ಜಿಲ್ಲೆ

ಕಾರ್ವಿುಕರಿಂದ ಬೃಹತ್ ಪ್ರತಿಭಟನಾ ಮೆರವಣಿಗೆ

ಉತ್ತರ ಕನ್ನಡ ಡೆಸ್ಕ್

ನವಲಗುಂದ: ಇಲ್ಲಿನ ಶ್ರೀ ಜಗದ್ಗುರು ಅಜಾತ ನಾಗಲಿಂಗೇಶ್ವರ ಕಟ್ಟಡ ಮತ್ತು ಇತರೆ ಅಸಂಘಟಿತ ಕಾರ್ವಿುಕರ ಸಂಘದಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪಟ್ಟಣದಲ್ಲಿ ಬುಧವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಕಾರ್ವಿುಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ದುರಗಪ್ಪ ಚಿಕ್ಕತುಂಬಳ ಮಾತನಾಡಿ, ನಕಲಿ ಕಾರ್ವಿುಕರ ಹಾವಳಿ ತಡೆಗಟ್ಟುವ ನೆಪದಲ್ಲಿ ನಿಜವಾದ ಕಾರ್ವಿುಕರಿಗೆ ತೊಂದರೆಯಾಗುತ್ತಿದೆ. ನಿಜವಾದ ಕಾರ್ವಿುಕರು ಎಂಬುದನ್ನು ಪತ್ತೆ ಹಚ್ಚಲು ಅಧಿಕಾರಿಗಳು ಕಾರ್ವಿುಕರಿದ್ದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡ ಮೇಲೆ ಕಾರ್ವಿುಕರಿಗೆ ಕಾರ್ಡ್ ವಿತರಿಸಬೇಕು. ಅದನ್ನು ಬಿಟ್ಟು ಕಚೇರಿಯಲ್ಲಿ ಕುಳಿತುಕೊಂಡು ಕಾರ್ಡ್ ರದ್ದು ಮಾಡುತ್ತಿದ್ದಾರೆ. ನಮ್ಮ ಜಿಲ್ಲೆಯವರೇ ಕಾರ್ವಿುಕ ಸಚಿವರಿದ್ದರೂ ನಮ್ಮ ಸಮಸ್ಯೆಗಳನ್ನು ಆಲಿಸುತ್ತಿಲ್ಲ. ಇನ್ನೊಂದು ವಾರದಲ್ಲಿ ಸಮಸ್ಯೆ ಬಗೆಹರಿಸದೆ ಹೋದರೆ ವಿಧಾನಸೌಧ ಚಲೋ ಚಳವಳಿ ಆರಂಭಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ತಾಲೂಕು ಅಧ್ಯಕ್ಷ ಲಕ್ಷ್ಮಣ ಗುಡಾರದ ಮಾತನಾಡಿ, ಕಳೆದ ಒಂದು ವಾರದ ಹಿಂದೆ ಜಿಲ್ಲಾಧಿಕಾರಿಗಳ ಮೂಲಕ ಕಾರ್ವಿುಕ ಇಲಾಖೆಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ನೋಂದಣಿ/ನವೀಕರಣ 1 ವರ್ಷದ ಬದಲಾಗಿ ಮೊದಲಿನಂತೆ 3 ವರ್ಷಗಳಿಗೆ ಸೀಮಿತಗೊಳಿಸಬೇಕು. ಕಾರ್ವಿುಕ ಇಲಾಖೆ ಅಧಿಕಾರಿಗಳು ಕುಂಟು ನೆಪ ಒಡ್ಡಿ ಕಾರ್ವಿುಕ ಕಾರ್ಡ್ ರದ್ದುಪಡಿಸಬಾರದು ಎಂದು ಆಗ್ರಹಿಸಿದರು.

ಶೈಕ್ಷಣಿಕ ಸಹಾಯಧನ ಕಡಿತ ಮಾಡಿರುವ ಆದೇಶ ವಾಪಸ್ ಪಡೆಯಬೇಕು. 2021ರ ಹೈಕೋರ್ಟ್ ಆದೇಶದಂತೆ ಬಾಕಿ ಇರುವ ಶೈಕ್ಷಣಿಕ ಸಹಾಯಧನ ಮಂಜೂರು ಮಾಡಬೇಕು. 2025-26 ನೇ ಸಾಲಿನ ಶೈಕ್ಷಣಿಕ ಸಹಾಯಧನಕ್ಕೆ ಅರ್ಜಿ ಸಲ್ಲಿಕೆ ಆರಂಭಿಸಬೇಕು. ಹಿರಿಯ ಕಾರ್ವಿುಕರಿಗೆ ಬರುತ್ತಿದ್ದ ಪಿಂಚಣಿ 3-4 ತಿಂಗಳುಗಳಿಂದ ಬಂದಿಲ್ಲ. ಕೂಡಲೇ ಸಹಾಯಧನ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.

ತಹಸೀಲ್ದಾರ್ ಸುಧೀರ ಸಾಹುಕಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಶಿವಪ್ಪ ಅಸೂಟಿ, ಬಸಲಿಂಗಯ್ಯ ಪೂಜಾರ, ಮಹಮ್ಮದರಫೀಕ್ ಮಕಾಂದರ, ಲಕ್ಷ್ಮಣ ಸುನಪ್ಪನವರ, ಮಲ್ಲಪ್ಪ ಹೆಬಸೂರ, ಹಸನಸಾಬ್ ಸುಂಕದ, ಹಸನಸಾಬ್ ನಾಶಿಪುಡಿ, ಬಸವರಾಜ ಕಟ್ಟಿಮನಿ, ಬಾಬಾಜಾನ ಹಳ್ಳಿಕೇರಿ, ನಬಿರಸೂಲ ನದಾಫ, ಮೌಲಾಸಾಬ ಕುರಹಟ್ಟಿ, ಕಾರ್ವಿುಕರು ಉಪಸ್ಥಿರಿದ್ದರು.