ತಿ.ನರಸೀಪುರ: ರಾಜ್ಯಸಭೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌ರ ಕುರಿತು ಹಗುರ ಮಾತನ್ನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ವಿರುದ್ಧ ತಾಲೂಕಿನ ತಲಕಾಡು ಗ್ರಾಮದಲ್ಲಿ ಬುಧವಾರ ದಸಂಸ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
ಗ್ರಾಮದ ಶ್ರೀ ಬಂಡರಸಮ್ಮ ದೇವಸ್ಥಾನ ಆವರಣದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು ಷಾ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಮೆರವಣಿಗೆ ಪ್ರಾರಂಭಿಸಿದರು. ನಂತರ ತಲಕಾಡು ಮುಖ್ಯ ಸರ್ಕಲ್ನಲ್ಲಿ ಮಾನವ ಸರಪಳಿ ಮಾಡಿ ಷಾ ಪ್ರತಿಕೃತಿಗೆ ಬೆಂಕಿ ಹಚ್ಚಿ ದಹಿಸಿ ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆ ಸಂಚಾರ ತಡೆ ನಡೆಸಿದರು. ನಂತರ ನಾಡ ಕಚೇರಿ ಬಳಿ ಧರಣಿ ಕುಳಿತು ಬಿಜೆಪಿ ಸರ್ಕಾರ ಹಾಗೂ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ಮಾತನಾಡಿ, ಪ್ರಜಾಪ್ರಭುತ್ವದ ಸಂಸ್ಥೆಯಾದ ಸಂಸತ್ ಭವನದಲ್ಲಿ, ಸಂವಿಧಾನ ಬದ್ಧ ಹುದ್ದೆ ಹೊಂದಿರುವ ವ್ಯಕ್ತಿಯೇ ಸಂವಿಧಾನಕ್ಕೆ ಅವಮಾನಿಸಿರುವುದು ಖಂಡನೀಯ. ಅಂಬೇಡ್ಕರ್ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಷಾ ಅವರನ್ನು ದೇಶದ್ರೋಹ ಕಾಯ್ದೆಯಡಿ ಬಂಧಿಸುವವೆರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಕಿಡಿಕಾರಿದರು.
ತಾಲೂಕು ಸಂಚಾಲಕ ಕುಕ್ಕೂರು ರಾಜು ಮಾತನಾಡಿ, ಕೋಮುವಾದಿಗಳ ಕೈಗೆ ಜನರು ಅಧಿಕಾರ ಕೊಟ್ಟಿದ್ದರಿಂದ ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕಿದೆ. ಷಾ ವಿರುದ್ಧ ರಾಷ್ಟ್ರಪತಿಗಳು ಕಾನೂನು ಕ್ರಮ ಜರುಗಿಸುವವರೆಗೂ ದೇಶದಾದ್ಯಂತ ಹೋರಾಟ ನಡೆಯಲಿದೆ ಎಂದು ಎಚ್ಚರಿಸಿದರು.
ನಂತರ ತಲಕಾಡು ಉಪತಹಸೀಲ್ದಾರ್ ಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ದಸಂಸ ತಾಲೂಕು ಸಂಚಾಲಕ ಯಾಚೇನಹಳ್ಳಿ ಸೋಮಶೇಖರ್, ಕೆಪಿಸಿಸಿ ಸದಸ್ಯ ಸುಂದರ್‌ನಾಯಕ, ಮಾಜಿ ಅಧ್ಯಕ್ಷ ನಾಗರಾಜು, ಉಪಾಧ್ಯಕ್ಷರಾದ ನಾಗರಾಜ್ ಮೂರ್ತಿ, ಬೆಟ್ಟಹಳ್ಳಿ ದಕ್ಷಿಣಾಮೂರ್ತಿ, ಸದಸ್ಯರಾದ ಕೆಂಪಯ್ಯ, ನಾಗೇಶ, ಸುಬ್ಬನಾಯಕ, ಪಾರ್ವತಮ್ಮ, ಮುಖಂಡರಾದ ಕೌದಳ್ಳಿ ದೊರೆಸ್ವಾಮಿ, ತಲಕಾಡು ಮನೋಜ್ ಜಗದೀಶ್, ಸಿದ್ದಾರ್ಥ, ಕಿರಣ್, ಬೆಟ್ಟಹಳ್ಳಿ ಮಲ್ಲಾಜಮ್ಮ, ಕಾಳಿಹುಂಡಿ ಮಹೇಂದ್ರ, ಶಿವಕುಮಾರ್, ಬಣವೆ ನಿಂಗರಾಜು, ಚಂದಹಳ್ಳಿ ಮಲ್ಲೇಶ್, ಹೆಮ್ಮಿಗೆ ಚಂದ್ರು, ಕಲಿಯೂರು ರಾಜೀವ್, ಉಮೇಶ್,ದೊಡ್ಡಪುರ ಪರಶಿವ, ಮಹದೇವಸ್ವಾಮಿ, ಕುಕ್ಕೂರು ಪ್ರಭು, ಶಿವಮೂರ್ತಿ, ರಮೇಶ್, ಗಡ್ಡೆಹುಂಡಿ ಮಹೇಶ್, ಬನ್ನಹಳ್ಳಿಹುಂಡಿ ಉಮೇಶ್, ಸುಜ್ಜಲೂರು ಶಿವಯ್ಯ ಇತರರು ಇದ್ದರು.
.