ಜಿಲ್ಲೆ

ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ, ಹೂವಿನಹಡಗಲಿಯಲ್ಲಿ ವಿಜಯಪುರದ ಗುರುಶಾಂತವೀರ ಸ್ವಾಮೀಜಿ ಆಶೀರ್ವಚನ

ಹೂವಿನಹಡಗಲಿ: ದುಂದುವೆಚ್ಚಕ್ಕೆ ಕಡಿವಾಣ ಹಾಕುವುದೇ ಸಾಮೂಹಿಕ ವಿವಾಹಗಳ ಉದ್ದೇಶವಾಗಿದೆ ಎಂದು ವಿಜಯಪುರದ ಇಟ್ಟಿಗಿ ಮಠದ ಗುರುಶಾಂತವೀರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಶ್ರೀ ಗವಿಸಿದ್ಧೇಶ್ವರ ಜಾತ್ರೆ ಪ್ರಯುಕ್ತ ಪಟ್ಟಣದ ಗವಿಸಿದ್ಧೇಶ್ವರ ಮಠದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜದಲ್ಲಿ ಮಠಗಳು ಸಂಸ್ಕೃತಿ, ಸಂಸ್ಕಾರ, ಶಿಕ್ಷಣ ಕಲಿಸುತ್ತವೆ. ಎಲ್ಲ ವರ್ಗದ ಜನರ ಹಿತ ಕಾಪಾಡುತ್ತವೆ. ಸಮಾಜಕ್ಕೆ ಮಠಗಳ ಕೊಡುಗೆ ಅಪಾರವಾಗಿದೆ. ಶ್ರೀ ಗವಿಸಿದ್ಧೇಶ್ವರ ಮಠದ ಡಾ.ಹಿರಿಶಾಂತವೀರ ಸ್ವಾಮೀಜಿ ಭಕ್ತರ ಮನದಲ್ಲಿ ನೆಲೆಸಿದ್ದಾರೆ. ಅವರು ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿದ್ದಾರೆ ಎಂದರು.

ನೀಲಗುಂದ ಮಠದ ಚನ್ನಬಸವ ಶಿವಯೋಗಿಗಳು ಮಾತನಾಡಿ, ಮಠಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಿಗೆ ಭಕ್ತರ ಸಹಕಾರ ಅಗತ್ಯವಿದೆ. ಅದರಂತೆ ಶ್ರೀ ಗವಿಸಿದ್ಧೇಶ್ವರ ಮಠಕ್ಕೆ ಭಕ್ತರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.

ಅರಸಿಕೇರಿ ಮಠದ ಕೋಲಶಾಂತೇಶ್ವರ ಸ್ವಾಮೀಜಿ, ಉತ್ತಂಗಿ ಮಠದ ಸೋಮಶಂಕರ ಸ್ವಾಮೀಜಿ, ಮೈನಹಳ್ಳಿಯ ಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ನಾಗತಿಬಸಾಪುರ ಗಿರಿರಾಜ ಹಾಲಸ್ವಾಮೀಜಿ, ಹಬೊಹಳ್ಳಿಯ ಹಾಲಶಂಕರ ಸ್ವಾಮೀಜಿ, ಗವಿಮಠದ ಡಾ.ಹಿರಿಶಾಂತವೀರ ಸ್ವಾಮೀಜಿ, ಅಗಡಿಯ ಗುರುಸಿದ್ಧ ಶಿವಯೋಗಿಗಳು ಸಾನ್ನಿಧ್ಯವಹಿಸಿದ್ದರು.

ಹರಪನಹಳ್ಳಿಯ ನಿವೃತ್ತ ಶಿಕ್ಷಕಿ ಎಚ್.ಎಂ. ಲಲಿತಮ್ಮ ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ಇಂಜಿನಿಯರ್ ಓದೋ ಗಂಗಪ್ಪ, ನಿವೃತ್ತ ಶಿಕ್ಷಕ ಎಚ್.ಎಂ.ಬೆಟ್ಟಯ್ಯ, ಕೋಡಿಹಳ್ಳಿ ಮುದುಕಪ್ಪ, ಜಕಣಾಚಾರಿ ಪ್ರಶಸ್ತಿ ಪುರಸ್ಕೃತ ಹಂಸಾನಂದಾಚಾರ್ಯ, ಎ.ಎಂ.ಹಾಲಯ್ಯ ಶಾಸ್ತ್ರಿ ಇತರರಿದ್ದರು. ಐದು ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮಾನಿಹಳ್ಳಿ ಪುರವರ್ಗ ಮಠದ ಮಳೇಯೋಗೀಶ್ವರ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಬೆಳಗ್ಗೆ ಶಿವದೀಕ್ಷೆ ಅಯ್ಯಚಾರ ಕಾರ್ಯಕ್ರಮ ನಡೆಯಿತು.