ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಲುಕಿಕೊಂಡ 144 ಚಕ್ರಗಳ ಬೃಹತ್ ಟ್ರಕ್ 
ಜಿಲ್ಲೆ

ಪಣಂಬೂರು ಹೆದ್ದಾರಿಯಲ್ಲಿ ಸಿಲುಕಿದ 144 ಚಕ್ರಗಳ ಬೃಹತ್ ಟ್ರಕ್

ಮಂಗಳೂರು: ಭಾರೀ ಗಾತ್ರದ 144 ಚಕ್ರಗಳ ಟ್ರಕ್ ಭಾನುವಾರ ಸಂಜೆ ಪಣಂಬೂರು ಬೀಚ್ ರಸ್ತೆ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಿಲುಕಿಕೊಂಡ ಪರಿಣಾಮ ಹೆದ್ದಾರಿಯ ಎರಡೂ ಕಡೆ ಸಂಚಾರ ದಟ್ಟಣೆ ಉಂಟಾಗಿ ಸುಮಾರು ಎರಡು ತಾಸು ಸಾರ್ವಜನಿಕರು ಪರದಾಟ ನಡೆಸಿದರು.
ನವಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ) ಗೆ ಭಾರೀ ಗಾತ್ರದ ಕೈಗಾರಿಕಾ ಉಪಕರಣವನ್ನು ಸಾಗಿಸಿಕೊಂಡು ಬಂದಿದ್ದ 144 ಚಕ್ರಗಳ (ಮಲ್ಟಿ-ಆಕ್ಸಲ್ ಮಾಡ್ಯುಲರ್ ಟ್ರೈಲರ್) ಟ್ರಕ್ ಹಿಂತಿರುಗಿ ತೆರಳುತ್ತಿದ್ದ ಸಂದರ್ಭ ಬೀಚ್ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶಿಸುತ್ತಿದ್ದಾಗ ರಸ್ತೆಯಲ್ಲಿ ಸಿಲುಕಿಕೊಂಡಿದೆ.
ಪಡುಬಿದ್ರೆಯ ಖಾಸಗಿ ಸಂಸ್ಥೆಗೆ ಸೇರಿದ ಈ ಟ್ರಕ್ ಶನಿವಾರ ರಾತ್ರಿ ರಫ್ತು ಉದ್ದೇಶದ ಸರಕಿನೊಂದಿಗೆ ಪಣಂಬೂರು ಬಂದರಿಗೆ ಆಗಮಿಸಿತ್ತು. ರಾತ್ರಿ 11 ಗಂಟೆಗೆ ಪಡುಬಿದ್ರೆಯಿಂದ ಹೊರಟು ನಸುಕಿನ ಜಾವ ನಾಲ್ಕು ಗಂಟೆಗೆ ಪಣಂಬೂರುಗೆ ತಲುಪಿತ್ತು. ಬಂದರ್‌ನಲ್ಲಿ ಸರಕು ಅನ್‌ಲೋಡ್ ಮಾಡಿ ಭಾನುವಾರ ಸಂಜೆ ನಾಲ್ಕು ಗಂಟೆಗೆ ಹೊರಗೆ ಬಂದು ಹೆದ್ದಾರಿಗೆ ನುಗ್ಗಿತ್ತು. ಆದರೆ ಬೀಚ್ ರಸ್ತೆಯಿಂದ ಹೊರಕ್ಕೆ ಬರುವಾಗ ಬದಿಯಲ್ಲಿ ವಾಹನ ಇದ್ದುದರಿಂದ ಟ್ರಕ್ ಮುಂಭಾಗ ಹೆದ್ದಾರಿ ಡಿವೈಡರ್ ಮೇಲೇರಿ ನಿಂತಿತ್ತು. ಹಿಂಭಾಗ ಪೂರ್ತಿಯಾಗಿ ರಸ್ತೆಗೆ ಅಡ್ಡಲಾಗಿ ನಿಂತಿದ್ದರಿಂದ ಮಂಗಳೂರುನಿಂದ ಸುರತ್ಕಲ್ ಕಡೆಗೆ ಹೋಗುವ ರಸ್ತೆ ಪೂರ್ತಿಯಾಗಿ ಬಂದ್ ಆಗಿತ್ತು.
ಇದರಿಂದಾಗಿ ಬೃಹತ್ ಟ್ರಕ್ ಹಿಂದಕ್ಕೂ ಮುಂದಕ್ಕೂ ಚಲಿಸಲಾಗದೆ ಬಾಕಿಯಾಗಿ, ಹೆದ್ದಾರಿಯಲ್ಲಿ ವಾಹನಗಳು ಫುಲ್ ಟ್ರಾಫಿಕ್ ಜಾಮ್ ಉಂಟಾಯಿತು. ಪಣಂಬೂರುನಿಂದ ಕೂಳೂರು, ಕೊಟ್ಟಾರದ ತನಕ ವಾಹನಗಳು ಸಾಲುಗಟ್ಟಿ ನಿಂತಿದ್ದವು. ವಾಹನಗಳ ಪ್ರಯಾಣಿಕರು, ಚಾಲಕರು ರಸ್ತೆಗೆ ಬಂದು ಬೃಹತ್ ಟ್ರಕ್‌ನ್ನು ಹಗಲಿನಲ್ಲಿ ಹೆದ್ದಾರಿಗೆ ತಂದಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೊನೆಗೆ ಮುಂಭಾಗದಲ್ಲಿದ್ದ ಟ್ರಕ್ ಇಂಜಿನನ್ನು ತೆರವು ಮಾಡಿ ಟ್ರೈಲರ್‌ನನ್ನು ಹಿಂಭಾಗದಿಂದ ಕಟ್ಟಿ ಹಿಂದಕ್ಕೆ ಎಳೆಯುವ ಪ್ರಯತ್ನ ನಡೆಯಿತು. ಸಂಜೆ 6 ಗಂಟೆ ವೇಳೆಗೆ ಟ್ರಕ್ ತೆರವು ಮಾಡಿ ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಯಿತು.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸಂಚಾರ ಪೊಲೀಸರು, ಹೆದ್ದಾರಿ ನಿರ್ವಹಣಾ ಸಿಬ್ಬಂದಿ ಹಾಗೂ ಬಂದರು ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಸಿಲುಕಿಕೊಂಡಿದ್ದ ಟ್ರಕ್ ತೆರವು ಮಾಡಲು ಪ್ರಯತ್ನಿಸಿದರು. ಕ್ರೇನ್‌ಗಳು ಮತ್ತು ತಾಂತ್ರಿಕ ಸಿಬ್ಬಂದಿಯ ನೆರವಿನಿಂದ ಟ್ರೈಲರ್ ತೆರವು ಪ್ರಯತ್ನ ನಡೆಸಲಾಯಿತು. ನಂತರ ಸಂಚಾರವನ್ನು ಏಕಮುಖವಾಗಿ ಬಿಡುವ ಮೂಲಕ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಯಿತು.
ಪ್ರಯಾಣಿಕರ ಆಕ್ರೋಶ: ವಾಹನಗಳು ಸಂಜೆ 4 ಗಂಟೆಯಿಂದ 6 ಗಂಟೆ ತನಕ ಹೆದ್ದಾರಿಯಲ್ಲೇ ಬಾಕಿಯಾದ ಕಾರಣ ಅದರಲ್ಲಿದ್ದ ಪ್ರಯಾಣಿಕರು ಪರದಾಡುವಂತಾಯಿತು. ಟ್ರಕ್‌ನ ಕಂಪೆನಿಯ ಅಧಿಕಾರಿಗಳು ಆಗಮಿಸಿ ತೆರವು ಮಾಡಲು ಮುಂದಾದ ವೇಳೆ ಸಾರ್ವಜನಿಕರು ಅವರನ್ನು ತರಾಟೆಗೆತ್ತಿಕೊಂಡರು. ಸಂಚಾರ ಪೊಲೀಸರು ಕೂಳೂರು ಕಡೆಯಿಂದ ಏಕಮುಖ ರಸ್ತೆಯನ್ನೇ ದ್ವಿಪಥ ಮಾಡಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿದರು.
ತುರ್ತು ವಾಹನಗಳಿಗೆ ತೊಂದರೆ: ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣಗಳಿಗೆ ತೆರಳುತ್ತಿದ್ದ ಪ್ರಯಾಣಿಕರು ವಾಹನ ದಟ್ಟಣೆಯಿಂದ ಸಂಕಷ್ಟ ಅನುಭವಿಸಿದರು. ಹಲವು ಆಂಬ್ಯುಲೆನ್ಸ್‌ಗಳು ವಾಹನಗಳ ನಡುವೆ ಸಿಲುಕಿಕೊಂಡು ಪರದಾಟ ನಡೆಸಿದವು. ಬಸ್‌ಗಳು, ಲಾರಿಗಳು, ಖಾಸಗಿ ವಾಹನಗಳು ಮತ್ತು ತುರ್ತು ಸೇವಾ ವಾಹನಗಳೂ ಕೆಲಕಾಲ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡವು.
ಬೀಚ್‌ಗೆ ಬಂದವರು ರಸ್ತೆಯಲ್ಲೇ ಬಾಕಿ: ಪಣಂಬೂರು ಬೀಚ್‌ಗೆ ಬಂದವರು ತೆರಳಲಾಗದೆ ರಸ್ತೆಯಲ್ಲೇ ಸಿಲುಕಿಕೊಂಡರು. ಹೊರ ರಾಜ್ಯ, ಜಿಲ್ಲೆಗಳಿಂದ ಬಂದವರೂ ವಾಹನ ದಟ್ಟಣೆ ತ್ರಾಸ ಅನುಭವಿಸಿದರು.
ಮಂಗಳೂರು ನಗರ ಹಾಗೂ ಬಂದರು ಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ಈಗಾಗಲೇ ಹೆಚ್ಚಿನ ಪ್ರಮಾಣದ ಸರಕು ವಾಹನ ಸಂಚಾರ ಇರುವುದರಿಂದ ಇಂತಹ ಭಾರೀ ಟ್ರೈಲರ್‌ಗಳ ಸಂಚಾರದ ವೇಳೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಇಂತಹ ಅತಿ ದೊಡ್ಡ ಗಾತ್ರದ ಸರಕು ಸಾಗಣೆ ವಾಹನಗಳಿಗೆ ಸಂಚಾರ ದಟ್ಟಣೆ ಕಡಿಮೆ ಇರುವ ಸಮಯದಲ್ಲಿ ಮಾತ್ರ ಅನುಮತಿ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 66ರ ಪಣಂಬೂರು ಬಳಿ ಬೃಹತ್ ಟ್ರಕ್ ಸಿಲುಕಿಕೊಂಡ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ವಾಹನಗಳ ಪ್ರಯಾಣಿಕರು ಸಮಸ್ಯೆ ಅನುಭವಿಸಿದರು. ಸಂಚಾರ ಪೊಲೀಸರು ತುರ್ತು ವಾಹನಗಳ ಸಂಚಾರಕ್ಕೆ ಪ್ರಯತ್ನ ಮಾಡಿದ್ದಾರೆ. ಸಮಸ್ಯೆ ಉಂಟು ಮಾಡಿದ ಟ್ರಕ್ ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.
ರವಿಶಂಕರ್ ಕೆ.
ಡಿಸಿಪಿ, ಅಪರಾಧ ಮತ್ತು ಸಂಚಾರ ವಿಭಾಗ