಷೇತ್ರದ ಪ್ರಾಧಿಕಾರದ 169 ಕೋಟಿ ರೂ. ನಿಶ್ಚಿತ ಠೇವಣಿ(ಎಫ್‌ಡಿ) ಇದೆ. ಇದರ ಆದಾಯದಲ್ಲಿ ಈ ಎಲ್ಲ ವೆಚ್ಚಗಳನ್ನೂ ಭರಿಸಬಹುದಾಗಿದೆ ಎಂದು ಸಿಎಂ ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್, ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್, ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಶಾಸಕರಾದ ಜಿ.ಟಿ.ದೇವೇಗೌಡ, ಡಿ.ರವಿಶಂಕರ್, ಕೆ.ಹರೀಶ್‌ಗೌಡ, ಎಂಎಲ್‌ಸಿಗಳಾದ ಡಾ.ಯತೀಂದ್ರ ಸಿದ್ದರಾಮಯ್ಯ, ಡಾ.ಡಿ.ತಿಮ್ಮಯ್ಯ, ವಿವೇಕಾನಂದ, ಸಿ.ಎನ್.ಮಂಜೇಗೌಡ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಟಾರಿಯಾ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ, ಜಿಪಂ ಸಿಇಒ ಕೆ.ಎಂ.ಗಾಯತ್ರಿ, ಪ್ರಾಧಿಕಾರದ ಕಾರ್ಯದರ್ಶಿ ಜೆ.ಎಂ.ರೂಪಾ, ಐಜಿಪಿ ಡಾ. ಎಂ.ಬಿ.ಬೋರಲಿಂಗಯ್ಯ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಎಸ್‌ಪಿ ವಿಷ್ಣುವರ್ಧನ್ ಇತರರು ಇದ್ದರು.
ಪ್ರಾಧಿಕಾರದಲ್ಲಿ ದುಡ್ಡಿನ ಕೊರತೆಯೇ ಇಲ್ಲ. ಸದ್ಯಕ್ಕೆ 169.22 ಕೋಟಿ ರೂ. ನಿಧಿ ಲಭ್ಯ ಇದೆ. ದೇವಾಲಯದ ಉಳಿತಾಯ ಖಾತೆಯಲ್ಲಿ 20.24 ಕೋಟಿ ರೂ. ಇದೆ. 2023-24ರಲ್ಲಿ 49.64 ಕೋಟಿ ರೂ. ಆದಾಯ ಬಂದಿತ್ತು. ಇದರಲ್ಲಿ 21 ಕೋಟಿ ರೂ. ಖರ್ಚು ಮಾಡಿ ಬಳಿಕವೂ 28.18 ಕೋಟಿ ರೂ. ಆದಾಯ ಉಳಿದಿದೆ. 2024-25ನೇ ಸಾಲಿನ ಜುಲೈ ಅಂತ್ಯಕ್ಕೆ 17.4 ಕೋಟಿ ರೂ. ಆದಾಯ ಬಂದಿದೆ. 6.97 ಕೋಟಿ ರೂ. ವೆಚ್ಚವಾಗಿದೆ. ಪ್ರತಿ ವರ್ಷ ಸನ್ನಿಧಿಗೆ ಆದಾಯ ಹೆಚ್ಚಾಗುತ್ತಿದೆ. ಭೇಟಿ ನೀಡುವ ಭಕ್ತರ ಸಂಖ್ಯೆಯೂ ವೃದ್ಧಿಯಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಚಾಮುಂಡಿಬೆಟ್ಟದಲ್ಲಿ ರೋಪ್‌ವೇ ನಿರ್ಮಾಣದ ಕುರಿತು ಇಂದಿನ ಸಭೆಯಲ್ಲಿ ಚರ್ಚೆಯಾಗಿಲ್ಲ. ಇದು ಹಳೆಯದು. ಹಿಂದೆಯೇ ಇದಕ್ಕೆ ಮಂಜೂರಾತಿ ಸಿಕ್ಕಿದೆ. ಆದರೆ, ಪರಿಸರವಾದಿಗಳು ವಿರೋಧಿಸಿದ್ದರಿಂದ ಇದು ಸ್ಥಗಿತಗೊಂಡಿದೆ ಎಂದು ಹೇಳಿದರು.
ವಸ್ತ್ರ ಸಂಹಿತೆ ಇಲ್ಲ: ಚಾಮುಂಡೇಶ್ವರಿ ದೇಗುಲಕ್ಕೆ ಭೇಟಿ ನೀಡುವ ಭಕ್ತರಿಗೆ ಯಾವುದೇ ವಸ್ತ್ರ ಸಂಹಿತೆಯನ್ನು ಜಾರಿ ಮಾಡಿಲ್ಲ. ಎಲ್ಲ ಧರ್ಮ, ಜಾತಿಯವರೂ ದೇವಸ್ಥಾನಕ್ಕೆ ಬರಬಹುದು. ಈ ವಿಷಯದಲ್ಲಿ ಯಾವುದೇ ತಾರತಮ್ಯ ಇಲ್ಲ ಎಂದು ಪ್ರಶ್ನೆವೊಂದಕ್ಕೆ ಸಿಎಂ ಉತ್ತರಿಸಿದರು.
ಕೇಂದ್ರ ಸರ್ಕಾರದ ‘ಪ್ರಸಾದ್’ ಯೋಜನೆಯನ್ನು ಪ್ರವಾಸೋದ್ಯಮ ಇಲಾಖೆಯಿಂದ ಜಾರಿಗೊಳಿಸಲು ಅನುಮೋದನೆ ನೀಡಲಾಗಿದೆ. ಈ ಯೋಜನೆಗೆ ಹೆಚ್ಚುವರಿಯಾಗಿ ಬೇಕಾಗುವ 11 ಕೋಟಿ ರೂ.ಗಳನ್ನು ಚಾಮುಂಡೇಶ್ವರಿ ಪ್ರಾಧಿಕಾರದಿಂದ ಭರಿಸಲಾಗುವುದು ಎಂದು ಸಿಎಂ ವಿವರಿಸಿದರು.
ಬೆಟ್ಟದ ಪ್ರದೇಶದಲ್ಲಿ ಅಪರಾಧ ತಡೆಗೆ ಕಾರ್ಯಪಡೆ ರಚನೆ ಮಾಡಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.
ಅಗತ್ಯವಿರುವೆಡೆ ಸಿಸಿ ಕ್ಯಾಮರಾ ಅಳವಡಿಕೆಗೆ ತೀರ್ಮಾನಿಸಲಾಗಿದೆ. ಯೂನಿಯನ್ ಬ್ಯಾಂಕ್‌ನವರು ಸಿಎಸ್‌ಆರ್ ನಿಧಿಯಿಂದ ಸಿಸಿ ಕ್ಯಾಮರಾ ಅಳವಡಿಕೆಗೆ ಸಹಕಾರ ನೀಡಲಿದ್ದಾರೆ. ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಈ ನಿಟ್ಟಿನಲ್ಲಿ ವಿದ್ಯುತ್ ದೀಪದ ವ್ಯವಸ್ಥೆಯನ್ನೂ ಮಾಡಲಾಗುವುದು ಎಂದರು.
ಬೆಟ್ಟದ ಮೇಲೆ ಧೂಮಪಾನ, ಮದ್ಯಪಾನ, ಗುಟ್ಖಾ ಸಂಪೂರ್ಣ ನಿಷೇಧಿಸಲಾಗಿದೆ. ದೇವಾಲಯದ ಒಳಗೆ ಛಾಯಾಗ್ರಹಣಕ್ಕೂ ನಿರ್ಬಂಧ ಹೇರಲಾಗಿದೆ. ಮೊಬೈಲ್ ಬಳಕೆಗೂ ಅವಕಾಶ ಇಲ್ಲ ಎಂದು ತಿಳಿಸಿದರು.
ದೇವಸ್ಥಾನದ ಆಸ್ತಿ ಒತ್ತುವರಿಯಾಗಿದೆ. ಆದ್ದರಿಂದ ಸರ್ವೇ ನಡೆಸಿ ಪ್ರಾಧಿಕಾರದ ಮುಂದಿನ ಸಭೆಯಲ್ಲಿ ಮಂಡಿಸಲು ಸೂಚಿಸಲಾಗಿದೆ. ಬೆಟ್ಟದ ಮೇಲಿರುವ ಅನಗತ್ಯ, ಅಕ್ರಮ ಕಟ್ಟಡಗಳ ನಿರ್ಮಾಣವನ್ನೂ ತಡೆಯಲಾಗುವುದು ಎಂದು ಪ್ರಶ್ನೆವೊಂದಕ್ಕೆ ಸಿಎಂ ಉತ್ತರಿಸಿದರು.