ಮೈಸೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಹಿಂದೂ ಹಿತರಕ್ಷಣಾ ವೇದಿಕೆಯಿಂದ ನಗರದಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಯಿತು. ಬಸವೇಶ್ವರ ವೃತ್ತದಲ್ಲಿ ಪ್ರತಿಭಟನಾ ಸಭೆ ನಡೆಸಿ ನಂತರ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಹತ್ಯೆಯನ್ನು ಖಂಡಿಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಹಿಂದೂ ಜಾಗರಣ ವೇದಿಕೆ ಪ್ರಾಂತೀಯ ಸದಸ್ಯ ಉಲ್ಲಾಸ್ ಕಾರಂತ್, ಎಸ್‌ಡಿಪಿಐ ಹಾಗೂ ಪಿಎಫ್‌ಐ ಕಾರ್ಯಕರ್ತರಿಂದ ಪ್ರವೀಣ್ ಹತ್ಯೆ ನಡೆದಿದೆ. ಹಿಂದು ಕಾರ್ಯಕರ್ತರ ಹತ್ಯೆ ಇದೇ ಮೊದಲೇನು ಅಲ್ಲ. ಸರಣಿ ಹತ್ಯೆ ಗಳಲ್ಲಿ ಇದು ಸಹ ಒಂದಾಗಿದೆ. 2047ರಲ್ಲಿ ಭಾರತವನ್ನು ಇಸ್ಲಾಮೀಕರಣ ಮಾಡುವ ಗುರಿಯನ್ನು ಪಿಎಫ್‌ಐ ಹೊಂದಿದೆ. ಆ ಗುರಿ ಸಾಧನೆಗೆ ಪಿಎಫ್‌ಐ ಹಿಂದು ಕಾರ್ಯಕರ್ತರ ಹತ್ಯೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಹಾಗಾಗಿ ನಾವು ಪಿಎಫ್‌ಐ, ಎಸ್‌ಡಿಪಿಐ ಹಿನ್ನೆಲೆ ತಿಳಿದುಕೊಳ್ಳಬೇಕು. ಎಸ್‌ಡಿಪಿಐಯನ್ನು ಕೇವಲ ರಾಜಕೀಯ ಪಕ್ಷವಾಗಿ ನೋಡಿದರೆ ನಾವು ಮುಟ್ಟಾಳರಾಗುತ್ತೇವೆ ಎಂದು ಎಚ್ಚರಿಸಿದರು.
ಉಗ್ರಗಾಮಿ ಚಟುವಟಿಕೆಯಲ್ಲಿ ತೊಡಗಿದ್ದ ಸಿಮಿ ಸಂಘಟನೆಯನ್ನು ಯುಪಿಎ ಸರ್ಕಾರ ನಿಷೇಧಿಸಿತ್ತು. ನಿಷೇಧಕ್ಕೆ ಒಳಗಾಗದ ಸಂಘಟನೆಯಲ್ಲಿ ಇದ್ದ ಸದಸ್ಯರು ನಂತರ ಪಿಎಫ್‌ಐ ಹಾಗೂ ಎಸ್‌ಡಿಪಿಐಯನ್ನು 2006ರಲ್ಲಿ ಹುಟ್ಟು ಹಾಕಿದರು. ರಾಜ್ಯದಲ್ಲಿ ಪಿಎಫ್‌ಐ 2007ರಿಂದ ಕಾರ್ಯಾಚರಣೆ ಮಾಡುತ್ತಿದೆ ಎಂದು ಹೇಳಿದರು.
ಪಿಎಫ್‌ಐ, ಎಸ್‌ಡಿಪಿಐನ ಇಸ್ಲಾಮೀಕರಣಕ್ಕೆ ಅಡ್ಡಿ ಆಗಿರುವುದು ಈ ಕೇಸರಿ ಶಲ್ಯ. ಇದು ಬಿಜೆಪಿ-ಕಾಂಗ್ರೆಸ್ ಪಕ್ಷದ ನಡುವಿ ವಿಚಾರ ಅಲ್ಲ. ದೇಶದ ಆಂತರಿಕ ಭದ್ರತೆಗೆ ಸಂಬಂಧಿಸಿದ ವಿಷಯ. ಹಾಗಾಗಿ ಇದನ್ನು ಎಲ್ಲರು ಗಂಭೀರವಾಗಿ ಪರಿಗಣಿಸಬೇಕು. ಅವರು ಏತಕ್ಕೆ ಹಿಂದು ಕಾರ್ಯಕರ್ತರನ್ನು ಹತ್ಯೆ ಮಾಡುತ್ತಿದ್ದಾರೆ ಎಂಬುದು ಹಿಂದು ಕಾರ್ಯಕರ್ತರಿಗೆ, ಸರ್ಕಾರಕ್ಕೆ, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಎಲ್ಲರಿಗೂ ತಿಳಿಯಬೇಕು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಶಾಸಕರಾದ ಎಸ್.ಎ. ರಾಮದಾಸ್, ಎಲ್. ನಾಗೇಂದ್ರ, ಹರ್ಷವರ್ಧನ್, ಮೇಯರ್ ಸುನಂದಾ ಪಾಲನೇತ್ರ, ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್, ನಗರಾಧ್ಯಕ್ಷ ಶ್ರೀವತ್ಸ, ಮಾಜಿ ಸಚಿವ ಸಿ.ಎಚ್. ವಿಜಯ ಶಂಕರ್ ಹಾಗೂ ಇತರರು ಪಾಲ್ಗೊಂಡಿದ್ದರು.