ವಿಜಯವಾಣಿ ಸುದ್ದಿಜಾಲ ಸಿದ್ದಾಪುರ
ಪರಿಸರ ಸಂರಕ್ಷಣೆ ಉದ್ದೇಶದಿಂದ ಸುಪ್ರೀಂ ನಿರ್ದೇಶನದಂತೆ ಕಸ್ತೂರಿ ರಂಗನ್ ವರದಿ ಜಾರಿ ಸೂಚನೆ ಬಂದಿದ್ದು, ವರದಿಯಲ್ಲಿ ಜನ ವಸತಿ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ವಲಯ ಎಂದು ಸೇರಿಸಿರುವುದು ದುರಂತ. ಉಡುಪಿ ಜಿಲ್ಲೆ 35 ಗ್ರಾಮಗಳ ಗ್ರಾಮಸ್ಥರು ಹೋರಾಡದಿದ್ದರೆ ಕಾಡಂಚಿನಲ್ಲಿ ವಾಸಿಸುತ್ತಿರುವವರ ಬದುಕು ಶೋಚನೀಯವಾಗಲಿದೆ ಎಂದು ಹೋರಾಟಗಾರ ಫಾ.ಡಾ.ಸಲೀನ್ ಜೋಸೆಫ್ ಬೆಳ್ತಂಗಡಿ ಹೇಳಿದರು.
ಹಳ್ಳಿಹೊಳೆ ಗ್ರಾಮಸ್ಥರ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಕಸ್ತೂರಿ ರಂಗನ್ ವರದಿಯಿಂದ ಜನವಸತಿ ಪ್ರದೇಶ ಕೈಬಿಡುವಂತೆ ಆಗ್ರಹಿಸಿ ಸುಳಗೋಡು ಸುನಂದಾ ಗೇರು ಬೀಜ ಕಾರ್ಖಾನೆ ಚಕ್ರ ಮೈದಾನದಲ್ಲಿ ಬುಧವಾರ ಬೃಹತ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ಹಳ್ಳಿಹೊಳೆ ಗ್ರಾಮಸ್ಥರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಮಂಜುನಾಥ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ, ಬೈಂದೂರು ಮಾಜಿ ಶಾಸಕ ಗೋಪಾಲ ಪೂಜಾರಿ, ಮುದ್ದೂರು ಹಿತರಕ್ಷಣಾ ಸಮಿತಿ ಅಧ್ಯಕ್ಷ ಲಕ್ಷ್ಮಣ ಶೆಟ್ಟಿ, ವಂಡ್ಸೆ ಹಿತರಕ್ಷಣಾ ಸಮಿತಿ ಅಧ್ಯಕ್ಷ ಡಾ.ಅತುಲ್ ಕುಮಾರ್ ಶೆಟ್ಟಿ, ಹಳ್ಳಿಹೊಳೆ ಗ್ರಾಮಸ್ಥರ ಹಿತರಕ್ಷಣಾ ಸಮಿತಿ ಸದಸ್ಯರಾದ ಪ್ರಭಾಕರ ನಾಯ್ಕ, ಗುಲಾಬಿ, ನೇತ್ರಾವತಿ, ಗಿರಿಜಾ, ದಿನೇಶ್ ನಾಯ್ಕ ಪಾಲ್ಗೊಂಡಿದ್ದರು. ಸಮಿತಿ ಗೌರವಾಧ್ಯಕ್ಷ ಎಸ್.ಕೃಷ್ಣ ಚಾತ್ರ ಸ್ವಾಗತಿಸಿದರು. ಜಡ್ಕಲ್ ಹಿತರಕ್ಷಣಾ ಸಮಿತಿ ಅಧ್ಯಕ್ಷ ದೇವದಾಸ್ ವಿ.ಜೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಹಳ್ಳಿಹೊಳೆ ಗ್ರಾಮಸ್ಥರ ಹಿತರಕ್ಷಣಾ ಸಮಿತಿ ಸದಸ್ಯ ಪ್ರದೀಪ್ ಕೊಠಾರಿ ನಿರೂಪಿಸಿದರು.
ಜನರ ಉಳಿವಿಗಾಗಿ ಹೋರಾಡಲು ಸಿದ್ಧ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೇಗೆ ಹೋರಾಡಬೇಕು ಅನ್ನುವ ಬಗ್ಗೆ ಆದಷ್ಟು ಬೇಗ ಸಂಘಟಿತರಾಗಬೇಕಿದೆ. ಅರಣ್ಯ, ಪರಿಸರ ಸಂರಕ್ಷಣೆಗೆ ನಮ್ಮ ಬೆಂಬಲವಿದೆ. ಕೇರಳದಲ್ಲಿ ಮನುಷ್ಯರೇ(ಫಿಸಿಕಲ್) ಸರ್ವೇ ನಡೆಸಿದ್ದಾರೆ. ಆದರೆ ಇಲ್ಲಿ ಸ್ಯಾಟಲೈಟ್ ಸರ್ವೇಯಿಂದ ಜನ ವಸತಿ ಪ್ರದೇಶ ಸೇರಿಕೊಂಡಿವೆ. ಇಲ್ಲಿಯೂ ಫಿಸಿಕಲ್ ಸರ್ವೇ ಆಗಲಿ.ಗುರುರಾಜ್ ಶೆಟ್ಟಿ ಗಂಟಿಹೊಳೆ ಶಾಸಕ