ಮಡಿಕೇರಿ: ಅರೆಭಾಷಿಕ ಜನಾಂಗದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುತ್ತಿರುವವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕೊಡಗು ಗೌಡ ಯುವ ವೇದಿಕೆ, ಗೌಡ ಯುವಕ ಸಂಘ, ಗೌಡ ಮಹಿಳಾ ಒಕ್ಕೂಟದ ವತಿಯಿಂದ ನಗರದಲ್ಲಿ ಶಾಂತಿಯುತ ಪ್ರತಿಭಟನೆ ಸೋಮವಾರ ನಡೆಯಿತು.
ಗೌಡ ಸಮುದಾಯದ ಸ್ವಾಭಿಮಾನದ ನಡೆ ಘೋಷವಾಕ್ಯದಡಿ ಸೋಮವಾರ ನಗರದಲ್ಲಿ ೫೦೦೦ಕ್ಕೂ ಅಧಿಕ ಗೌಡ ಜನಾಂಗಬಾಂಧವರು ಬೃಹತ್ ಪ್ರತಿಭಟನಾ ಜಾಥಾ ನಡೆಸಿದರು. ಅರಭಾಷೆ ಗೌಡ ಸಮುದಾಯದ ಸಾಂಪ್ರದಾಯಿಕ ಉಡುಪು ಧರಿಸಿದ ಅವರು, ಭಿತ್ತಿಪತ್ರಗಳನ್ನಿಡಿದು ಮೌನ ಮೆರವಣಿಗೆ ನಡೆಸಿದರು. ಸುಬೇದಾರ್ ಗುಡ್ಡೆಮನೆ ಅಪ್ಪಯ್ಯಗೌಡ ಹಾಗೂ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮೆರವಣಿಗೆ ಆರಂಭಿಸಿದ ಪ್ರತಿಭಟನಕಾರರು ಸುಮಾರು ೧ವರೆ ಕಿ.ಮೀ ದೂರದವರೆಗೂ ಮೌನ ಜಾಥಾ ನಡೆಸಿದರು.
ನಾಡಿನ ಬೇರೆ ಬೇರೆ ಜಿಲ್ಲೆಗಳಿಂದಲೂ ಸಮುದಾಯದ ನಾಯಕರು ಬಂದು ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಪ್ರತಿಭಟನೆಯಲ್ಲಿ ಮಡಿಕೇರಿ ಗೌಡ ಸಮಾಜ, ಕೊಡಗು ಗೌಡ ವಿದ್ಯಾಸಂಘ ಹಾಸನ, ಗೌಡ ಸಮಾಜ ಸುಂಟಿಕೊಪ್ಪ, ಗೌಡ ಸಮಾಜ ಹುಣಸೂರು, ಮೈಸೂರು, ಬೆಂಗಳೂರು, ಕುಶಾಲನಗರ, ಸೋಮವಾರಪೇಟೆ, ಚೇರಂಬಾಣೆ, ಬೆಂಗಳೂರಿನ ಕೊಡಗು ಗೌಡ ಯುವ ವೇದಿಕೆ, ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜದ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ದಾರಿ ಮಧ್ಯೆ ಜನರಲ್ ತಿಮ್ಮಯ್ಯ ಹಾಗೂ ರಾಷ್ಟ್ರಕವಿ ಕುವೆಂಪು ಅವರ ಪ್ರತಿಮೆಗೂ ಪುಷ್ಪನಮನ ಸಲ್ಲಿಸಿದರು.