ಕಿಕ್ಕೇರಿ: ಇಲ್ಲಿನ ವಿಪ್ರ ಬಾಂಧವ ಸೇವಾ ಸಮಿತಿ ವತಿಯಿಂದ ಶ್ರಾವಣ ಮಾಸದ ಶ್ರವಣ ನಕ್ಷತ್ರದ ದಿನವಾದ ಶನಿವಾರ ಉಪಾಕರ್ಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಋಗ್ವೇದ ಪಂಥದವರು ಸುಬ್ಬರಾಯರ ಛತ್ರದಲ್ಲಿ ಸಮ್ಮಿಲನವಾಗಿ ವೇದಬ್ರಹ್ಮ ಅನಿಲ್‌ಶಾಸ್ತ್ರಿ ಮಾರ್ಗದರ್ಶನದಲ್ಲಿ ಯಜ್ಞೋಪವಿತ(ಜನಿವಾರ) ಬದಲಾಯಿಸಿಕೊಂಡರು. ಶ್ರಾವಣ ಮಾಸದ ಶ್ರವಣ ನಕ್ಷತ್ರದಲ್ಲಿ ಋಗ್ವೇದಿಗಳು ಹಾಗೂ ಹುಣ್ಣಿಮೆಯಲ್ಲಿ ಯರ್ಜುವೇದಿಗಳು ಹೊಸದಾಗಿ ಯಜ್ಞೋಪಧಾರಣೆ ಮಾಡುವ ಕ್ರಿಯೆ ಇದ್ದು, ಈ ಬಾರಿ ಶ್ರವಣ ನಕ್ಷತ್ರ, ಹುಣ್ಣಿಮೆ 2ದಿನಗಳು ಒಟ್ಟಿಗೆ ಸೇರಿ ಅತ್ಯಂತ ಪವಿತ್ರ ದಿನವೆಂದು 2 ವೇದಧಾರಿಗಳು ಯಜ್ಞೋಪವಿತ ಧಾರಣೆ ಮಾಡಲು ಮುಂದಾದರು.
ಸಪ್ತಋಷಿಗಳಾದ ಗೌತಮ, ಅತ್ರೇಯ, ಭಾರಧ್ವ್ವಾಜ, ಕಶ್ಯಪ, ಜಮದಗ್ನಿ, ವಶಿಷ್ಟ, ವಿಶ್ವಾಮಿತ್ರ ಮಹರ್ಷಿಗಳನ್ನು ಪೂಜಿಸಲಾಯಿತು. ಹೋಮ-ಹವನಾದಿಗಳನ್ನು ಹಮ್ಮಿಕೊಂಡು ವಿವಿಧ ಫಲತಾಂಬೂಲ, ನೈವೇದ್ಯಗಳನ್ನು ಹೋಮಕ್ಕೆ ಅರ್ಪಿಸಿ ಋಷಿವರ್ಯರನ್ನು ಅವಾಹನೆ ಮಾಡಿಕೊಳ್ಳಲಾಯಿತು. ಯಜ್ಞೋಪವಿತವನ್ನು ಧಾರಣೆ ಮಾಡಲು ಆಶೀರ್ವಾದ ಪಡೆದುಕೊಂಡರು.
ಅಪವಿತ್ರವಾದ, ಅಪಾರಕರ್ಮದಂತಹ ಕಾರ್ಯಗಳಿಂದ ಮಲಿನವಾಗಿರುವುದನ್ನು ತೊಡೆದುಕೊಂಡು ಹೊಸದಾಗಿ ಯಜ್ಞೋಪವಿತ ಧಾರಣೆ ಮಾಡಿಕೊಂಡು ಪರಿಶುಭ್ರರಾಗುವುದಾಗಿ ಪ್ರತಿಜ್ಞೆ ಮಾಡಿದರು. ಪರಸ್ಪರ ಹೊಸದಾದ ಯಜ್ಞೋಪವಿತ ದಾನ ಮಾಡಿ ವೇದ ಮಂತ್ರದೊಂದಿಗೆ ಧಾರಣೆ ಮಾಡಿಕೊಂಡರು.
ಪಿತೃಗಳಿಗೆ ತರ್ಪಣ ಸಮರ್ಪಿಸಿದರು. ಮಹಾಮಂಗಳಾರತಿ ತೀರ್ಥ ಪ್ರಸಾದ ಸ್ವೀಕರಿಸಿದರು. ಹಳೆಯದಾದ ಯಜ್ಞೋಪವಿತವನ್ನು ಗಂಗೆಗೆ ವಿಸರ್ಜಿಸಿದರು.