ಜಿಲ್ಲೆ

ನರೇಂದ್ರ ಗ್ರಾಮಸ್ಥರ ಬೃಹತ್ ಪ್ರತಿಭಟನೆ

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ತಾಲೂಕಿನ ನರೇಂದ್ರ ಗ್ರಾಮವನ್ನು ಪ್ರಸ್ತಾವಿತ ಧಾರವಾಡ ಮಹಾನಗರ ಪಾಲಿಕೆಗೆ ಸೇರಿಸಬಾರದು ಎಂದು ಆಗ್ರಹಿಸಿ ಗ್ರಾಮಸ್ಥರು ಜಿಲ್ಲಾಽಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಗ್ರಾಮದ ಶ್ರೀ ಮಳೆಪ್ಪಜ್ಜನ ಮಠದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಗ್ರಾಮಸ್ಥರು, ಜ್ಯುಬಿಲಿ ವೃತ್ತ, ಕೋರ್ಟ್ ವೃತ್ತ ಮಾರ್ಗವಾಗಿ ಜಿಲ್ಲಾಽಕಾರಿ ಕಚೇರಿ ತಲುಪಿದರು. ನೂರಾರು ಚಕ್ಕಡಿಗಳು, ಟ್ರ‍್ಯಾಕ್ಟರ್‌ಗಳ ಸಮೇತ ಆಗಮಿಸಿ ಅಪರ ಜಿಲ್ಲಾಽಕಾರಿ ಗೀತಾ ಸಿ.ಡಿ. ಅವರ ಮೂಲಕ ಸರ್ಕಾರಕ್ಕೆ ಮನವಿ ರವಾನಿಸಿದರು.

ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯನ್ನು ವಿಭಜಿಸಿ ಧಾರವಾಡ ಪ್ರತ್ಯೇಕ ಪಾಲಿಕೆ ರಚಿಸಲು ರಾಜ್ಯ ಸರ್ಕಾರ ಗೆಜೆಟ್ ಅಽಸೂಚನೆ ಹೊರಡಿಸಿದೆ. ಈ ಕುರಿತು ನಕಾಶೆ ಹಾಗೂ ಧಾರವಾಡ ಪಾಲಿಕೆ ವ್ಯಾಪ್ತಿಗೆ ಒಳಪಡಲಿರುವ ಗ್ರಾಮಗಳ ಹೆಸರುಗಳನ್ನು ಪ್ರಸ್ತಾಪಿಸಲಾಗಿದೆ. ಅದರಲ್ಲಿ ನರೇಂದ್ರ ಗ್ರಾಮವನ್ನೂ ಸೇರ್ಪಡೆಗೊಳಿಸುವ ಮಾಹಿತಿ ಇದೆ. ಆದರೆ, ನರೇಂದ್ರ ಗ್ರಾಮ ಕೃಷಿ ಪ್ರಧಾನ ಗ್ರಾಮವಾಗಿದ್ದು, ಸಾವಿರ ಮೇಟಿಯ ಊರೆಂದು ಹೆಸರುವಾಸಿಯಾಗಿದೆ. ಗ್ರಾಮ ಪಂಚಾಯಿತಿ ಅಸ್ತಿತ್ವದಲ್ಲಿದ್ದು, ಪಂಚಾಯತ್ ರಾಜ್ ವ್ಯವಸ್ಥೆಯಡಿ ಗ್ರಾಮದ ಅಭಿವೃದ್ಧಿಯಾಗುತ್ತಿದೆ. ಗ್ರಾಮದ ಸುಮಾರು 1,000 ಎಕರೆ ಭೂಮಿಯನ್ನು ಕೃಷಿ ವಿಶ್ವವಿದ್ಯಾಲಯಕ್ಕೆ, 280 ಎಕರೆಯನ್ನು ಕೆಐಎಡಿಬಿ, ಕೆಎಚ್‌ಬಿಗೆ, 200 ಎಕರೆಯನ್ನು ಕೆಇಬಿ ಗ್ರಿಡ್‌ಗಾಗಿ ವಶಪಡಿಸಿಕೊಳ್ಳಲಾಗಿದೆ. ಉಳಿದ ಜಮೀನನ್ನು ರೈತರು ಕೃಷಿಗೆ ಅವಲಂಬಿಸಿದ್ದಾರೆ. ಪಾಲಿಕೆಗೆ ಸೇರ್ಪಡೆಯಾದರೆ ಕರ ಸಂದಾಯ ಮಾಡಲು ತೊಂದರೆಯಾಗಲಿದೆ. ವಿದ್ಯಾರ್ಥಿಗಳು ಗ್ರಾಮೀಣ ಕೃಪಾಂಕದಿAದ ವಂಚಿತರಾಗಲಿದ್ದಾರೆ. ಆದ್ದರಿಂದ ಗ್ರಾಮವನ್ನು ಪಾಲಿಕೆಗೆ ಸೇರ್ಪಡೆ ಮಾಡಬಾರದು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

* ಸಚಿವ ಸಂತೋಷ ಲಾಡ್‌ಗೆ ಮನವಿ: ಪ್ರತಿಭಟನಾಕಾರರು ಸಚಿವ ಸಂತೋಷ ಲಾಡ್ ಅವಿಗೂ ಮನವಿ ಸಲ್ಲಿಸಿ ಗ್ರಾಮವನ್ನು ಪಾಲಿಕೆಗೆ ಸೇರಿಸಬಾರದು ಎಂದು ಕೋರಿದರು. ಪ್ರತಿಕ್ರಿಯಿಸಿದ ಸಚಿವ, ಈ ಸಂಬAಧ ಸರ್ಕಾರದ ಮಟ್ಟದಲ್ಲಿ ಚರ್ಚಿಸುತ್ತೇನೆ. ಇನ್ನೆರಡು ವಾರಗಳಲ್ಲಿ ಸೂಕ್ತ ತೀರ್ಮಾನ ಕೈಗೊಂಡು ಪ್ರಕಟಿಸಲಾಗುವುದು ಎಂದು ಭರವಸೆ ನೀಡಿದರು.