ಜಿಲ್ಲೆ

ಗಣರಾಜ್ಯೋತ್ಸವ ಅಂಗವಾಗಿ ಬೃಹತ್ ಸೈಕಲ್ ಜಾಥಾ

ಮೈಸೂರು: ನಗರದ ವಿವಿಧ ಸೈಕ್ಲಿಂಗ್ ಮತ್ತು ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಕೆಎಸ್‌ಟಿಡಿಸಿ ಸಹಯೋಗದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಸೋಮವಾರ ಬೃಹತ್ ಸೈಕಲ್ ಜಾಥಾ ನಡೆಯಿತು.

ನಗರದ ಜೆಎಲ್‌ಬಿ ರಸ್ತೆಯ ಕೆಎಸ್‌ಟಿಡಿಸಿ ಕಚೇರಿಯಿಂದ ಸೋಮವಾರ ಆರಂಭಗೊಂಡ ಜಾಥಾವು ಕೆಆರ್‌ಎಸ್‌ನ ಬೃಂದಾವನ ಗಾರ್ಡನ್ಸ್‌ನಲ್ಲಿರುವ ಕೆಎಸ್‌ಟಿಡಿಸಿ ಕಚೇರಿವರೆಗೆ ಯಶಸ್ವಿಯಾಗಿ ಮುಕ್ತಾಯಗೊಂಡಿತು.

ವೃತ್ತಿಪರ ಮತ್ತು ಯುವ ಹವ್ಯಾಸಿ ಸೈಕ್ಲಿಸ್ಟ್‌ಗಳ ಜತೆಗೆ 18 ಮಹಿಳೆಯರು, ವಿದ್ಯಾರ್ಥಿಗಳು ಮತ್ತು ಕೆಲವು ಹಿರಿಯ ನಾಗರಿಕರನ್ನು ಒಳಗೊಂಡಂತೆ 75 ಸೈಕ್ಲಿಸ್ಟ್‌ಗಳು ಭಾಗಿಯಾಗಿದ್ದರು. ಸೈಕಲ್ ಜಾಥಾದ ಮೂಲಕ ಮೈಸೂರು ಮತ್ತು ಸುತ್ತಮುತ್ತಲಿನ ಪ್ರವಾಸೋದ್ಯಮವನ್ನು ಉತ್ತೇಜಿಸಲು ಮತ್ತು ಜನರಲ್ಲಿ ಪರಿಸರ ಜಾಗೃತಿ ಮೂಡಿಸಲಾಯಿತು. ಇದಕ್ಕೂ ಮುನ್ನ ಮಿಸ್ ಕರ್ನಾಟಕ ತನಿಷ್ಕಾ ಮೂರ್ತಿ, ಸಾರ್ವಜನಿಕ ಗ್ರಂಥಾಲಯಗಳ ಉಪನಿರ್ದೇಶಕ ಬಿ.ಮಂಜುನಾಥ್, ಕೆಎಸ್‌ಟಿಡಿಸಿ ವ್ಯವಸ್ಥಾಪಕ ಆಶಿಶ್ ಉಪಸ್ಥಿತಿಯಲ್ಲಿ ಪತ್ರಕರ್ತ ರಾಮು ಸೈಕಲ್ ಜಾಥಾಕ್ಕೆ ಚಾಲನೆ ನೀಡಿದರು.

ನಿವೃತ್ತ ಡಿವೈಎಸ್‌ಪಿ ಮತ್ತು ಹಿರಿಯ ಸೈಕ್ಲಿಸ್ಟ್ ಧನಂಜಯ, ಸೈಕ್ಲೊಪೀಡಿಯಾದ ಲೋಕೇಶ್, ಮೈಸೂರು ರಾಯಲ್ ರೈಡರ್ಸ್‌ನ ವಿನಯ್ ಸಿಂಗ್, ಮೈಸೂರು ಸೈಕ್ಲಿಂಗ್ ಮತ್ತು ತರಬೇತಿ ಅಕಾಡೆಮಿಯ ನಾಗರಾಜ್, ಸಿಕೆಪಿ ಟೆಕ್ನೋ ಸ್ಪೋರ್ಟ್ಸ್‌ನ ಪೃಥಿವ್ ಮತ್ತು ಮೈಸೂರು ಅಥ್ಲಿಟ್ಸ್ ಕ್ಲಬ್‌ನ ರಮೇಶ್ ನರಸಯ್ಯ, ದೀಪಕ್ ಪತಂಗೆ, ಸಂತೋಷ್, ಅನಿಲ್, ಎಚ್.ಎಸ್.ದೀಪಕ್, ವೀಣಾ ಅಶೋಕ್ ಮತ್ತು ಸೂರಜ್ ಭಾಗವಹಿಸಿದ್ದರು.