ಶಿರ್ವ: ಇಲ್ಲಿನ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಮತ್ತು ಮಹಿಳಾ ಮಂಡಲ ಆಶ್ರಯದಲ್ಲಿ ಭಾನುವಾರ 22ನೇ ವರ್ಷದ ಸಾಮೂಹಿಕ ಶ್ರೀ ಅಶ್ವತ್ಥ ಪೂಜೆ ಹಾಗೂ ಸಾರ್ವಜನಿಕ ಶ್ರೀಗಣೇಶೋತ್ಸವ ವೇದಿಕೆಯಲ್ಲಿ ನಡೆದ ಶ್ರೀಸತ್ಯನಾರಾಯಣ ಪೂಜಾ ಧಾರ್ಮಿಕ ಅನುಷ್ಠಾನ ಶ್ರೀನಿವಾಸ ಭಟ್ ಶಿರ್ವ ಮತ್ತು ರಾಮದಾಸ ಭಟ್ ಶಿರೂರು ನೇತೃತ್ವದಲ್ಲಿ ಜರುಗಿತು.
ಶಿರ್ವ ಮಹಿಳಾ ಸೌಧದಲ್ಲಿ ಜರುಗಿದ ಯುಗಾದಿ ಸಂಭ್ರಮ ಸಭಾ ಕಾರ್ಯಕ್ರಮವನ್ನು ಹಿರಿಯರಾದ ಗಾಂದೊಟ್ಯ ರಾಧಾ, ಲಕ್ಷ್ಮಣ ಸೇರಿಗಾರ ದಂಪತಿ ಉದ್ಘಾಟಿಸಿದರು. ಅವರಿಗೆ ನೂತನ ವರ್ಷದ ಯುಗಾದಿ ಸಂಭ್ರಮ ಗೌರವ ನೀಡಿ ಅಭಿನಂದಿಸಲಾಯಿತು.
ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಅಧ್ಯಕ್ಷ ವಿಠಲ ಬಿ.ಅಂಚನ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ, ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಧಾರ್ಮಿಕ ಉಪನ್ಯಾಸ ನೀಡಿದರು. ಗಣೇಶೋತ್ಸವ ಸಮಿತಿ ಉಪಾಧ್ಯಕ್ಷ ಗೋವಿಂದ ಕುಂದರ್, ಕಾರ್ಯದರ್ಶಿ ವಿಷ್ಣುಮೂರ್ತಿ ಸರಳಾಯ, ಪ್ರಭಾಕರ ರಾವ್ ಉಪಸ್ಥಿತರಿದ್ದರು.
ಯುಗಾದಿ(ವಿಷು)ಕಣಿಯನ್ನು ಮಹಿಳಾ ಮಂಡಲ ಅಧ್ಯಕ್ಷೆ ಡಾ.ಸ್ಫೂರ್ತಿ ಪಿ.ಶೆಟ್ಟಿ ಉದ್ಘಾಟಿಸಿದರು. ವಸಂತಿ ಗೋಪಾಲ್, ಮಾಲತಿ ಮೂಡಿತ್ತಾಯ, ಪುಷ್ಪಾ ಆಚಾರ್ಯ, ಪ್ರಮೀಳಾ ಆಚಾರ್ಯ ಯುಗಾದಿ ಗೀತೆ ಹಾಡಿದರು. ಅನಂತ ಮೂಡಿತ್ತಾಯ ನಿರೂಪಿಸಿದರು. ಕಿಶೋರ್ ಆಚಾರ್ಯ ವಂದಿಸಿದರು.