ನರಗುಂದ: ನಾಪತ್ತೆಯಾಗಿದ್ದ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ. ಶಂಕಿತ ಕೊಲೆಗೆ ಕಾರಣನಾದವನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ದಲಿತ ಹಾಗೂ ಮುಸ್ಲಿಂ ಸಂಘಟನೆ ಸದಸ್ಯರು ಪಟ್ಟಣದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.
ದಲಿತ ಸಂಘಟನೆ ಸದಸ್ಯರು ಶಿವಾಜಿ ವೃತ್ತದಲ್ಲಿ ಕೆಲಕಾಲ ರಸ್ತೆತಡೆ ನಡೆಸಿ ತಹಸೀಲ್ದಾರ್ಗೆ ಮನವಿ ಸಲ್ಲಿಸಿದರು. ಮುಸ್ಲಿಂ ಸಂಘಟನೆ ಸದಸ್ಯರು ಪಟ್ಟಣದ ನಗೀನಾ ಮಸೀದಿಯಿಂದ ಮಿನಿ ವಿಧಾನಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಯುವತಿ ಸಾವಿಗೆ ಕಾರಣರಾದವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು. ನಂತರ ಶಿರಸ್ತೇದಾರ್ ಪಿ. ಸುನಂದಾ ಅವರ ಮೂಲಕ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು. ಬಾಬು ಅತ್ತಾರ, ವಿಜಯಕುಮಾರ ಚಲವಾದಿ, ಸಂಜು ದೊಡಮನಿ, ನಜೀರ ಅತ್ತಾರ, ಖಲಂದರ ಮಾಲ್ದಾರ, ರಿಯಾಜ್ ಜಮಖಾನ, ಮಹೇಶ ಚಲವಾದಿ, ಕಾಶೀಂ ಖಲೀಫ್ ಇತರರಿದ್ದರು.
ದುಷ್ಕರ್ವಿುಗಳ ಬಂಧನಕ್ಕೆ ಒತ್ತಾಯ: ಗದಗ: ನರಗುಂದದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಮಾಡಿ ಕೊಲೆ ಮಾಡಿರುವ ದುಷ್ಕರ್ವಿುಗಳನ್ನು ಬಂಧಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರವಾದ) ಜಿಲ್ಲಾ ಘಟಕ ಪದಾಧಿಕಾರಿಗಳು ನಗರದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಶ್ರೀನಿವಾಸಮೂರ್ತಿಗೆ ಮಂಗಳವಾರ ಮನವಿ ಸಲ್ಲಿಸಿದರು. ಸಂಘಟನೆ ಪ್ರಧಾನ ಸಂಚಾಲಕ ಬಾಲರಾಜ ಅರಬರ, ಜೈ ಭೀಮ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಗಣೇಶ ಹುಬ್ಬಳ್ಳಿ, ಮುತ್ತಪ್ಪ ಭಜಂತ್ರಿ, ಕೆಂಚಪ್ಪ ಮ್ಯಾಗೇರಿ, ಶ್ರುತಿ ಹಿರೇಮಠ, ನಾಗರಾಜ ಗೋಕಾವಿ ಇತರರಿದ್ದರು.
ಪಾಲಕರಿಂದ ದೂರು: ನರಗುಂದ ಪಟ್ಟಣದ ದಂಡಾಪುರ ಹಗೇದಕಟ್ಟಿ ಬಡಾವಣೆಯ ಬಾಬು ಹುಲಸೇರ ಅವರ ಪುತ್ರಿ ಮಾ. 20ರಂದು ಹೊಲಕ್ಕೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ಕಾಣೆಯಾಗಿದ್ದಳು. ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಮಾ. 23ರಂದು ಬಾಲಕಿ ತಂದೆ ದೂರು ನೀಡಿದ್ದರು. ಮಾ. 27ರಂದು ಬಾಲಕಿ ರಾಮದುರ್ಗ ತಾಲೂಕಿನ ಕಿತ್ತೂರ ಗ್ರಾಮದಲ್ಲಿ ಶವವಾಗಿ ಪತ್ತೆಯಾಗಿದ್ದಳು.
ಕುಟುಂಬ ಸದಸ್ಯರಿಗೆ ಸಚಿವರ ಸಾಂತ್ವನ: ಬಾಲಕಿ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಮಂಗಳವಾರ ಭೇಟಿ ನೀಡಿ ಪಾಲಕರಿಗೆ ಸಾಂತ್ವನ ಹೇಳಿದರು. ಈ ವೇಳೆ ಬಾಲಕಿಯ ಪಾಲಕರು, ‘ನರಗುಂದದ ಸದ್ದಾಂ ಬೆಟಗೇರಿ (22) ಎಂಬಾತನೇ ನಮ್ಮ ಮಗಳನ್ನು ಕೊಲೆ ಮಾಡಿದ್ದಾನೆ. ಕೈ ಕತ್ತರಿಸಿ, ಅತ್ಯಾಚಾರವೆಸಗಿದ್ದಾನೆ’ ಎಂದು ಆರೋಪಿಸಿದರು. ಬಾಲಕಿ ಈ ಹಿಂದೆ ಹುಬ್ಬಳ್ಳಿ ತಾಲೂಕಿನ ಅಂಚಟಗೇರಿ ಗ್ರಾಮದ ನಮ್ಮ ಸಂಬಂಧಿಕರ ಮನೆಯಲ್ಲಿದ್ದಳು. ಆಗ ಇಟ್ಟಂಗಿ ಬಟ್ಟಿಯಲ್ಲಿ ಕೆಲಸಕ್ಕೆ ಬರುತ್ತಿದ್ದ ಆರೋಪಿ ಸದ್ದಾಂನ ಪರಿಚಯವಾಗಿದೆ. ಕಳೆದ ವರ್ಷ ಲಾಕ್ಡೌನ್ ಸಂದರ್ಭದಲ್ಲಿ ಸದ್ದಾಂ ನರಗುಂದದ ಸಂಬಂಧಿಕರ ಮನೆಗೆ ಬಂದಾಗ ಯುವತಿಯೊಂದಿಗೆ ಸ್ನೇಹ ಬೆಳೆದಿದೆ. ಆಗ ಇಬ್ಬರಿಗೂ ಬುದ್ಧಿವಾದ ಹೇಳಲಾಗಿತ್ತು. ಆದರೂ ಸುಧಾರಿಸಿಕೊಳ್ಳದ ಸದ್ದಾಂ ಮಾ. 20ರಂದು ಬಾಲಕಿಯನ್ನು ರಾಮದುರ್ಗ ತಾಲೂಕಿನ ಕಿತ್ತೂರ ಗ್ರಾಮದ ಜಮೀನೊಂದಕ್ಕೆ ಕರೆದುಕೊಂಡು ಹೋಗಿ ಬರ್ಬರವಾಗಿ ಕೊಲೆ ಮಾಡಿದ್ದಾನೆ’ ಎಂದು ಪಾಲಕರು ಆರೋಪಿಸಿದ್ದಾರೆ. ಈ ಕುರಿತು ರಾಮದುರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ತನಿಖೆ ಮುಂದುವರಿಸಿದ್ದಾರೆ ಎಂದು ಪಾಲಕರು ಹೇಳಿದರು. ಸಚಿವ ಸಿ.ಸಿ. ಪಾಟೀಲ ಮಾತನಾಡಿ, ಬಾಲಕಿ ಕೊಲೆಯನ್ನು ಖಂಡಿಸುತ್ತೇನೆ. ಪೊಲೀಸರ ತನಿಖೆ ನಡೆಸಿದ್ದಾರೆ. ಮೇಲ್ನೋಟಕ್ಕೆ ವ್ಯವಸ್ಥಿತವಾಗಿ ಸಂಚು ರೂಪಿಸಿ ಕೊಲೆ ಮಾಡಿರುವುದು ಗೊತ್ತಾಗಿದೆ. ಈ ಕುರಿತು ಬೆಳಗಾವಿ ಎಸ್ಪಿ ಜತೆಗೆ ಮಾತನಾಡಿದ್ದೇನೆ. ಇಂಥ ಘಟನೆ ಮರುಕಳಿಸದಂತೆ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದರು.
ಮೃತಳ ಮನೆಗೆ ಅಧಿಕಾರಿಗಳ ಭೇಟಿ: ಬಾಲಕಿ ಸಾವಿನ ಸುದ್ದಿ ತಿಳಿದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಮೃತ ಬಾಲಕಿ ಮನೆಗೆ ಮಂಗಳವಾರ ಭೇಟಿ ನೀಡಿ ಪಾಲಕರಿಗೆ ಸಾಂತ್ವನ ಹೇಳಿದರು. ಮೇಲ್ವಿಚಾರಕಿ ಜಯಶ್ರೀ ಅಂಗಡಿ, ಶಕುಂತಲಾ ಗಣಿ, ಅಂಗನವಾಡಿ ನೌಕರರ ಸಂಘದ ತಾಲೂಕಾಧ್ಯಕ್ಷೆ ಗಿರಿಜಾ ಮಾಚಕನೂರ, ಲಕ್ಷ್ಮೀ ಗಾಯಕವಾಡ, ಸುಮಿತ್ರಾ ಹಕಾರಿ, ನೀಲಗಂಗಾ ಮಾದರ, ಬಸಮ್ಮ ಗುಡಿಕಾರ, ಕಮಲಾಕ್ಷಿ ಹಿರೇಮಠ, ಗಿರಿಜಾ ಬೆಳವಟಗಿ ಇತರರಿದ್ದರು.