ವಿಜಯವಾಣಿ ಸುದ್ದಿಜಾಲ ಅಮಾಸೆಬೈಲು
ಕಸ್ತೂರಿರಂಗನ್ ಹಾಗೂ ಮಾಧವ ಗಾಡ್ಗೀಳ್ ವರದಿ ಅವೈಜ್ಞಾನಿಕವಾಗಿದೆ. ಇದು ಜಾರಿಯಾದಲ್ಲಿ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಗಳಲ್ಲಿ ಹಲವಾರು ವರ್ಷಗಳಿಂದ ಶ್ರಮಪಟ್ಟು ದುಡಿದು ಕೃಷಿ, ಮನೆಯೊಂದಿಗೆ ಬದುಕು ಕಟ್ಟಿಕೊಂಡಿರುವವರ ನಿತ್ಯ ಜೀವನಕ್ಕೆ ಮಾರಕವಾಗಲಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅಮಾಸೆಬೈಲು ಹಾಗೂ ಮಚ್ಚಟ್ಟು ಗ್ರಾಮಸ್ಥರ ಹಿತರಕ್ಷಣಾ ಸಮಿತಿ ವತಿಯಿಂದ ಅಮಾಸೆಬೈಲ್‌ನಲ್ಲಿ ಗುರುವಾರ ಅವೈಜ್ಞಾನಿಕ ಕಸ್ತೂರಿರಂಗನ್ ವರದಿ ವಿರೋಧಿಸಿ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ಜನ ವಸತಿ ಹಾಗೂ ಅರಣ್ಯ ಪ್ರದೇಶಗಳನ್ನು ಪ್ರತ್ಯೇಕವಾಗಿ ವಿಂಗಡಿಸಬೇಕು, ಕೇರಳ ಕಸ್ತೂರಿರಂಗನ್ ವರದಿ ಜಾರಿ ತಡೆಯುವಲ್ಲಿ ಯಶಸ್ಸು ಕಂಡಿದೆ. ಭೂಮಿ ಸರ್ವೆ ಬದಲು ಅವೈಜ್ಞಾನಿಕವಾಗಿ ಸೆಟಲೈಟ್ ಸರ್ವೆ ಮಾಡಿರುವುದರಿಂದ ಹಲವು ಸಮಸ್ಯೆಗಳಿಗೆ ಕಾರಣವಾಗಿದೆ ಎಂದರು.
ಕುಂದಾಪುರ ಕ್ಷೇತ್ರ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಕುಂದಾಪುರ ಕ್ಷೇತ್ರ ಶಾಸಕ ಎ.ಕಿರಣ್‌ಕುಮಾರ್ ಕೊಡ್ಗಿ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಮಾಜಿ ಶಾಸಕ ಗೋಪಾಲ ಪೂಜಾರಿ, ಉಡುಪಿ ಜಿಲ್ಲಾ ಭಾರತೀಯ ಕೀಸಾನ್ ಸಂಘದ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಜಪ್ತಿ, ಅಮಾಸೆಬೈಲು ಗ್ರಾಪಂ ಅಧ್ಯಕ್ಷೆ ಮಲ್ಲಿಕಾ ಕುಲಾಲ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಆರ್.ನವೀನ್‌ಚಂದ್ರ ಶೆಟ್ಟಿ ರಟ್ಟಾಡಿ ಸ್ವಾಗತಿಸಿ, ಉಡುಪಿ ಜಿಲ್ಲಾ ಭಾರತೀಯ ಕೀಸಾನ್ ಸಂಘದ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಜಪ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಗಣೇಶ್ ಅರಸಮ್ಮಕಾನು ಕಾರ್ಯಕ್ರಮ ನಿರೂಪಿಸಿದರು. ಚಂದ್ರ ಶೆಟ್ಟಿ ಕೆಲಾ ವಂದಿಸಿದರು.
ಅಮಾಸೆಬೈಲು ಹಾಗೂ ಮಚ್ಚಟ್ಟು ಗ್ರಾಮಸ್ಥರ ಹಿತರಕ್ಷಣಾ ಸಮಿತಿ ವತಿಯಿಂದ ವರದಿ ವಿರೋಧಿಸಿ ಬೃಹತ್ ಪ್ರತಿಭಟನಾ ಸಭೆ ಅಮಾಸೆಬೈಲು ಶ್ರೀಮಹಾಬೈರವಿ ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗದ ವಠಾರದಲ್ಲಿ ಗುರುವಾರ ಬೆಳಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿತು. ಭಾರಿ ಮಳೆ ನಡುವೆಯೂ ಸೇರಿದ ಗ್ರಾಮಸ್ಥರು ಮಳೆ ಲೆಕ್ಕಿಸದೇ ಪ್ರತಿಭಟನಾ ಸಭೆಯಲ್ಲಿದ್ದು, ಕಸ್ತೂರಿರಂಗನ್ ವರದಿ ವಿರೋಧಿಸಿ ಘೋಷಣೆ ಹಾಕಿದರು.
ಕಸ್ತೂರಿರಂಗನ್ ವರದಿ ಅವೈಜ್ಞಾನಿಕ. ವರದಿ ವಿರೋಧಿಸಿ ಹಲವು ಭಾಗಗಳಲ್ಲಿ ಈಗಾಗಲೇ ಜನರು ಪ್ರತಿಭಟಿಸಿದ್ದಾರೆ. ಇದು ಜಾರಿಯಾದಲ್ಲಿ ಜನತೆಗೆ ಆಗಬಹುದಾದ ಸಾಧಕ ಬಾಧಕಗಳ ಕುರಿತು ಅರಣ್ಯ ಸಚಿವರು ಹಾಗೂ ಸರ್ಕಾರದ ಗಮನಕ್ಕೆ ತರಲಾಗಿದೆ. ಕಸ್ತೂರಿರಂಗನ್ ವರದಿ ಜಾರಿ ತಡೆಯಲು ಒಗ್ಗಟ್ಟಿನ ಹೋರಾಟದ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ಪಡೆಯ ಬೇಕಾಗಿದೆ.-ಗೋಪಾಲ ಪೂಜಾರಿ, ಮಾಜಿ ಶಾಸಕರು ಬೈಂದೂರು