ಮೈಸೂರಿನಲ್ಲಿ ರೈತರು ಪ್ರತಿಭಟನೆ ನಡೆಸಿದರು. 
ಜಿಲ್ಲೆ

ಮೈಸೂರಿನಲ್ಲಿ ರೈತರ ಬೃಹತ್ ಪ್ರತಿಭಟನೆ: ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಗೆ ಆಗ್ರಹ

ಮೈಸೂರು: ಕಬ್ಬು ಬೆಳೆಗೆ ನ್ಯಾಯಯುತ ಬೆಲೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿ ವಿವಿಧ ರೈತಪರ ಸಂಘಟನೆಗಳು ಕಬ್ಬು ಬೆಳೆಗಾರರ ಸಮನ್ವಯ ಸಮಿತಿ ನೇತೃತ್ವದಲ್ಲಿ ಮಂಗಳವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ರೈತರು ನಂತರ ರಸ್ತೆಯಲ್ಲಿಯೇ ಅಡುಗೆ ಮಾಡಿ ಊಟ ಮಾಡುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ತಮಿಳುನಾಡು, ಪಂಜಾಬ್, ಉತ್ತರಪ್ರದೇಶ ಮಾದರಿಯಲ್ಲಿ ರಾಜ್ಯದಲ್ಲೂ ಕಬ್ಬಿಗೆ ಉತ್ತಮ ದರ ನಿಗದಿ ಮಾಡಬೇಕು. 10.25 ಇಳುವರಿಗೆ ಟನ್‌ಗೆ 4500 ರೂ. ನೀಡಬೇಕು. ಪ್ರತಿ ಟನ್‌ಗೆ ಸರ್ಕಾರ 1 ಸಾವಿರ ರೂ. ಪ್ರೋತ್ಸಾಹ ಧನ ನೀಡಬೇಕು ಎಂದು ರೈತರು ಆಗ್ರಹಿಸಿದರು.

ಕಬ್ಬು ತೂಕದಲ್ಲಿ ಆಗುತ್ತಿರುವ ಮೋಸ, ಕಬ್ಬಿನ ಹಣ ವಿಳಂಬ ಪಾವತಿ ತಪ್ಪಿಸಬೇಕು. ಸರ್ಕಾರ ರೈತರ ಸಂಕಷ್ಟದ ಬದುಕಿನ ಜತೆ ಚೆಲ್ಲಾಟವಾಡುವುದನ್ನು ಬಿಟ್ಟು ನ್ಯಾಯಯುತ ಬೆಲೆ ನಿಗದಿ ಮಾಡಬೇಕು. ಪಂಜಾಬ್‌ನಲ್ಲಿ ಟನ್ ಕಬ್ಬಿಗೆ 4480 ರೂ., ಉತ್ತರಪ್ರದೇಶದಲ್ಲಿ 4200 ರೂ., ತಮಿಳುನಾಡಿನಲ್ಲಿ 4000 ರೂ. ನಿಗದಿ ಮಾಡಿದ್ದಾರೆ. ಆದರೆ ನಮ್ಮ ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಮಗೆ ಬೆಲೆ ನಿಗದಿ ಮಾಡುವ ಅಧಿಕಾರ ಇಲ್ಲವೆಂದು ಕುಂಟು ನೆಪ ಹೇಳುತ್ತಾ ರೈತರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ರೈತರ ಪರವಾಗಿ ಮೊಸಳೆ ಕಣ್ಣೀರು ಸುರಿಸುತ್ತಾ ಇದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬರಗಾಲ ಸಂಕಷ್ಟದಿಂದ ರೈತರು ಬಳಲಿದ್ದಾರೆ. ಕೂಡಲೇ ರಾಜ್ಯ ಸರ್ಕಾರ ಪ್ರತಿ ಟನ್ ಕಬ್ಬಿಗೆ 1000 ರೂ. ಪ್ರೋತ್ಸಾಹ ಧನ ನೀಡಬೇಕು. ನ.6 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರೈತರ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳದೆ ಇದ್ದರೆ ಹಳ್ಳಿ ಹಳ್ಳಿಗಳಲ್ಲಿ ಚಳವಳಿ ವಿಸ್ತರಣೆ ಮಾಡಲಾಗುವುದು ಎಂದು ಎಚ್ಚರಿಸಿದರು.

ರೈತರು ಸುಮಾರು 3 ಗಂಟೆ ತನಕ ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿ ಸ್ಥಳದಲ್ಲಿಯೇ ಅಡುಗೆ ಮಾಡಿ ಊಟ ಮಾಡಿದರು. ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅಪರ ಜಿಲ್ಲಾಧಿಕಾರಿ ಐಶ್ವರ್ಯ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಬಡಗಲಪುರ ನಾಗೇಂದ್ರ, ಕುರುಬೂರು ಶಾಂತಕುಮಾರ್, ಹಳ್ಳಿಕೆರೆಹುಂಡಿ ಭಾಗ್ಯರಾಜ್, ಮಂಜು ಕಿರಣ್, ಹೊಸಕೋಟೆ ಬಸವರಾಜ್, ಅತ್ತಹಳ್ಳಿ ದೇವರಾಜ್, ಹೊಸೂರು ಕುಮಾರ್, ಪಿ.ಸೋಮಶೇಖರ್, ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ನೇತ್ರಾವತಿ, ವರಕೋಡು ನಾಗೇಶ್ ಹಾಗೂ ಇತರರು ಪಾಲ್ಗೊಂಡಿದ್ದರು.