ಜಿಲ್ಲೆ

ನಾಲೆಗಳ ಸ್ವಚ್ಛತೆಗೆ ಮಾಸ್ಟರ್ ಪ್ಲಾನ್

Davangere - Desk - Mahesh Babu E

ಹಿರಿಯೂರು: ನಗರದ ಹೃದಯ ಭಾಗದಲ್ಲಿ ಹಾದು ಹೋಗಿರುವ ವೇದಾವತಿ ನದಿ ಶುದ್ಧೀಕರಣ, ವಿವಿ ಸಾಗರ ಎಡ-ಬಲ ದಂಡೆ ನಾಲೆಗಳ ಸ್ವಚ್ಛತೆ, ಜಲ ಮೂಲಗಳ ಸುರಕ್ಷತೆಗೆ ಮಾಸ್ಟರ್ ಪ್ಲಾನ್ ರೂಪಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹೇಳಿದರು.

ನಗರದ ಗಣಪತಿ ದೇವಸ್ಥಾನದ ಬಳಿ ವಿವಿ ಸಾಗರ ಬಲ ದಂಡೆ ನಾಲೆ ಸ್ವಚ್ಛತೆ ಕಾರ್ಯಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.

ನದಿ ಪಾತ್ರದಲ್ಲಿ ತಡೆ ಗೋಡೆ ನಿರ್ಮಾಣ, ತ್ಯಾಜ್ಯ ನಿರ್ವಹಣೆ, ನದಿ ಪಾತ್ರ ಅಭಿವೃದ್ಧಿ, ಜೀವ ವೈವಿದ್ಯ ರಕ್ಷಣೆ ಮೂಲಕ ನದಿ ಶುದ್ಧೀಕರಣ ಮಾಡಲಾಗುವುದು ಎಂದರು.

ವಿವಿ ಸಾಗರ ಎಡ-ಬಲ ದಂಡೆ ನಾಲೆಗಳಲ್ಲಿ ಕಲುಷಿತ ನೀರು ನಿಲ್ಲುವುದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ, ನದಿ, ನಾಲೆಗೆ ತ್ಯಾಜ್ಯ ಎಸೆಯದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ವೇದಾವತಿ ನದಿ ಶುದ್ಧೀರಣಕ್ಕೆ ವಿಶೇಷ ಯೋಜನೆ ರೂಪಿಸುವಂತೆ ಸಂಬಂಧಿಸಿದ ಇಲಾಖೆಗೆ ಸೂಚಿಸಲಾಗಿದೆ. ನಗರ ವ್ಯಾಪ್ತಿಯಲ್ಲಿ ಪ್ರತಿ ಮನೆಗೆ ಶುದ್ಧ ನೀರು ಪೂರೈಕೆ, ಸ್ವಚ್ಛ, ಸುಂದರ ಪರಿಸರ ನಿರ್ಮಾಣ, ಸುಸಜ್ಜಿತ ಯುಜಿಡಿ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಹಿರಿಯೂರು ಪ್ರಗತಿ ಪಥದಲ್ಲಿ ವೇಗವಾಗಿ ಬೆಳೆಯುತ್ತಿದ್ದು, ನಗರದ 31 ವಾರ್ಡ್‌ಗಳಿಗೆ ಅಗತ್ಯ ಮೂಲ ಸೌಕರ್ಯ, ಶುದ್ಧ ಕುಡಿವ ನೀರು, ಯುಜಿಡಿ, ಸುಸಜ್ಜಿತ ರಸ್ತೆ ನಿರ್ಮಾಣಕ್ಕೆ ವಿಶೇಷ ಅನುದಾನ ನೀಡಲಾಗುವುದು, ವೇದಾವತಿ ನದಿ, ವಿವಿ ಸಾಗರ ಎಡ-ಬಲ ದಂಡೆ ನಾಲೆಗಳ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ ಎಂದು ಹೇಳಿದರು.