ರಾಯಚೂರು: ಯೇಸುಕ್ರಿಸ್ತನ ಜನ್ಮದಿನವಾದ ಕ್ರಿಸ್‌ಮಸ್ ಹಬ್ಬವನ್ನು ಕ್ರೈಸ್ತರು ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಿ, ಸಿಹಿ ಹಂಚುವ ಮೂಲಕ ಶನಿವಾರ ಸಡಗರ, ಸಂಭ್ರಮದಿಂದ ಆಚರಿಸಿದರು. ನಗರದ ಮೆಥೋಡಿಸ್ಟ್, ಕ್ಯಾಥೋಲಿಕ್, ಅಗಾಪೆ ಸೇರಿದಂತೆ ವಿವಿಧ ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಲಾಯಿತು. ಚರ್ಚ್‌ಗಳಿಗೆ ದೀಪಾಲಂಕಾರ ನಡೆಸಿ ವಿವಿಧ ಪ್ರತಿಕೃತಿಗಳನ್ನು ಮಾಡಿ ಸಿಂಗರಿಸಲಾಗಿತ್ತು.
ಶಾಸಕ ಡಾ.ಶಿವರಾಜ ಪಾಟೀಲ್ ನಗರದ ಮೆಥೋಡಿಸ್ಟ್ ಚರ್ಚ್‌ನಲ್ಲಿ ಕೇಕ್ ಕತ್ತರಿಸಿ ಕ್ರಿಸ್‌ಮಸ್ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡು ಮಾತನಾಡಿ, ಯೇಸುವಿನ ಮಾರ್ಗದರ್ಶನದಲ್ಲಿ ನಡೆದಾಗ ನಮಗೆ ಸುಖ, ಶಾಂತಿ, ನೆಮ್ಮದಿ ದೊರೆಯುತ್ತದೆ. ಹೊಸ ಚರ್ಚ್ ನಿರ್ಮಾಣಕ್ಕೆ ಒಂದು ಕೋಟಿ ರೂ. ಅನುದಾನಕ್ಕೆ ಅನುಮೋದನೆ ನೀಡಲಾಗಿದ್ದು, ಶೀಘ್ರ ಬಿಡುಗಡೆ ಮಾಡಿಸಲಾಗುವುದು ಎಂದರು.
ಮಹಿಳೆಯರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಬಟ್ಟೆ ತೊಟ್ಟು ಚರ್ಚ್‌ಗಳಿಗೆ ಆಗಮಿಸಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ಕ್ರೈಸ್ತ ಧರ್ಮ ಗುರುಗಳು ಧರ್ಮ ಬೋಧನೆ ಮಾಡುವುದರ ಜತೆಗೆ ಸಾಮೂಹಿಕ ಪ್ರಾರ್ಥನೆ ನಡೆಸಿದರು. ಧರ್ಮಗುರುಗಳಾದ ಎ.ಜೋಸೆಫ್, ಎಸ್.ಡಿ.ಹನೋಕ್, ಎನ್.ಜನಾರ್ಧನ್, ಆರ್‌ಡಿಎ ಅಧ್ಯಕ್ಷ ವೈ.ಗೋಪಾಲರೆಡ್ಡಿ, ನಗರಸಭೆ ಸದಸ್ಯೆ ಡಿ.ಲಕ್ಷ್ಮಿ, ಮುಖಂಡರಾದ ರವೀಂದ್ರ ಜಲ್ದಾರ್, ಹರೀಶ ನಾಡಗೌಡ ಉಪಸ್ಥಿತರಿದ್ದರು.