ವಿಜಯಪುರ: ಜಮೀನಿನಲ್ಲಿ ಮೆಕ್ಕೆಜೋಳ ಹಾಗೂ ಕಬ್ಬು ಬೆಳೆಗಳ ಮಧ್ಯೆ ಬೆಳೆದಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಗಾಂಜಾ ವಶಕ್ಕೆ ಪಡೆಯಲಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾಗಿ ಎಸ್‌ಪಿ ಲಕ್ಷ್ಮಣ ನಿಂಬರಗಿ ತಿಳಿಸಿದರು.
ತಿಕೋಟಾ ತಾಲೂಕಿನ ಯತ್ನಾಳ ಗ್ರಾಮದ ಮಲ್ಲು ಗೋವಿಂದ ಕರ್ವೆ ಹಾಗೂ ಮನಿಗೇನಿ ಗೋವಿಂದ ಕರ್ವೆ ಬಂಧಿತರು. ಇವರಿಂದ ಅಂದಾಜು 79.80 ಲಕ್ಷ ರೂಪಾಯಿ ಮೌಲ್ಯದ 228 ಕೆಜಿ ಹಸಿ ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
1 ಎಕರೆ 37 ಗುಂಟೆ ಭೂಮಿಯಲ್ಲಿ ಮೆಕ್ಕಜೋಳ ಹಾಗೂ ಕಬ್ಬು ಬೆಳೆಗಳ ನಡುವೆ ಹಸಿ ಗಾಂಜಾ ಬೆಳೆಯಲಾಗಿತ್ತು. ಈ ಬಗ್ಗೆ ಖಚಿತ ಮಾಹಿತೆ ಮೇರೆಗೆ ಸಿಇಎನ್ ಅಪರಾಧ ಠಾಣೆಯ ಡಿಎಸ್‌ಪಿ ಸುನೀಲ್ ಕಾಂಬಳೆ ಮತ್ತು ಸಿಪಿಐ ರಮೇಶ ಅವಜಿ ನೇತೃತ್ವದ ತಂಡ ದಾಳಿ ನಡೆಸಿದೆ.ಆರೋಪಿಗಳು ಸ್ವಂತ ಲಾಭಕ್ಕಾಗಿ ಈ ಗಿಡಗಳನ್ನು ಬೆಳೆದಿದ್ದಾಗಿ ವಿಚಾರಣೆ ವೇಳೆ ತಿಳಿದು ಬಂದಿದೆ. ಬಂಧಿತರನ್ನು ಈಗಾಗಲೇ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಮತ್ತೊಬ್ಬ ಆರೋಪಿ ತಲೆ ಮರೆಸಿಕೊಂಡಿದ್ದು, ಪತ್ತೆಗೆ ಜಾಲ ಬೀಸಲಾಗಿದೆ ಎಂದರು.
ಕಾರ್ಯಾಚರಣೆಯಲ್ಲಿ ಪಿಎಸ್‌ಐ ಮಲ್ಲಿಕಾರ್ಜುನ ತಳವಾರ, ಎಎಸ್‌ಐ ಬಿ.ಎಂ. ಪವಾರ, ವೈ.ಎಸ್. ಜಮಖಂಡಿ, ಸಿಬ್ಬಂದಿ ಆರ್.ಡಿ. ಅಂಜುಟಗಿ, ಆರ್.ಬಿ. ಕೋಳಿ, ಎಂ.ಎಂ. ಕುರುವಿನಶೆಟ್ಟಿ, ಎಸ್.ಜಿ. ದಾನಪ್ಪಗೋಳ, ಎಚ್.ಎನ್.ಬಾಗವಾನ, ಆರ್.ಐ. ಲೋಣಿ, ಎ.ಆರ್. ಗದ್ಯಾಳ, ಎಸ್.ಆರ್. ಬಡಚಿ, ಡಿ.ಆರ್. ಪಾಟೀಲ, ವಾಣಿಶ್ರೀ ಹೂಗಾರ, ಎಸ್.ಬಿ. ಮುಲ್ಲಾ ಪಾಲ್ಗೊಂಡಿದ್ದು, ಅವರ ಕಾರ್ಯ ಶ್ಲಾಘಿಸಿ ಪ್ರಮಾಣ ಪತ್ರ ನೀಡಲಾಗಿದೆ ಎಂದರು.
ಎಎಸ್‌ಪಿ ಶಂಕರ ಮಾರಿಹಾಳ ಹಾಗೂ ಎಎಸ್‌ಪಿ ರಾಮನಗೌಡ ಹಟ್ಟಿ ಇದ್ದರು.