ವಿನಯಕುಮಾರ ಗಣಾಚಾರಿ 
ಜಿಲ್ಲೆ

ಕೇಂದ್ರದ ವಿರುದ್ಧ ಬೃಹತ್ ಪ್ರತಿಭಟನೆ ಫೆ.5ಕ್ಕೆ

ಲಿಂಗಸುಗೂರು: ಕೇಂದ್ರ ಬಜೆಟ್‌ನಲ್ಲಿ ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಕುರಿತು ಘೋಷಿಸದ ಹಿನ್ನೆಲೆಯಲ್ಲಿ ಫೆ.5ರಂದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಏಮ್ಸ್ ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ವಿನಯಕುಮಾರ ಗಣಾಚಾರಿ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ದೇಶದಲ್ಲಿಯೇ ಹಟ್ಟಿಚಿನ್ನದಗಣಿ ಕೋಟಿಗಟ್ಟಲೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಆದಾಯ ತರುತ್ತಿದೆ. ಹತ್ತಿ, ಸೋನಾಮಸೂರಿ ಅಕ್ಕಿ ರಫ್ತು ಸೇರಿ ಹತ್ತು ಹಲವು ಕ್ಷೇತ್ರಗಳಿಂದ ಸರ್ಕಾರಗಳಿಗೆ ಜಿಲ್ಲೆಯ ಕೊಡುಗೆ ಅಪಾರವಾಗಿದೆ.

ಏಮ್ಸ್‌ಗಾಗಿ ಜಿಲ್ಲಾ ಹೋರಾಟ ಸಮಿತಿ ಸಂಸದರ ಮನೆ ಮುಂದೆ ಪ್ರತಿಭಟನೆ, 84 ದಿನಗಳ ನಿರಶನ, ರಾಯಚೂರಿಂದ ಅರಸೀಕೆರೆವರೆಗೆ ಪಾದಯಾತ್ರೆ, 10,521 ಜನ ರಕ್ತ ಸಹಿ ಸಂಗ್ರಹಿಸಿ ಸಿಎಂಗೆ ಮನವಿ ಪತ್ರ ಸಲ್ಲಿಕೆ, ಜಿಲ್ಲೆಯ ಸರ್ವ ಧರ್ಮಗಳ, ವಿದ್ಯಾರ್ಥಿ ಯುವಕರ ಸಮಾವೇಶ, ಲಕ್ಷಾಂತರ ಪತ್ರ ಚಳವಳಿ ನಡೆಸಲಾಗಿದೆ.

ಜಿಲ್ಲಾ ಸಮಿತಿ ಹೋರಾಟ ಕೈಗೊಂಡು ಒಂದು ಸಾವಿರ ದಿನಗಳಾಗಿವೆ. ಸಿಎಂ ಪತ್ರ ಬರೆದರೂ ಕೇಂದ್ರ ಸರ್ಕಾರ ರಾಯಚೂರು ಜಿಲ್ಲೆಗೆ ಏಮ್ಸ್ ಸ್ಥಾಪನೆ ಬಗ್ಗೆ ಬಜೆಟ್‌ನಲ್ಲಿ ಯಾವುದೇ ಉಲ್ಲೇಖ ಮಾಡದಿರುವುದು ಜಿಲ್ಲೆಯ ಜನರಿಗೆ ನೋವುಂಟು ಮಾಡಿದೆ. ಆದ್ದರಿಂದ ಕೇಂದ್ರ ಸರ್ಕಾರದ ವಿರುದ್ಧ ಫೆ.5 ರಂದು ಬೃಹತ್ ಪ್ರತಿಭಟನೆ ಕೈಗೊಂಡಿದ್ದು, ಎಲ್ಲರೂ ಪಾಲ್ಗೊಳ್ಳುವ ಮೂಲಕ ಬೆಂಬಲ ನೀಡಬೇಕೆಂದು ಕೋರಿದರು.

ಹೋರಾಟ ಸಮಿತಿ ಪ್ರಮುಖರಾದ ಡಾ.ಶಿವಬಸಪ್ಪ ಹೆಸರೂರು, ಹನುಮಂತಪ್ಪ ಕುಣಿಕಲ್ಲೂರು, ಡಿ.ಬಿ.ಸೋಮನಮರಡಿ, ನಿಂಗಪ್ಪ ಪರಂಗಿ, ಶಿವಪುತ್ರಗೌಡ, ಮೌನೇಶ ಗೋಸ್ಲೆ, ತಿಮ್ಮಾರಡ್ಡಿ ಮುನ್ನೂರು ಇದ್ದರು.